ಬೆಂಗಳೂರು: ಚುನಾವಣೆಗೆ ಮೊದಲು ಘೋಷಣೆ ಮಾಡಿದ್ದ ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ದೇಶದ ಭವ್ಯ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಗೆಲ್ಲಬೇಕು. ಮೋದಿ ವಿರುದ್ಧ ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಮೋದಿಯವರನ್ನು ಗೆಲ್ಲಿಸುವ ಮೂಲಕ ಭಾರತವನ್ನು ವಿಶ್ವ ಗುರು ಮಾಡುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಅವರು ಪವರ್ ಪಾಯಿಂಟ್ ವಿಥ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು, ಗ್ಯಾರಂಟಿ ಯೋಜನೆಗಳು, ಪಠ್ಯಪರಿಷ್ಕರಣೆ, ದೇಶದಲ್ಲಿ ನರೇಂದ್ರ ಮೋದಿ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿ, ಮತಾಂತರ, ಗೋ ಹತ್ಯೆ ನಿಷೇಧ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮನದಾಳದ ಮಾತುಗಳನ್ನು ಆಡಿದ್ದಾರೆ. ಅವರ ಸಂದರ್ಶನದ ಸಾರ ಇಲ್ಲಿದೆ.
ಸಿದ್ದರಾಮಯ್ಯ ಹೇಳಿದಂತೆ ಅಧಿಕಾರ ಬಿಟ್ಟು ಹೋಗಲಿ
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳಾಗಿದೆ. ಈಗಲೇ ನೀವು ಅವರ ವಿರುದ್ಧ ಆಕ್ರಮಣ ಪ್ರಾರಂಭಿಸಿದ್ದೀರಿ, ಸ್ವಲ್ಪ ಕಾಲಾವಕಾಶವನ್ನು ಕೊಡಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಸಿಂಹ, ವಿಧಾನಸಭಾ ಚುನಾವಣೆ ನಡೆಯುವ ಆರು ತಿಂಗಳ ಹಿಂದಿನಿಂದಲೇ ಕಾಂಗ್ರೆಸ್‌ನವರು ಒಂದೊಂದೇ ಗ್ಯಾರಂಟಿಗಳನ್ನು ಘೋಷಣೆ ಮಾಡಿಕೊಳ್ಳುತ್ತಾ ಬಂದರು. ಸಿಕ್ಕ ಸಿಕ್ಕ ವೇದಿಕೆಯಲ್ಲೆಲ್ಲ ಸಿದ್ದರಾಮಯ್ಯ ಅವರು, ” ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿಯೇ ಘೋಷಣೆ ಮಾಡಿದ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಘಂಟಾಘೋಷವಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ಐದು ಗ್ಯಾರಂಟಿಗಳನ್ನು ನಂಬಿಕೊಂಡು ಜನ ಮತ ಚಲಾವಣೆ ಮಾಡಿದ್ದಾರೆ. ಮೇ 20ಕ್ಕೆ ಸಿದ್ದರಾಮಯ್ಯ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು. ಪ್ರಮಾಣ ವಚನ ಸ್ವೀಕಾರ ಮಾಡಿ ಒಂದು ಕ್ಯಾಬಿನೆಟ್ ಸಭೆಯನ್ನೂ ಮಾಡಿದರು. ಅಂದು ಐದು ಗ್ಯಾರಂಟಿಯನ್ನು ಜಾರಿಗೆ ತರುವುದಾಗಿ ಸರ್ಕಾರಿ ಆದೇಶವನ್ನು ಮಾಡಿದರೆ ಹೊರತು 24 ಗಂಟೆಯೊಳಗೆ ಅನುಷ್ಠಾನ ಮಾಡಿದರಾ ಎಂದು ಪ್ರಶ್ನೆ ಮಾಡಿದರು.
ಗ್ಯಾರಂಟಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಗುಡುಗಿದ್ದು ಹೀಗೆ; ಇಲ್ಲಿದೆ ನೋಡಿ ವಿಡಿಯೊ
ಇದನ್ನೂ ಓದಿ: Siddaramaiah: ಅಚ್ಛೇ ದಿನ್ ಸುಳ್ಳಾಗಿದೆ, ಮೋದಿ ಹವಾ ಡೌನ್ ಆಗಿದೆ: ಮಹಾರಾಷ್ಟ್ರದಲ್ಲಿ ಕತ್ತಿ ಝಳಪಿಸಿದ ಸಿದ್ದರಾಮಯ್ಯ
ನಾವು ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವುದಿಲ್ಲ ಎಂದಾದರೆ ಒಂದು ಕ್ಷಣವೂ ಖರ್ಚಿಯಲ್ಲಿ ಕೂರುವುದಿಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದರು. ಈಗ ಒಂದು ತಿಂಗಳಾಗಿ ಹೋಯಿತು. ಹಾಗಾದರೆ ನಾವು ಈಗಲೂ ಮಾತನಾಡಬಾರದಾ? ನೀವು ಹೇಳಿದ ಹಾಗೆ ನಡೆದುಕೊಳ್ಳಿ ಅಂದಷ್ಟೇ ನಾವು ಕೇಳುತ್ತಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಏ ಮಹದೇವಪ್ಪ ನಿಂಗೂ ಕೊಡ್ತೇನೆ ಕಣಯ್ಯಾ ಅಂದವರು ಈಗೇಕೆ ಕೊಟ್ಟಿಲ್ಲ?
