Site icon Vistara News

Power point with HPK : ನಾನು ಯಾರನ್ನೂ ಅವಲಂಬಿಸಿಲ್ಲ, I am Independent; ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟ ನುಡಿ

Lakshmi Hebbalkar Power point with HPK

ಬೆಂಗಳೂರು: ನನ್ನ ಖಾತೆಯನ್ನು ನಿಭಾಯಿಸುವಲ್ಲಿ, ಆಡಳಿತದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ನಾನು ಯಾರನ್ನು ಅವಲಂಬಿಸಿಲ್ಲ. ಈ ವೇದಿಕೆಯಲ್ಲಿ ನಿಮ್ಮ ಮುಂದೆ ಒಂದು ವಿಚಾರವನ್ನು ಅತ್ಯಂತ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಐ ಯಾಮ್‌ ನಾಟ್‌ ಡಿಪೆಂಡೆಂಟ್‌ ಆನ್‌ ಎನಿಬಡಿ. ಹಿಂದೆಯೂ ಅಷ್ಟೆ, ಈಗಲೂ ಅಷ್ಟೆ, ಮುಂದೆಯೂ ಅಷ್ಟೆ- ಹೀಗೆಂದು ಗಟ್ಟಿ ಧ್ವನಿಯಲ್ಲಿ ಮಾತನಾಡಿದರು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar).

ಅವರು ವಿಸ್ತಾರ ನ್ಯೂಸ್‌ನಲ್ಲಿ ನಡೆದ ಪವರ್‌ ಪಾಯಿಂಟ್‌ ವಿಥ್‌ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಈ ಮಾತನ್ನು ಸ್ಪಷ್ಟಪಡಿಸಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಪ್ರಗತಿ, ಬೆಳಗಾವಿ ರಾಜಕಾರಣ, ಮುಂದಿನ ಲೋಕಸಭಾ ಚುನಾವಣೆ, ತಮ್ಮ ರಾಜಕೀಯ ಹೆಜ್ಜೆಗಳು, ಅದಕ್ಕೆ ಬೆಂಗಾವಲಾಗಿ ನಿಂತವರ ಬಗ್ಗೆ ಮುಕ್ತವಾಗಿ ಮಾತನಾಡಿದರು.

ʻʻನಾನು ಇದುವರೆಗೂ ಒಂಟಿಯಾಗಿಯೇ ರಾಜಕಾರಣ ಮಾಡಿದವಳು. ನಮ್ಮ ಕುಟುಂಬದ ಮೊದಲ ಪೀಳಿಗೆಯ ರಾಜಕಾರಣಿ ನಾನು. ಸಾಮಾನ್ಯ ಕಾರ್ಯಕರ್ತೆಯಿಂದ, ಈ ಮಟ್ಟಕ್ಕೆ ಬಂದಿದ್ದೇನೆ. ಅದು ನನ್ನ ತಮ್ಮನೇ ಇರಬಹುದು, ನನ್ನ ಮಗನೇ ಇರಬಹುದು. ನಾನು ಯಾರ ಮೇಲೂ ಅವಲಂಬಿಸಿಲ್ಲ. ನನಗೆ ಶಕ್ತಿ ಇದೆ, ನನಗೆ ತಕ್ಕಮಟ್ಟಿಗೆ ಬುದ್ಧಿಯೂ ಇದೆ. ನನ್ನ ಇಲಾಖೆಯನ್ನು ನಾನು ನಡೆಸುತ್ತೇನೆʼʼ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಹಿರಿಯ ನಾಯಕರನ್ನು ನೆನಪಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಈಗ ಜತೆಯಾಗಿ ಕೆಲಸ ಮಾಡುತ್ತಿರುವ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಮತ್ತು ಪುತ್ರನ ಸಹಕಾರವನ್ನು ನೆನೆಯುತ್ತಲೇ ಯಾರೂ ಕೂಡಾ ತಮ್ಮನ್ನು ಓವರ್‌ ಟೇಕ್‌ ಮಾಡುವುದಾಗಲೀ ಇಲಾಖೆಯನ್ನು ಟೇಕ್‌ ಓವರ್‌ ಮಾಡುವುದಾಗಲೀ ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಸಹೋದರ ಚನ್ನರಾಜ್‌ ಹಟ್ಟಿಹೊಳಿ ಅವರು ಆಡಳಿತದಲ್ಲಿ ಮೂಗು ತೂರಿಸುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ನೋಡಿ ಅವನು ಕೂಡಾ ಎಂಎಲ್‌ಸಿ. ಇಲಾಖೆಯ ಮಂತ್ರಿಗಳನ್ನು ಶಾಸಕರು ಹೇಗೆ ಭೇಟಿ ಮಾಡಲು ಬರ್ತಾರೋ ಹಾಗೆ ಅವನೂ ಬರ್ತಾನೆ. ನೀವೇ ಯೋಚನೆ ಮಾಡಿ, ಒಬ್ಬ ತಮ್ಮ, ಅಕ್ಕನ ಊಟಕ್ಕಾಗಲೀ, ಒಂದೇ ಗಾಡಿಯಲ್ಲಿ ಪ್ರಯಾಣಿಸುವುದಾಗಲೀ ತಪ್ಪಾ? ನಮ್ದು ಜಾಯಿಂಟ್‌ ಫ್ಯಾಮಿಲಿ. ನಾವು ಜತೆಯಾಗಿ ಬರುವುದು ಹೋಗುವುದಕ್ಕೂ ಹೀಗೆ ವ್ಯಾಖ್ಯಾನ ಮಾಡಿದರೆ ಹೇಗೆ ಎಂದು ಕೇಳಿದರು.

