Site icon Vistara News

Power point with HPK : ನಾನೂ ರಾಮ ಭಕ್ತೆ, ಮಂದಿರ ಕಟ್ಟಲು ಕಾಣಿಕೆ ಕೊಟ್ಟಿದ್ದೇನೆ ಎಂದ ಹೆಬ್ಬಾಳ್ಕರ್‌; ಹಾಗಿದ್ರೆ ಕೊಟ್ಟಿದ್ದೆಷ್ಟು?

Lakshmi Hebbalkar and Rama Mandir

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಬಲ ಮಹಿಳಾ ಶಕ್ತಿಯಾಗಿ ಹೊರಹೊಮ್ಮುತ್ತಿರುವವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar). ಅವರು ನಾನು ಕೂಡಾ ರಾಮ ಭಕ್ತೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ವಿಸ್ತಾರ ನ್ಯೂಸ್‌ನಲ್ಲಿ ನಡೆದ ಪವರ್‌ ಪಾಯಿಂಟ್‌ ವಿಥ್‌ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಅವರು ಮಾತನಾಡುತ್ತಾ ರಾಮ ಭಕ್ತಿಯನ್ನೂ ಬಡವರ ಕಡೆಗಿನ ಕಾಳಜಿಯನ್ನೂ ಸಮೀಕರಿಸಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಪ್ರಗತಿ, ಬೆಳಗಾವಿ ರಾಜಕಾರಣ, ಮುಂದಿನ ಲೋಕಸಭಾ ಚುನಾವಣೆ, ತಮ್ಮ ರಾಜಕೀಯ ಹೆಜ್ಜೆಗಳು, ಅದಕ್ಕೆ ಬೆಂಗಾವಲಾಗಿ ನಿಂತವರ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಯಾವುದೇ ಇಕಾನಮಿಸ್ಟ್‌, ತಿಳಿದವರು ಹೇಳುವ ಮಾತು ನೀವು ಮೀನು ಹಿಡಿದುಕೊಡುವುದಲ್ಲ, ಮೀನು ಹಿಡಿಯೋದನ್ನು ಕಲಿಸಬೇಕು ಅಂತ. ಅಂದರೆ ನೀವು ಅಕೌಂಟ್‌ಗೆ ಹಣ ಹಾಕುವ ಬದಲು, ನೀವು ಉದ್ಯೋಗಗಳನ್ನು ಕೊಡಬಹುದು, ಉದ್ಯಮಗಳನ್ನು ಸ್ಥಾಪಿಸಬಹುದಿತ್ತು. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದಿತ್ತು. ಕಾಂಗ್ರೆಸ್‌ ಶಾರ್ಟ್‌ ಕಟ್‌ ಹುಡುಕಿಕೊಂಡಿದೆ, ಜನರನ್ನು ಸೋಮಾರಿಗಳನ್ನಾಗಿ ಮಾಡಿದೆ ಅಂತ ಹೇಳಲಾಗ್ತಾ ಇದೆಯಲ್ಲಾ ಎಂಬ ಹರಿಪ್ರಕಾಶ್‌ ಕೋಣೆಮನೆ ಅವರ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್‌, ಅಯೋಧ್ಯೆ, ಇಂದಿರಾ ಗಾಂಧಿ, ಬಡತನ, ಭಾರತದ ಶಕ್ತಿ ಮೊದಲಾದ ಹಲವು ಅಂಶಗಳನ್ನು ಇಟ್ಟುಕೊಂಡು ವಾದ ಮಂಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಯ್ತು. ಯಾವ ಪರಿಸ್ಥಿತಿಯಿಂದ ಈಗ ಯಾವ ಪರಿಸ್ಥಿತಿಗೆ ಬಂದಿದೇವೆ ಎನ್ನುವುದನ್ನು ಗಮನಿಸಿ. ನಾವು ಬಡವರ ಬಗ್ಗೆ ಕಾಳಜಿ ಹೊಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಾವು ಶ್ರೀಮಂತ ತೆರಿಗೆಯನ್ನು ರದ್ದು ಮಾಡುವುದಿಲ್ಲ. ಶ್ರೀಮಂತರ ಸಾಲ ಮನ್ನಾ ಮಾಡುವುದಿಲ್ಲ ನಾವು. ನೀವು ದೇಶದ ಕಂಪನಿಗಳನ್ನು ಮಾರಾಟ ಮಾಡಿದ್ರೆ ನಿಮಗೆ ಓಕೆ, ಶ್ರೀಮಂತರ ಟ್ಯಾಕ್ಸ್‌ ಮನ್ನಾ ಮಾಡಿದರೆ ನಿಮಗೆ ಓಕೆ, ಬಡವರಿಗೆ ಏನಾದರೂ ಕೊಟ್ಟರೆ ಯಾಕೆ ಇಷ್ಟೊಂದು ಸಿಟ್ಟು? ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನಿಸಿದರು.

ನಾವು ಕೊಡುತ್ತಿರುವುದು ಯಾರಿಗೆ ಅಂತ ಒಮ್ಮೆ ನೋಡಿ..