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಚುನಾವಣೆಗೆ ಮುಂಚೆ ಪ್ರಚಾರ ಭಾಷಣದಲ್ಲಿ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಯುವ ನಿಧಿಯಾಗಲಿ ಯಾವುದರ ಬಗ್ಗೆಯಾದರೂ ಕಂಡೀಷನ್ ಬಗ್ಗೆ ಮಾತನಾಡಿದ್ದರಾ? ಆಗ ಎಲ್ಲರಿಗೂ ಕೊಡುತ್ತೇವೆ ಎಂದು ಹೇಳಿದ್ದರು. ಇನ್ನು ಸಿದ್ದರಾಮಯ್ಯ ಅವರು ನನ್ನ ಹೆಂಡರಿಗೂ ಕೊಡುತ್ತೇನೆ ಎಂದು ಹೇಳಿದ್ದರು. ಏ ಮಹದೇವಪ್ಪ ನಿಂಗೂ ಕೊಡ್ತೇನೆ ಕಣಯ್ಯಾ ಅಂತ ಹೇಳಿದ್ದರು. ಈಗ ಯಾಕೆ ಕೊಟ್ಟಿಲ್ಲ? ಇದನ್ನು ನಾವೀಗ ಪ್ರಶ್ನೆ ಮಾಡುತ್ತಿದ್ದೇವೆ. ಜನರು ನಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿರುವುದರಿಂದ ನಾವೀಗ ಜನರ ಪರವಾಗಿ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಪ್ರತಾಪ್ ಹೇಳಿದರು.
ಹಿಂದು ವಿರೋಧಿ ಸರ್ಕಾರ ಎಂದ ಪ್ರತಾಪ್ ಸಿಂಹ
ಧರ್ಮಾಂಧತೆ ಇದೆ ಎಂಬುದಾಗಿ ಅರ್ಥವಲ್ಲವೇ?
ಸಿದ್ದರಾಮಯ್ಯ ಅವರ ಸರ್ಕಾರವನ್ನು ಹಿಂದು ವಿರೋಧಿ ಸರ್ಕಾರ ಎಂದು ನಾನು ಹೇಳಲು ಕಾರಣವೂ ಇದೆ. ನಾನು ಮೈಸೂರು ಹಾಗೂ ಕೊಡಗಿನ ಸಂಸದನಾಗಿದ್ದೇನೆ. ಇನ್ನು ಯಾವ ಮುಸ್ಲಿಂ ವ್ಯಕ್ತಿಯೂ ಬಂದು ಟಿಪ್ಪು ಜಯಂತಿಯನ್ನು ಮಾಡಿ ಎಂದು ಅವರನ್ನು ಕೇಳಿರಲಿಲ್ಲ. ಮುಸ್ಲಿಮರಲ್ಲಿ ಅಲ್ಲಾಹುವನ್ನು ಬಿಟ್ಟರೆ ಬೇರೆ ಯಾರೂ ಸಹ ಪೂಜೆಗೆ ಅರ್ಹರಲ್ಲ. ಅಲ್ಲಿ ಸಂಗೀತ ಕೇಳುವುದು ಸಹ ನಿಷಿದ್ಧ. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಂತೆ ಇಲ್ಲ. ಮುಸ್ಲಿಮರು ಕೇಳದೇ ಇದ್ದರೂ ಇವರು ಯಾಕೆ ಟಿಪ್ಪು ಜಯಂತಿಯನ್ನು ಮಾಡಲು ಮುಂದಾದರು? ಅವರ ಮನಸ್ಥಿತಿ ಏನು ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
ಈಗ ವಿದ್ಯುತ್ ಬಿಲ್ ಅನ್ನು ಹೆಚ್ಚಳ ಮಾಡಲಾಗಿದೆ. ಇದರ ಬಗ್ಗೆ ಕೇಳಿದರೆ ಬಿಜೆಪಿ ಸರ್ಕಾರ ಮಾಡಿದ್ದು ಎಂದು ಬೊಟ್ಟು ಮಾಡಲಾಗುತ್ತಿದೆ. ಆದರೆ, ಇದನ್ನು ಮಾಡಿರುವುದು ಕೆಇಆರ್‌ಸಿ ಆಗಿದೆ. ಅದೊಂದು ಸ್ವತಂತ್ರ ಸಂಸ್ಥೆಯಾಗಿದ್ದು, ಚುನಾವಣೆ ಮುಗಿದ ಬಳಿಕ ಅದು ನಿರ್ಧಾರವನ್ನು ತೆಗೆದುಕೊಂಡಿದೆ. ಅದು ಏನೇ ಆದೇಶ ಮಾಡಿದ್ದರೂ ಸಹ ಇವರು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪಡೆದ ನಂತರ ಸರ್ಕಾರಿ ಆದೇಶವನ್ನು ಹೊರಡಿಸಬಹುದಿತ್ತು. ಆದರೆ, ನಮ್ಮ ಪ್ರಶ್ನೆ ಇಷ್ಟೇ. ಕ್ರಿಶ್ಚಿಯನ್ನರು ಕೇಳಿದ ಕೂಡಲೇ ಮತಾಂತರ ನಿಷೇಧ ಕಾಯ್ದೆಯನ್ನು ತೆಗೆದು ಹಾಕುತ್ತಾರೆ. ಮುಸ್ಲಿಮರು ಕೇಳಿದ ಕೂಡಲೇ ಗೋಹತ್ಯೆ ನಿಷೇಧ ಬಿಲ್ ಅನ್ನು ಕಿತ್ತು ಹಾಕುತ್ತಾರೆ. ಆದರೆ, ನಮ್ಮ ಹೊಟ್ಟೆಗೆ ಪೆಟ್ಟು ಬೀಳುತ್ತಿದೆ ಎಂದು ಸಾಮಾನ್ಯ ಜನರು ಕೇಳುತ್ತಾ ಇದ್ದರೂ ಇವರು ಅದಕ್ಕೆ ತಡೆ ನೀಡುವುದಿಲ್ಲ ಅಂದರೆ ಏನರ್ಥ? ಅಂದರೆ ಇವರಲ್ಲಿ ಧರ್ಮಾಂಧತೆ ಇದೆ ಎಂಬುದಾಗಿ ಅರ್ಥವಲ್ಲವೇ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