ಗೃಹಲಕ್ಷ್ಮಿ ಯೋಜನೆ ಜಾರಿ ತಡ ಯಾಕೆ? ಸರ್ವರ್‌ ಸಮಸ್ಯೆ ಯಾಕಾಗ್ತಿದೆ?

ಗೃಹ ಲಕ್ಷ್ಮಿ ಯೋಜನೆ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಜಾರಿಗೊಳ್ಳಬೇಕಾಗಿತ್ತು, ತಡ ಆಯಿತು ಅನಿಸುತ್ತಿಲ್ಲವೇ? ಸರ್ವರ್‌ ಸಮಸ್ಯೆ ಕಾಡುತ್ತಿದೆ, ಇಲಾಖೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರಲಿಲ್ಲವೇ? ಎಂಬ ಪ್ರಶ್ನೆಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಉತ್ತರ ನೀಡಿದರು.

ಗೃಹಲಕ್ಷ್ಮಿ ಯೋಜನೆಗೆ ಈ ವರ್ಷ 17000 ಕೋಟಿ ರೂ ಬಜೆಟ್‌ ಇಟ್ಟಿದ್ದೇವೆ. ಮುಂದಿನ ವರ್ಷ ಅದು 34000 ಕೋಟಿ ರೂ. ಆಗಬಹುದು. ಗೃಹಿಣಿಯರ ಖಾತೆಗೆ ನೇರವಾಗಿ ಹಣವನ್ನು ಹಾಕುವ ಈ ಯೋಜನೆ ಇದು ರಾಜ್ಯದಲ್ಲಿ ಮೊದಲು ಮಾತ್ರವಲ್ಲ, ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಮೊದಲು. ಈ ಯೋಜನೆಯನ್ನು ಜಾರಿಗೊಳಿಸುವಾಗ ಬಹಳಷ್ಟು ಸಿದ್ಧತೆಗಳನ್ನು, ಯೋಚನೆಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಸ್ವಲ್ಪ ತಡವಾಗಿದೆ. ಇನ್ನು ಸರ್ವರ್‌ ಸಮಸ್ಯೆ ಎನ್ನುವುದು ಅಷ್ಟರ ಮಟ್ಟಿಗೆ ಗಮನಕ್ಕೆ ಬಂದಿಲ್ಲ. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಕೆಲವು ಕಡೆ ಸ್ವಲ್ಪ ಮಟ್ಟಿಗೆ ಡಾಟಾ ಸಮಸ್ಯೆ ಎದುರಾಗಿತ್ತು. ಇದಕ್ಕೆ ವೈರಸ್‌ ಸಮಸ್ಯೆ, ಕೆಲವು ಕಡೆ ಮಳೆಯ ಸಮಸ್ಯೆಯಿಂದ ಹೀಗಾಗಿದೆ ಬಿಟ್ಟರೆ ಬೇರಾವ ತಾಂತ್ರಿಕ ಸಮಸ್ಯೆಯೂ ಇಲ್ಲ. ಉಳಿದಂತೆ ಎಲ್ಲವೂ ಸ್ಮೂತ್‌ ಆಗಿ ಹೋಗುತ್ತಿದೆ. 1.28 ಕೋಟಿ ಕುಟುಂಬಗಳಿವೆ. ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿರುವ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿದಾರರಲ್ಲದ ಕುಟುಂಬಗಳು ಗೃಹ ಲಕ್ಷ್ಮಿ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ಆಧಾರ್‌ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌, ಪಡಿತರ ಚೀಟಿಯಲ್ಲಿರುವ ಮೊಬೈಲ್‌ ನಂಬರ್‌, ಚಾಲನೆಯಲ್ಲಿರುವ ಮೊಬೈಲ್‌ ನಂಬರ್‌ ಹೊಂದಿರುವ 88 ಲಕ್ಷ ಮಂದಿಗೆ ಸಂದೇಶವನ್ನು ನೀಡಿದ್ದೇವೆ ಎಂದರು.