ನಾವು ಕೊಡುತ್ತಿರುವುದು ಬಡವರಿಗೇರಿ, ಯಾವುದೋ ಗಲ್ಲಿಯಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಸೂಜಿಯಲ್ಲಿ ಹೂವು ಪೋಣಿಸಿ, ಪೋಣಿಸಿ ಐವತ್ತು ರೂ. ಕೂಡಾ ದುಡಿಯಲು ಕಷ್ಟಪಡುವ ಬಡ ಮಹಿಳೆಯರು, ಮಗುವನ್ನು ತೊಡೆಯಲ್ಲಿ ಮಲಗಿಸಿಕೊಂಡು ಹಣ್ಣು ಮಾರುವ ಹೆಣ್ಮಗಳು, ಬೀದಿ ಬದಿ ವ್ಯಾಪಾರ ಮಾಡುವವರು, ಪಂಕ್ಚರ್‌ ಹಾಕೋರು, ಹೀಗೆ ಪ್ರತಿಯೊಂದರಲ್ಲೂ ಹೆಣ್ಮಗಳಿದ್ದಾಳೆ. ಇಂಥವರ ಬಗ್ಗೆ ಯೋಚನೆ ಮಾಡಿ ನಾವು ಯೋಜನೆ ಕೊಟ್ಟಿದ್ದಕ್ಕೇ ಇಷ್ಟೆಲ್ಲ ಮಾತಾಡ್ತೀರಲ್ಲಾ…

ರಾಮ ಮಂದಿರ ಕಟ್ಟುವಾಗ ನಾನೂ ದೇಣಿಗೆ ಕೊಟ್ಟಿದ್ದೇನೆ..

ರಾಮ ಮಂದಿರ ಕಟ್ಟುವಾಗ ನಾನು ಆರೆಸ್ಸೆಸ್‌ನವರನ್ನು ಕರೆದು, ವಿಶ್ವ ಹಿಂದು ಪರಿಷತ್‌ನವರನ್ನು ಕರೆದು ಎರಡು ಲಕ್ಷ ರೂ. ಕೊಟ್ಟೆ, ಯಾಕೆಂದರೆ ನಾನು ರಾಮನ ಭಕ್ತಳು. ಇದನ್ನು ರಾಜಕಾರಣ ಅಂತ ಮಾಡಿಲ್ಲ. ಇವತ್ತು ಪ್ರಸಂಗ ಬಂತು ನಿಮ್ಮ ಮುಂದೆ ಹೇಳಿದೆ. ಅಷ್ಟು ಕೋಟಿ ಕೋಟಿ ಖರ್ಚು ಮಾಡಿ ಮಂದಿರ ಕಟ್ಟಿದ್ದಾರಲ್ಲಾ… ಅದರ ಹಿಂದಿರುವುದು ರಾಮನ ಮೇಲಿನ ಭಕ್ತಿ ತಾನೇ? ಕಾಂಗ್ರೆಸ್‌ ಪಕ್ಷ ಬಡವರ ಬಗ್ಗೆ ಭಕ್ತಿ ಇಟ್ಟುಕೊಂಡಿದೆ. ನಾವು ಯಾಕೆ ಕೊಡಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನ ಬಡತನ ನಿವಾರಣೆ ಪ್ರೋಗ್ರಾಂ ಶಾಶ್ವತವೇ?

ಹರಿಪ್ರಕಾಶ್‌ ಕೋಣೆಮನೆ ಅವರು ಕೇಳಿದ ಪ್ರಶ್ನೆ: ಕಾಂಗ್ರೆಸ್‌ ಸುಮಾರು 60-65 ವರ್ಷ ಆಡಳಿತ ಮಾಡಿತು. ಇಂದಿರಾ ಗಾಂಧಿ ಅವರು ಬಡತನ ನಿವಾರಣೆಗೆ 20 ಅಂಶಗಳ ಕಾರ್ಯಕ್ರಮ ಹಮ್ಮಿಕೊಂಡಿತು. ನಾವು ಇವತ್ತಿಗೂ ಅಕ್ಕಿ ಕೊಡಬೇಕು, ತಿಂಗಳಿಗೆ ಎರಡು ಸಾವಿರ ಹಣ ಕೊಡಬೇಕು ಅಂತ ಹೇಳುವುದಾದರೆ ಆ ಯೋಜನೆಗಳು ಫಲ ನೀಡಿಲ್ವಾ? ಹಾಗಿದ್ದರೆ ನಮ್ಮ ಬಡತನ ನಿವಾರಣೆಯ ವ್ಯಾಖ್ಯಾನ ಏನು ಹಾಗಿದ್ದರೆ?

ಲಕ್ಷ್ಮಿ ಹೆಬ್ಬಾಳ್ಕರ್‌ ನೀಡಿದ ಉತ್ತರ: ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 35 ಕೋಟಿ, ಈಗ ಅದು 135 ಕೋಟಿ ಆಗಿದೆ. ಆಗ ನಮ್ಮಲ್ಲಿ ಒಂದು ಸೂಜಿಯನ್ನು ಮಾಡುವ ಫ್ಯಾಕ್ಟರಿ ಇರಲಿಲ್ಲ. ಈಗ ಚಂದ್ರಯಾನ ಮಾಡುವ ಹಂತಕ್ಕೆ ಬಂದಿದ್ದೇವೆ. ಎಲ್ಲ ಹಂತದಲ್ಲೂ ಬೆಳೆದಿದ್ದೇವೆ. ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗಿವೆ. ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕಿ ಮುನ್ನೂರು ವರ್ಷಗಳಾಗಿವೆ. ನಾವು ಇನ್ನೇನು ನಂಬರ್‌ 3, ನಂಬರ್‌ 2 ಎನ್ನುವ ಹಂತಕ್ಕೆ ಏರಲಿದ್ದೇವೆ. ಇದನ್ನು ಬೆಳವಣಿಗೆ ಅನ್ನಲ್ವಾ?

ಇದನ್ನೂ ಓದಿ: Power point with HPK : ನಾನು ಯಾರನ್ನೂ ಅವಲಂಬಿಸಿಲ್ಲ, I am Independent; ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟ ನುಡಿ

Exit mobile version