ಕೊಡುಗೆಯ ಆಮಿಷ ಇದು…
ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಹಿಜಾಬ್ ನಿಷೇಧ ಮಾಡಿದಿರಿ. ಆದರೆ, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಇವೆಲ್ಲವನ್ನೂ ವಾಪಸ್ ಪಡೆಯುವುದಾಗಿ ಹೇಳಿಕೊಂಡಿತ್ತು. ಜನರೂ ಸಹ ಅವರಿಗೆ ಮತ ಚಲಾವಣೆ ಮಾಡಿದರು. ಹಾಗಾದರೆ ಜನರಿಗೆ ಈ ಯಾವುದೂ ಆಸಕ್ತಿ ಇಲ್ಲವೇ ಎಂದು ನಾವು ಅರ್ಥೈಸಬಹುದಾ ಎಂಬ ಹರಿಪ್ರಕಾಶ್ ಕೋಣೆಮನೆ ಅವರ ಪ್ರಶ್ನೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ದೆಹಲಿಯಲ್ಲಿ ಆಪ್‌ನ ಅರವಿಂದ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿದ್ದೇ ಈ ಉಚಿತ ಘೋಷಣೆಗಳಿಂದಾಗಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲು ಯಾವ ಕಾರಣವೂ ಇರಲಿಲ್ಲ. ಆದರೆ, ಅಲ್ಲಿ ಸಹ ಇಲ್ಲಿನ ಗೃಹ ಲಕ್ಷ್ಮಿ ಮಾದರಿ ಒಂದು ಸಾವಿರ ರೂಪಾಯಿಯನ್ನು ಮಹಿಳೆಯರಿಗೆ ಕೊಡುವುದಾಗಿ ಘೋಷಿಸಿದರು. ಆದರೆ, ಇದುವರೆಗೂ ಅದನ್ನು ಕೊಡಲು ಆಗಲೇ ಇಲ್ಲ. ರಾಜಸ್ಥಾನ, ಹಿಮಾಚಲ ಹಾಗೂ ತಮಿಳುನಾಡಿನಲ್ಲಿಯೂ ಇದೇ ರೀತಿ ಆಗಿದೆ. ಜನರೂ ಸಹ ಈಗ ಟ್ರಾನ್ಸಾಕ್ಷನಲ್ (ಕೊಡು ಕೊಳ್ಳುವಿಕೆ ವ್ಯವಹಾರ) ಆಗಿದ್ದಾರೆ. “ನಿನಗೆ ನಾನು ಮತ ಹಾಕಬೇಕಾದರೆ, ನೀನು ನನಗೆ ಏನು ಕೊಡುತ್ತೀಯಾ?” ಎಂಬುದಾಗಿ ಕೇಳುತ್ತಿದ್ದಾರೆ. ನನಗೆ ಯಾರು ಹೆಚ್ಚು ಕೊಡುತ್ತಾರೋ ಅವರಿಗೆ ನನ್ನ ಮತ ಎಂಬಂತೆ ಆಗಿದೆ. ಇಲ್ಲಿ ಜಾತಿ, ಧರ್ಮ ಯಾವುದೂ ಬರುವುದಿಲ್ಲ ಎಂದು ಪ್ರತಾಪ್ ಸಿಂಹ ಚುನಾವಣೆ ನಡೆಯುತ್ತಿರುವ ರೀತಿಯನ್ನು ವಿಶ್ಲೇಷಿಸಿದರು.
ಮತಾಂತರ ವಿರೋಧಿಸಲು ಕಾರಣ ಇದೆ
ಮತಾಂತರ ನಿಷೇಧ ಕಾಯ್ದೆ ವಿಚಾರಕ್ಕೆ ಬರುವುದಾದರೆ, ಮತಾಂತರವನ್ನು ನಾವು ವಿರೋಧ ಮಾಡುವುದಕ್ಕೂ ಕಾರಣ ಇದೆ. ಜಗತ್ತಿನಾದ್ಯಂತ ನೂರಕ್ಕೂ ಹೆಚ್ಚು ಕ್ರಿಶ್ಚಿಯನ್ ರಾಷ್ಟ್ರಗಳಿವೆ. ಸುಮಾರು 53-54ರಷ್ಟು ಇಸ್ಲಾಮಿಕ್ ರಾಷ್ಟ್ರಗಳಿವೆ. ಭಾರತವೊಂದೇ ಈಗ ಹಿಂದು ರಾಷ್ಟ್ರವಾಗಿ ಉಳಿದುಕೊಂಡಿದೆ. ನಾವು ನೆಲ, ಜಲ, ಕಲ್ಲು, ಮಣ್ಣುಗಳನ್ನು ಗೌರವಿಸಿ, ಪೂಜಿಸುತ್ತೇವೆ. ಹೀಗಾಗಿ ಇದನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಇರಾನ್, ಇರಾಕ್, ರೋಮ್, ಗ್ರೀಕ್‌ನಲ್ಲಿ ಇಂದು ಏನಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಮತಾಂತರ ಎಂದು ಹೇಳಿಕೊಂಡು ಬೇರೆ ಧರ್ಮಗಳನ್ನು ಮುಗಿಸಿಹಾಕಿ ಸಂಖ್ಯಾಬಲವನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋದರೆ ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆ ಎಲ್ಲಿ ಉಳಿಯುತ್ತದೆ? ಹೀಗಾಗಿ ಒಂದು ಬುಡಕಟ್ಟು ಸಮುದಾಯದ ಜನರು ಸೇರಿದಂತೆ ಸಂಸ್ಕೃತಿ, ಜಾನಪದ, ಕಲೆ, ಸಾಹಿತ್ಯ ಇತ್ಯಾದಿ ಅಂಶಗಳು ಉಳಿಯಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.
ಪಠ್ಯದ ಬಗ್ಗೆ ಪ್ರತಾಪ್ ಹೇಳಿದ್ದೇನು?