ಯಜಮಾನಿಯನ್ನು ನಿರ್ಧರಿಸುವುದು ಸಿದ್ದರಾಮಯ್ಯ, ಹೆಬ್ಬಾಳ್ಕರ್‌ ಅಲ್ಲ

ಗೃಹಲಕ್ಷ್ಮಿ ಯೋಜನೆ ಕುಟುಂಬಗಳ ನಡುವೆ ಜಗಳ ಹಚ್ಚುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಅವರು, ಗೃಹಲಕ್ಷ್ಮಿ ಯೋಜನೆ ಮನೆಯ ಯಾವ ಹೆಣ್ಮಗಳಿಗೆ ಸಿಗಬೇಕು ಎನ್ನುವ ವಿಚಾರದಲ್ಲಿ ನಾವು ಜಗಳ ಹಚ್ಚುವ ಪ್ರಶ್ನೆಯೇ ಇಲ್ಲ. ಪ್ರಿಯಾಂಕಾ ಗಾಂಧಿಯವರು ಗೃಹಲಕ್ಷ್ಮಿ ಯೋಜನೆಯನ್ನು ಅರಮನೆ ಮೈದಾನದಲ್ಲಿ ಘೋಷಣೆ ಮಾಡಿದ ದಿನವೇ ಈ ಯೋಜನೆಯಡಿ ಮನೆಯ ಯಜಮಾನಿಗೆ ನಾವು ಹಣ ಕೊಡುತ್ತೇವೆ ಎಂದು ಹೇಳಿದ್ದೇವೆ. ಯಾವ ಮನೆಯ ಪಡಿತರ ಚೀಟಿಯಲ್ಲಿ ಯಾರನ್ನು ಮನೆಯ ಯಜಮಾನಿ ಎಂದು ನಮೂದು ಮಾಡಲಾಗಿದೆಯೋ ಅವರಿಗೆ ಈ ಹಣ ಸಿಗುತ್ತದೆ. ಮನೆಯ ಯಜಮಾನಿ ಎನ್ನುವುದು ಈಗಲ್ಲ, ಪಡಿತರ ಚೀಟಿ ಮಾಡಿದಾಗಲೇ ನಮೂದಾಗಿರುತ್ತದೆ. ಅದು ಹತ್ತು ವರ್ಷದ ಹಿಂದಿರಬಹುದು, ಐದು ವರ್ಷದ ಹಿಂದೆ ಇರಬಹುದು. ಯಜಮಾನಿ ಎಂದು ನಿರ್ಧರಿಸಿದ್ದು ಕುಟುಂಬವೇ ಹೊರತು ಸಿದ್ದರಾಮಯ್ಯ ಸರ್‌ ಅಲ್ಲ, ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡಾ ಅಲ್ಲ.

ಈ ಯೋಜನೆ ಲೋಕಸಭಾ ಚುನಾವಣೆವರೆಗೆ ಮಾತ್ರ ಇರುತ್ತದೆ ಎನ್ನುವುದು ಬಿಜೆಪಿಯವರ ಭ್ರಮೆ. ಅವರು ಮೊದಲು ಈ ಯೋಜನೆಯ ಅನುಷ್ಠಾನ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದರು.