ನೆಹರು ಯಾವತ್ತಾದರೂ ಬ್ರಿಟಿಷರ ವಿರುದ್ಧ ಒಂದು ಹುಲ್ಲು ಕಡ್ಡಿಯನ್ನು ಎತ್ತಿದ್ದರೇ?
ಕಾಂಗ್ರೆಸ್ ಪಠ್ಯಪುಸ್ತಕ ಪರಿಷ್ಕರಣೆ ನೀತಿ ಬಗ್ಗೆ ಕಿಡಿಕಾರಿದ ಪ್ರತಾಪ್ ಸಿಂಹ, ಕಾಂಗ್ರೆಸ್‌ನವರು ನೆಹರು ಪಾಠವನ್ನು ಹಾಕಿ ಸಾವರ್ಕರ್ ಪಾಠವನ್ನು ತೆಗೆಯುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಇದರ ಲಾಜಿಕ್ ಏನು? ನೆಹರು ಅವರಿಗೆ ಸ್ವಾತಂತ್ರ್ಯ ಎಂದರೆ ಏನೆಂಬುದು ಗೊತ್ತಾಗುವುದರೊಳಗೆ ಸಾವರ್ಕರ್ ಅವರು ಎರಡೆರಡು ಬಾರಿ ಜೈಲುವಾಸವನ್ನು ಅನುಭವಿಸಿದ್ದರು. ನೆಹರು ಮೊದಲ ಬಾರಿಗೆ ಜೈಲಿಗೆ ಹೋಗಿದ್ದೇ 1923ರಲ್ಲಾಗಿದೆ. ಅಂದರೆ ಸಾವರ್ಕರ್ ಒಂದು ಜೀವಾವಧಿಯನ್ನು ಮುಗಿಸಿದ ಬಳಿಕ ಇವರು ಜೈಲಿಗೆ ಹೋಗುತ್ತಾರೆ. ಅವರು ಜೈಲಿಗೆ ಹೋಗಿ ಒಂದು ವಾರದೊಳಗೆ ಅವರ ಅಪ್ಪ ಮೋತಿಲಾಲ್ ಅವರು ಹುಡುಕಿಕೊಂಡು ಹೋಗಿದ್ದಲ್ಲದೆ, ಇನ್ಯಾವತ್ತೂ ನಬಾ ಕಡೆಗೆ ತಲೆ ಹಾಕುವುದಿಲ್ಲ, ಬ್ರಿಟಿಷರ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂದು ಹೇಳಿ ನೆಹರು ಕಡೆಯಿಂದ ಮುಚ್ಚಳಿಕೆ ಬರೆಸಿಕೊಂಡು ಬರುತ್ತಾರೆ. ನೆಹರು ತಮ್ಮ ಜೀವನದಲ್ಲಿ ಯಾವತ್ತಾದರೂ ಬ್ರಿಟಿಷರ ವಿರುದ್ಧ ಒಂದು ಹುಲ್ಲು ಕಟ್ಟಿಯನ್ನು ಎತ್ತಿದ್ದರೇ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
ಇನ್ನು ಸಾವರ್ಕರ್ ಅವರನ್ನು ಅಂಬೇಡ್ಕರ್ ಅವರೇ ಹೊಗಳಿದ್ದಾರೆ. ಇಬ್ಬರ ಪರಸ್ಪರ ಭೇಟಿ ಸಹ ಆಗಿದೆ. ಅಂಬೇಡ್ಕರ್ ಅವರನ್ನೇ ವಿರೋಧಿಸುವ, ಅವರ ವಿರುದ್ಧವೇ ಅಭ್ಯರ್ಥಿ ಹಾಕಿ ಸೋಲಿಸುವ ಕಾಂಗ್ರೆಸ್‌ನವರು ಯಾವತ್ತೂ ದೇಶಕ್ಕಾಗಿ ಕೆಲಸ ಮಾಡಲ್ಲ, ದೇಶ ಪ್ರೇಮಿಗಳನ್ನು ಸಹಿಸುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಮತ್ತೆ ಟಿಪ್ಪು ಜಯಂತಿ ಮಾಡಲು ಹೊರಟರೆ ರೋಡಿಗಳಿಯುವೆ
ಈ ಬಾರಿ ಏನಾದರೂ ಸಿದ್ದರಾಮಯ್ಯ ಸರ್ಕಾರ ಮತ್ತೆ ಟಿಪ್ಪು ಜಯಂತಿ ಮಾಡಲು ಮುಂದಾದರೆ ನಾನು ಖಂಡಿತವಾಗಿಯೂ ರಸ್ತೆಗೆ ಇಳಿಯುತ್ತೇನೆ. ಅದನ್ನು ತಡೆದೇ ತಡೆಯುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.
ಸ್ಪೀಕರ್ ಯು.ಟಿ. ಖಾದರ್ ನಿರ್ಧಾರ ಒಳ್ಳೆಯದಿತ್ತು
ನೂತನ ಶಾಸಕರಿಗೆ ತರಬೇತಿ ಕೊಡಲು ಸ್ಪೀಕರ್ ಯು.ಟಿ. ಖಾದರ್ ಆಹ್ವಾನ ಮಾಡಿರುವ ಮೂವರು ತಜ್ಞರಾದ ಡಾ. ವೀರೇಂದ್ರ ಹೆಗ್ಗಡೆ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಡಾ. ಗುರುರಾಜ ಕರ್ಜಗಿ ಅವರನ್ನು ಕರೆಯಬಾರದು ಎಂದು ಬುದ್ಧಿಜೀವಿಗಳು ಮಾಡುವ ಆರೋಪಕ್ಕೆ, ತಕ್ಕಂತೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಆಗಿರುವ ಡಾ. ವೀರೇಂದ್ರ ಹೆಗ್ಗಡೆಯವರು ಸ್ವಸಹಾಯ ಸಂಘವನ್ನು ಹುಟ್ಟುಹಾಕಿ ಗ್ರಾಮೀಣ ಅಭಿವೃದ್ಧಿಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಸರ್ಕಾರ ಮಾಡಲು ಸಾಧ್ಯವಾಗದಿರುವುದನ್ನು ಅವರು ಮಾಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡವರು ವೀರೇಂದ್ರ ಹೆಗ್ಗಡೆಯವರಾಗಿದ್ದಾರೆ. ಶಾಲೆಗಳನ್ನು ಉದ್ದಾರ ಮಾಡುವುದು, ದೇವಸ್ಥಾನಗಳ ಜೀರ್ಣೋದ್ಧಾರ ಹೇಗೆಂಬ ಬಗ್ಗೆ ಅವರಿಂದ ಕಲಿಯಬಹುದು. ಇವರಿಂದ ವೈದ್ಯಕೀಯ ಕ್ಷೇತ್ರದಲ್ಲಿಯೂ ಅವರ ಸಾಧನೆ ಬಹಳಷ್ಟು ಇದೆ. ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಮಹಿಳೆಯರ ಸಶಕ್ತೀಕರಣ ಬಗ್ಗೆ ಪಾಠ ಹೇಳಿಸಿಕೊಳ್ಳಬಹುದು ಎಂದು ಹೇಳಿದರು.
ಇದನ್ನೂ ಓದಿ: Siddaramaiah: ಅಚ್ಛೇ ದಿನ್ ಸುಳ್ಳಾಗಿದೆ, ಮೋದಿ ಹವಾ ಡೌನ್ ಆಗಿದೆ: ಮಹಾರಾಷ್ಟ್ರದಲ್ಲಿ ಕತ್ತಿ ಝಳಪಿಸಿದ ಸಿದ್ದರಾಮಯ್ಯ
ಮೈಸೂರಿನ ವಿದ್ಯಾರಣ್ಯ ಪುರಂನಲ್ಲಿ ಕಸವನ್ನು ಸುರಿಯುವ ಜಾಗದಿಂದ ಕೆಟ್ಟ ವಾಸನೆ ಬರುತ್ತದೆ. ಇಲ್ಲಿ ಬಯೋ ಎಂಜನ್ಶನ್ ಸ್ಪ್ರೇ ಮಾಡಿ ವಾಸನೆಯನ್ನು ಹೋಗಿಸಬಹದು ಎಂದು ಹೇಳಿಕೊಟ್ಟವರು ರವಿಶಂಕರ್ ಗುರೂಜಿ ಅವರು. ಇಂಥವರಿಂದ ಕಲಿಯುವ ಅಂಶ ಇಲ್ಲವೇ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು. ಗುರುರಾಜ ಕರ್ಜಗಿ ಅವರ ನೀತಿ ಪಾಠ, ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಇದು ಯು.ಟಿ. ಖಾದರ್ ಅವರ ಒಳ್ಳೆಯ ನಿರ್ಧಾರವಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಜನರಿಗೆ ಮನವರಿಕೆ ಮಾಡುವಲ್ಲಿ ನಾವು ವಿಫಲ
ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಶೇಕಡಾ 34ರಷ್ಟು ಪಡೆದು 110 ಸೀಟನ್ನು ಪಡೆದಿದ್ದೆವು. ಆದರೆ, ಈಗ ಕಳೆದುಕೊಂಡಿರುವುದು ಶೇ. 45 ಮತಗಳನ್ನಷ್ಟೇ. ಕೋವಿಡ್ ವೇಳೆ ವ್ಯಾಕ್ಸಿನೇಶನ್ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿದ್ದೇವೆ. ಇದನ್ನು ನಾವು ಜನರಿಗೆ ಮನವರಿಕೆ ಮಾಡುವಲ್ಲಿ ವಿಫಲವಾದೆವು. ಇದೇ ವೇಳೆ ಜೆಡಿಎಸ್ ಸಹ ಹೀನಾಯವಾಗಿ ಕುಸಿತ ಕಂಡಿದ್ದೂ ಸಹ ನಮ್ಮ ಸೋಲಿಗೆ ಕಾರಣವಾಯಿತು ಎಂದು ಪ್ರತಾಪ್ ಸಿಂಹ ವಿಧಾನಸಭಾ ಸೋಲನ್ನು ವಿಶ್ಲೇಷಣೆ ಮಾಡಿದರು.
ಇಂದು ಸೋಷಿಯಲ್ ಮೀಡಿಯಾ ನೋಡುತ್ತಿದ್ದರೆ ಮತೀಯ ಭಾವನೆ ಮುಸ್ಲಿಮರಲ್ಲಿ ಕಂಡು ಬರುತ್ತಿದೆ. ಕಾಂಗ್ರೆಸ್ ಗೆದ್ದಿದ್ದರಿಂದ ಮುಸ್ಲಿಮರು ಗೆದ್ದಿರುವಂತೆ ಭಾವನೆ ಮೂಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿರೋಧಕ್ಕೆ ಕಾರಣವಿದೆ
ಶಾಲೆಗೆ ಬರುವ ಮಕ್ಕಳು ಹಿಜಾಬ್ ಧರಿಸುವುದರಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು, ನಾವೆಲ್ಲರೂ ಸಮಾನರು ಎಂಬ ಭಾವನೆ ಬರಬೇಕು ಎಂಬ ನಿಟ್ಟಿನಲ್ಲಿ ನಾವು ಹಿಜಾಬ್ ಅನ್ನು ವಿರೋಧಿಸಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮೋದಿಯನ್ನು ಕೇಳಿ ಅಕ್ಕಿ ಘೋಷಣೆ ಮಾಡಿದರಾ?
ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಕ್ಕೆ, ಅವರು ಅಧಿಕಾರಕ್ಕೆ ಬರಲು ನರೇಂದ್ರ ಮೋದಿ ಸರ್ಕಾರ ಅಕ್ಕಿ ಕೊಡಲು ಇರುವುದಲ್ಲ. ಎಲ್ಲ ರಾಜ್ಯಗಳನ್ನೂ ಸಮಾನವಾಗಿ ನೋಡಿಕೊಳ್ಳಬೇಕು. ಆ ಕೆಲಸವನ್ನು ಕೇಂದ್ರ ಮಾಡುತ್ತಾ ಬಂದಿದ್ದು, ಎಲ್ಲ ರಾಜ್ಯಗಳಿಗೆ 5 ಕೆ.ಜಿ. ಅಕ್ಕಿಯನ್ನು ಕೊಡುತ್ತಾ ಬಂದಿದೆ. ಒಬ್ಬ ಮನುಷ್ಯನಿಗೆ ತಿಂಗಳಿಗೆ ಆರು ಕೆಜಿ ಅಕ್ಕಿ ಬೇಕು. ಆ ನಿಟ್ಟಿನಲ್ಲಿ ಕೇಂದ್ರ ಕೊಡುತ್ತಿದೆ. ಆಗ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಕೇಳಿಕೊಂಡು ಘೋಷಣೆ ಮಾಡಿದರಾ? ಎಂದು ಪ್ರಶ್ನೆ ಮಾಡಿದರು. ಬೆಂಬಲ ಬೆಲೆ ಘೋಷಿಸಿದರೆ ಜನರೇ ಅಕ್ಕಿ, ರಾಗಿಯನ್ನು ತಂದು ಕೊಟ್ಟು ಹೋಗುತ್ತಾರೆ. ಸುಮ್ಮನೇ ಯಾಕೆ ಮೋದಿ ಅವರನ್ನು ಬಯ್ಯಬೇಕು ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
ಇದನ್ನೂ ಓದಿ: Karnataka CM: 2028ಕ್ಕೆ ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ CM: ಈಗಲೇ ಟವೆಲ್ ಹಾಕಿದ ಸಚಿವ
ಅಕ್ಕಿ ದುಡ್ಡನ್ನು ಜನರ ಖಾತೆಗೆ ಹಾಕಲಿ
ಒಂದು ವೇಳೆ ಸರ್ಕಾರಕ್ಕೆ ಅಕ್ಕಿ ಸಿಗುತ್ತಿಲ್ಲ ಎಂದಾದರೆ ಜನರಿಗೆ ಮುಕ್ತ ಮಾರುಕಟ್ಟೆಯಲ್ಲಿ ಕೆಜಿಗೆ 37 ರೂಪಾಯಿಯಂತೆ ಅಕ್ಕಿ ಸಿಗಲಿದೆ. ಜನರ ಖಾತೆಗೆ ಹಣ ಹಾಕಲಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.
ಪೆದ್ದು ಪೆದ್ದಾಗಿ ಮಾತನಾಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಂಪ್ಯೂಟರ್ ಹ್ಯಾಕ್ ಮಾಡುವುದು, ಗೃಹ ಜ್ಯೋತಿಯ ಸರ್ವರ್ ಹ್ಯಾಕ್ ಮಾಡುವಂತಹ ಪೆದ್ದು ಪೆದ್ದು ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ನೀಡಿ ಕರ್ನಾಟಕವನ್ನು ನಗೆಪಾಟಿಲಿಗೆ ಈಡು ಮಾಡುತ್ತಿದ್ದಾರೆ. ದಯವಿಟ್ಟು ಇಂತಹ ಹೇಳಿಕೆ ನೀಡಬೇಡಿ ಎಂದು ಕಾಂಗ್ರೆಸ್ ಸಚಿವರಿಗೆ ಪ್ರತಾಪ್ ಸಿಂಹ ಮನವಿ ಮಾಡಿದರು.
ಬೊಮ್ಮಾಯಿ ತಮ್ಮ ಕೆಲಸವನ್ನು ಪ್ರಚಾರ ಮಾಡುವಲ್ಲಿ ವಿಫಲ
ಬಿಟ್ ಕಾಯಿನ್ ಹಗರಣ, ಪೇಸಿಎಂ, 40 ಪರ್ಸೆಂಟ್ ರಾಜಕಾರಣದ ಬಗ್ಗೆ ಆಗ ಮಾತನಾಡಿದ್ದೀರಿ? ಆದರೆ, ಈಗ ಯಾಕೆ ನೀವು ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಅವುಗಳನ್ನು ತನಿಖೆಗೆ ಒಳಪಡಿಸಿಲ್ಲ? ಏನು ಹೊಂದಾಣಿಕೆ ರಾಜಕಾರಣವನ್ನು ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದೇನಷ್ಟೇ ಎಂದು ಪ್ರತಾಪ್ ಸಿಂಹ ಉತ್ತರಿಸಿದರು.
ನಾನು ಈ ಹೇಳಿಕೆಯನ್ನು ಬಸವರಾಜ ಬೊಮ್ಮಾಯಿ ಅವರಾಗಲೀ, ಯಾವುದೋ ವ್ಯಕ್ತಿಯನ್ನಾಗಲೀ ಅಥವಾ ಪಕ್ಷವನ್ನಾಗಲಿ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಲಿಲ್ಲ. ನಾನು ಒಟ್ಟಾರೆ ಸ್ಥಿತಿ ಬಗ್ಗೆ ಅಷ್ಟೇ ಮಾತನಾಡಿದ್ದೇನೆ. ನನಗೆ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಅಪಾರವಾದ ಗೌರವ ಇದೆ. ಅವರು ಮಾಡಿದ ಒಳ್ಳೆಯ ಕೆಲಸವನ್ನು ಪ್ರಚಾರ ಮಾಡುವಲ್ಲಿ ಅವರು ವಿಫಲವಾದರು ಎನ್ನುವುದಕ್ಕಿಂತ ನಾವು ವಿಫಲವಾದೆವು ಎಂದು ಪ್ರತಾಪ್ ಸಿಂಹ ಹೇಳಿದರು.