ಬಡವರಿಗೆ ಸಹಕಾರ ನೀಡಿದರೆ ನಿಮಗೆ ಯಾಕೆ ಇಷ್ಟೊಂದು ಸಿಟ್ಟು?

ನೀವು ದೇಶದ ಕಂಪನಿಗಳನ್ನು ಮಾರಾಟ ಮಾಡಿದ್ರೆ ನಿಮಗೆ ಓಕೆ, ಶ್ರೀಮಂತರ ಟ್ಯಾಕ್ಸ್‌ ಮನ್ನಾ ಮಾಡಿದರೆ ನಿಮಗೆ ಓಕೆ, ಬಡವರಿಗೆ ಏನಾದರೂ ಕೊಟ್ಟರೆ ಯಾಕೆ ಇಷ್ಟೊಂದು ಸಿಟ್ಟು? ನಾವು ಕೊಡುತ್ತಿರುವುದು ಬಡವರಿಗೇರಿ, ಯಾವುದೋ ಗಲ್ಲಿಯಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಸೂಜಿಯಲ್ಲಿ ಹೂವು ಪೋಣಿಸಿ, ಪೋಣಿಸಿ ಐವತ್ತು ರೂ. ಕೂಡಾ ದುಡಿಯಲು ಕಷ್ಟಪಡುವ ಬಡ ಮಹಿಳೆಯರು, ಮಗುವನ್ನು ತೊಡೆಯಲ್ಲಿ ಮಲಗಿಸಿಕೊಂಡು ಹಣ್ಣು ಮಾರುವ ಹೆಣ್ಮಗಳು, ಬೀದಿ ಬದಿ ವ್ಯಾಪಾರ ಮಾಡುವವರು, ಪಂಕ್ಚರ್‌ ಹಾಕೋರು, ಹೀಗೆ ಪ್ರತಿಯೊಂದರಲ್ಲೂ ಹೆಣ್ಮಗಳಿದ್ದಾಳೆ. ಇಂಥವರ ಬಗ್ಗೆ ಯೋಚನೆ ಮಾಡಿ ನಾವು ಯೋಜನೆ ಕೊಟ್ಟಿದ್ದಕ್ಕೇ ಇಷ್ಟೆಲ್ಲ ಮಾತಾಡ್ತೀರಲ್ಲಾ… ಎಂದು ಗ್ಯಾರಂಟಿ ಯೋಜನೆಗಳ ಟೀಕೆಗೆ ಉತ್ತರಿಸಿದರು.

ನಾನೂ ರಾಮ ಭಕ್ತಳೇ, ಮಂದಿರ ಕಟ್ಟಲು 2 ಲಕ್ಷ ಕೊಟ್ಟಿದ್ದೇನೆ

ರಾಮ ಮಂದಿರ ಕಟ್ಟುವಾಗ ನಾನು ಆರೆಸ್ಸೆಸ್‌ನವರನ್ನು ಕರೆದು, ವಿಶ್ವ ಹಿಂದು ಪರಿಷತ್‌ನವರನ್ನು ಕರೆದು ಎರಡು ಲಕ್ಷ ರೂ. ಕೊಟ್ಟೆ, ಯಾಕೆಂದರೆ ನಾನು ರಾಮನ ಭಕ್ತಳು. ಇದನ್ನು ರಾಜಕಾರಣ ಅಂತ ಮಾಡಿಲ್ಲ. ಇವತ್ತು ಪ್ರಸಂಗ ಬಂತು ನಿಮ್ಮ ಮುಂದೆ ಹೇಳಿದೆ. ಅಷ್ಟು ಕೋಟಿ ಕೋಟಿ ಖರ್ಚು ಮಾಡಿ ಮಂದಿರ ಕಟ್ಟಿದ್ದಾರಲ್ಲಾ… ಅದರ ಹಿಂದಿರುವುದು ಭಕ್ತಿ ತಾನೇ? ಕಾಂಗ್ರೆಸ್‌ ಪಕ್ಷ ಬಡವರ ಬಗ್ಗೆ ಭಕ್ತಿ ಇಟ್ಟುಕೊಂಡಿದೆ.

ನಾವೀಗ ಜಗತ್ತಿನಲ್ಲೇ ನಂಬರ್‌ 3 ಸನಿಹದಲ್ಲಿದ್ದೇವೆ, ಇದು ಬೆಳವಣಿಗೆ ಅಲ್ವಾ?

ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 35 ಕೋಟಿ, ಈಗ ಅದು 135 ಕೋಟಿ ಆಗಿದೆ. ಆಗ ನಮ್ಮಲ್ಲಿ ಒಂದು ಸೂಜಿಯನ್ನು ಮಾಡುವ ಫ್ಯಾಕ್ಟರಿ ಇರಲಿಲ್ಲ. ಈಗ ಚಂದ್ರಯಾನ ಮಾಡುವ ಹಂತಕ್ಕೆ ಬಂದಿದ್ದೇವೆ. ಎಲ್ಲ ಹಂತದಲ್ಲೂ ಬೆಳೆದಿದ್ದೇವೆ. ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗಿವೆ. ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕಿ ಮುನ್ನೂರು ವರ್ಷಗಳಾಗಿವೆ. ನಾವು ಇನ್ನೇನು ನಂಬರ್‌ 3, ನಂಬರ್‌ 2 ಎನ್ನುವ ಹಂತಕ್ಕೆ ಏರಲಿದ್ದೇವೆ. ಇದನ್ನು ಬೆಳವಣಿಗೆ ಅನ್ನಲ್ವಾ?

ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟ ನಿಖರ ಅಭಿಪ್ರಾಯಗಳು

  1. ವಯಸ್ಸು ಮತ್ತು ಅನುಭವದಲ್ಲಿ ಸತೀಶ್‌ ಜಾರಕಿಹೊಳಿ ಅವರು ತುಂಬ ದೊಡ್ಡವರು. ಅವರ ಹಿಂದಿನಿಂದ ನಾನು ಬೆಳೆಯುತ್ತಿದ್ದೇನೆ. ನನಗೆ ನನ್ನದೇ ಆದ ಸ್ಥಾನಮಾನ ಇದೆ.
  2. ಬೆಳಗಾವಿ ಬಿಟ್ಟು ಉಡುಪಿ ಜಿಲ್ಲಾ ಉಸ್ತುವಾರಿ ನೀಡಿದ್ದು ನನಗೆ ಆಗಿರುವ ಹಿನ್ನಡೆ ಅಲ್ಲ, ಇದು ಕಲಿಯಲು ಸಿಕ್ಕಿರುವ ಅವಕಾಶ.
  3. ನನ್ನನ್ನು ಸೋಲಿಸುತ್ತೇನೆ ಎಂದು ಶಪಥ ಮಾಡಿದ್ದು ರಮೇಶ್‌ ಜಾರಕಿಹೊಳಿ. ನಾನ್ಯಾವತ್ತೂ ಅವರ ವಿರುದ್ಧ ಮಾತಾಡಿಲ್ಲ. ಈಗ ಎದುರು ಸಿಕ್ಕಿದರೂ ಹಲೋ ಎಂದರೆ ಹಲೋ ಅನ್ನುತ್ತೇನೆ.
  4. ನಾನು ತುಂಬ ವಿಶ್ವಾಸ ಹೊಂದಿದ್ದೇನೆ ಸರ್‌.. ಐದು ಗ್ಯಾರಂಟಿಗಳು, ನುಡಿದಂತೆ ನಡೆದ ಸರ್ಕಾರ, ಸಿದ್ದರಾಮಯ್ಯನವರ ಜನಪ್ರಿಯತೆ, ಡಿ.ಕೆ. ಶಿವಕುಮಾರ್‌ ಅವರ ಸಂಘಟನಾ ಶಕ್ತಿಯಿಂದ ಖಂಡಿತವಾಗಿಯೂ ನಾವು ಉಡುಪಿಯಲ್ಲೂ ಗೆಲ್ತೀವಿ, ಬೆಳಗಾವಿ, ಚಿಕ್ಕೋಡಿಯಲ್ಲೂ ಗೆಲ್ತೀವಿ.
  5. ನನ್ನ ಮಗನ ಚುನಾವಣಾ ಸ್ಪರ್ಧೆ ಬಗ್ಗೆ ಈಗಲೇ ಏನೂ ಹೇಳೊಲ್ಲ.

ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಸೆಕ್ಯುಲರ್‌ ಅಲ್ಲ, ಗ್ಯಾರಂಟಿಯಿಂದ ಬದುಕೇ ಸರ್ವನಾಶ: ಸಿ.ಟಿ. ರವಿ

Exit mobile version