ನಾನು ಮೋದಿ ಹೆಸರು ಹೇಳಿಕೊಂಡೇ ಗೆದ್ದಿರುವೆ
ನಾವು ಪ್ರತಿ ಚುನಾವಣೆಯಲ್ಲಿ ಮೋದಿ ಹೆಸರನ್ನು ಹೇಳಲು ನಮಗೆ ಅವರು ಸ್ಫೂರ್ತಿಯಾಗಿರುವುದೇ ಕಾರಣ. ನಾನು ಮೋದಿ ಅವರ ಹೆಸರನ್ನು ಹೇಳಿಕೊಂಡು ಗೆದ್ದಿರುವುದು ಎಂದು ಯಾವುದೇ ನಾಚಿಕೆ ಇಲ್ಲದೆ ಹೇಳುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.
ನನಗೆ ಸರಿ ಕಾಣದ ವಿಷಯವನ್ನು ನಾನು ಪ್ರಶ್ನೆ ಮಾಡುವುದು ನನ್ನ ಪತ್ರಕರ್ತ ಗುಣ. ಸತ್ಯವನ್ನು ನುಂಗಿಕೊಂಡು ಇರಲು ನನ್ನ ಹತ್ತಿರ ಆಗದು. ನನ್ನೊಳಗಿನ ಪತ್ರಕರ್ತ ಇನ್ನೂ ಬದುಕಿದ್ದಾನೆ. ಹಾಗಾಗಿ ನನ್ನೊಳಗಿನ ರಾಜಕಾರಣಿಯನ್ನು ಬದಿಗಿಟ್ಟು ಆ ಪತ್ರಕರ್ತ ಮಾತನಾಡುತ್ತಾನೆ. ನನಗೆ ನನ್ನ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಆಸಕ್ತಿ, ಯೋಚನೆ ಇಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದರು.
ದೇವೇಗೌಡರ ಬಗ್ಗೆ ಮೋದಿಗೆ ಅಭಿಮಾನ
2016-17ರ ಸಂದರ್ಭದಲ್ಲಿ ಬಿಜೆಪಿಯಿಂದ ಜಿಎಸ್‌ಟಿ ಜಾರಿಗೆ ತರುವ ಸಂದರ್ಭದಲ್ಲಿ ಅವರನ್ನು ನರೇಂದ್ರ ಮೋದಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡಿದ್ದಾರೆ. ಅವರು ಒಂದು ಸಾಮಾನ್ಯ ಕುಟುಂಬದಿಂದ ಬಂದು ಪ್ರಧಾನಿ ಹುದ್ದೆಗೇರಿರುವ ಬಗ್ಗೆ ಮನೆ ಕೆಲಸ ಮಾಡುವವಳ ಮಗನಾಗಿ ಹುಟ್ಟಿದ ನರೇಂದ್ರ ಮೋದಿಯವರಲ್ಲಿ ಅಭಿಮಾನ ಇದೆ. ಇನ್ನು ರಾಜಕೀಯವನ್ನು ಹೊರತುಪಡಿಸಿ ಮೋದಿಯವರು ಮಾಡಿದ ಕೆಲಸದ ಬಗ್ಗೆ ದೇವೇಗೌಡ ಅವರಿಗೂ ಸಂತಸ ಇದೆ ಎಂದು ಪ್ರತಾಪ್ ಸಿಂಹ ಅವರು ದೇವೇಗೌಡ ಹಾಗೂ ಬಿಜೆಪಿ ನಡುವೆ ಇರುವ ಸಂಬಂಧದ ಬಗ್ಗೆ ಮಾತನಾಡಿದರು.
ಇವರಿಗೆ ಬೈಯಲೂ ಬ್ರಾಹ್ಮಣರು ಬೇಕಾ?
ಎಂ.ಬಿ. ಪಾಟೀಲ್ ಅವರ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಅವರು ನೀರಾವರಿ ಸಚಿವರಾಗಿದ್ದಾಗ ಮಾಡಿ ಒಳ್ಳೆಯ ಕೆಲಸದ ಬಗ್ಗೆ ಅಭಿಮಾನವಿದೆ. ಆದರೆ, ಅವರು ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತಂದಿದ್ದಾರೆ. ಪ್ರತಾಪ್ ಸಿಂಹ ಹೆಗಲ ಮೇಲೆ ಯಾರೋ ಬ್ರಾಹ್ಮಣರು ಕೋವಿ ಇಟ್ಟು ಹೊಡೆಯುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ, ಇವರಿಗೆ ಎಲ್ಲ ಕೆಲಸಗಳಿಗೂ ಬ್ರಾಹ್ಮಣರು ಬೇಕು. ಕೊನೆಗೆ, ಇವರಿಗೆ ಬಯ್ಯಲೂ ಬ್ರಾಹ್ಮಣರೇ ಬೇಕಾ? ನಾನು ಕೇಳಿದ ಪ್ರಶ್ನೆಗೆ ಉತ್ತರ ಇಲ್ಲದಿದ್ದಾಗ “ಚೇಳು” ಎಂಬಂತಹ ಮಾತುಗಳು ಬರುತ್ತವೆ. ನಾನು ಇವುಗಳಿಗೆಲ್ಲ ಅಷ್ಟಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ಸಿದ್ದರಾಮಯ್ಯಗೆ ಕೊಡಲ್ಲ
ಬೆಂಗಳೂರು-ಮೈಸೂರು ಹೆದ್ದಾರಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಭಿಮಾನ ಇದ್ದರೆ ಅನುಮೋದನೆ ಪಡೆದು ಮಾಡಬಹುದಿತ್ತು. ಆದರೆ, ಯಾಕೆ ಮಾಡಲಿಲ್ಲ? ನಾನು ಮುತುವರ್ಜಿ ವಹಿಸಿ ಡಿಪಿಆರ್ ಮಾಡಿಸಿ, 2018ರಲ್ಲಿ ನರೇಂದ್ರ ಮೋದಿ ಅವರು ಮೈಸೂರಿಗೆ ಬರುವಾಗ ನಾನು ಅನಂತ್ ಕುಮಾರ್ ಅವರಿಗೆ ದುಂಬಾಲು ಬಿದ್ದು ಘೋಷಣೆ ಮಾಡಿಸಿದೆ. ಕೊನೆಗೆ ಮೋದಿ ಅವರು ಅನುಮೋದನೆ ನೀಡಿದರು. ಇದಕ್ಕೆ ನಾನು ಕ್ರೆಡಿಟ್ ಕೊಡುವುದಿದ್ದರೆ, ಎಸ್.ಎಂ. ಕೃಷ್ಣ, ಅನಂತಕುಮಾರ್, ನಿತಿನ್ ಗಡ್ಕರಿ ಹಾಗೂ ನರೇಂದ್ರ ಮೋದಿ ಅವರಿಗೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಬಗ್ಗೆ ಪ್ರತಾಪ್ ನುಡಿ
ಈಗ ಬಿಜೆಪಿ ಸೋತಿದೆ. ಈ ಸೋಲಿನ ಆಘಾತದಲ್ಲಿ ಯಾವುದೋ ಆತುರದ ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಈಗ ಆತ್ಮಾವಲೋಕನದ ಸಮಯವಾಗಿದೆ. ಅಲ್ಲದೆ, ನಮ್ಮನ್ನು ಮುನ್ನಡೆಸಲು ಈ ವ್ಯಕ್ತಿ ಸೂಕ್ತ ಎಂದು ನಮ್ಮೆಲ್ಲರ ಮನಸ್ಸಿನಲ್ಲಿ ಬರಬೇಕು. ಈ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂಬ ಘಟ್ಟದಲ್ಲಿ ನಾವಿದ್ದೇವೆ. ಈ ಬಗ್ಗೆ ವಾರದಲ್ಲಿ ನಿರ್ಧಾರ ಆಗಲಿದೆ ಎಂದು ಪ್ರತಾಪ್ ಸಿಂಹ ಅವರು ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದರು.
ಇದನ್ನೂ ಓದಿ: BJP Karnataka: ವೇದಿಕೆಯಲ್ಲೇ ಕಿತ್ತಾಡಿಕೊಂಡ ಬಸವರಾಜ ಬೊಮ್ಮಾಯಿ ಹಾಗೂ ಬಸನನೌಡ ಪಾಟೀಲ್ ಯತ್ನಾಳ್
2024ರ ಎಲೆಕ್ಷನ್ ಸವಾಲಿನದು ಆಗಿರಲಿದೆ
ನರೇಂದ್ರ ಮೋದಿ ಅವರು ಈ ಒಂಭತ್ತು ವರ್ಷದಿಂದ ನಡೆದುಕೊಂಡು ಬಂದ ರೀತಿಯನ್ನು ಎಲ್ಲರೂ ನೋಡಿದ್ದಾರೆ, ರಷ್ಯಾ ಹಾಗೂ ಉಕ್ರೇನ್ ಯುದ್ಧ ನಡೆದರೂ ಸಹ ರಷ್ಯಾ ಜತೆ ಕಚ್ಚಾ ತೈಲ ಖರೀದಿ ಮಾಡುವ ನಿರ್ಧಾರವನ್ನು ಪಡೆದರು. ಅವರು ಜಾಗತಿಕ ನಾಯಕ ಆಗುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಎಲ್ಲ ನಾಯಕರಿಗೂ ಅಸೂಯೆ ಇದೆ. ಚೀನಾದವರಿಗೂ ಸಹ ಇದೇ ಭಾವನೆ ಇದೆ. ಹೀಗಾಗಿ ಫಂಡಿಂಗ್ ಮಾಡಲು ಅಂತಾರಾಷ್ಟ್ರಿಯ ಮಟ್ಟದಲ್ಲಿ ಜಾಲಗಳು ನಿರತವಾಗಿವೆ. ಮೋದಿ ವಿರುದ್ಧ ಹಲವರು ನಿಂತಿದ್ದಾರೆ. ಆದರೆ, ಅವರ ಜನಪ್ರಿಯತೆ ಎಲ್ಲೂ ಕುಗ್ಗಿಲ್ಲ. ಮೋದಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏನೂ ಮಾಡಲು ಆಗುವುದಿಲ್ಲ ಎಂಬುದಾಗಿ ರಷ್ಯಾ ಕೂಡಾ ಅರ್ಥ ಮಾಡಿಕೊಂಡಿದೆ. ಈ ಬಾರಿ ಮೋದಿ ವರ್ಸಸ್ ಆಲ್ ಇಂಡಿಯಾ ಪಾರ್ಟಿಗಳು ಒಂದಾಗುತ್ತಿವೆ. ಇದನ್ನು ಜನರಿಗೆ ತಿಳಿ ಹೇಳುವ ಕೆಲಸ ಆಗುತ್ತಿದೆ. ಖಂಡಿತ 2024ರ ಎಲೆಕ್ಷನ್ ಟಫೆಸ್ಟ್ ಆಗಿರಲಿದೆ. ಕಾರಣ ಮೋದಿ ವಿರುದ್ಧ ಭಾರತದಲ್ಲಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಕಾಣದ ಕೈಗಳು ಕೆಲಸ ಮಾಡುತ್ತದೆ. ಮೋದಿ ಅವರನ್ನು ಗೆಲ್ಲಿಸುವ ಮೂಲಕ ಜನರು ಒಳ್ಳೇ ಕೆಲಸವನ್ನು ಮಾಡಿದರೆ ಭಾರತ ವಿಶ್ವ ಗುರು ಆಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.