Site icon Vistara News

Power Point with HPK : ಈಗ ರಮೇಶ್‌ ಜಾರಕಿಹೊಳಿ ಎದುರು ಬಂದು ನಿಂತ್ರೆ ಲಕ್ಷ್ಮಿ ಹೆಬ್ಬಾಳ್ಕರ್‌ ಏನು ಮಾಡಬಹುದು?

Lakshmi Hebbalkar Ramesh Jarakiholi

ಬೆಂಗಳೂರು: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarakiholi) ನಡುವಿನ ರಾಜಕೀಯ ಮತ್ತು ವೈಯಕ್ತಿಕ ಫೈಟ್‌ ಜಗಜ್ಜಾಹೀರು. ಕೆಲವು ವರ್ಷಗಳ ಹಿಂದೆ ಒಂದೇ ಪಕ್ಷದಲ್ಲಿದ್ದು ಪರಸ್ಪರರನ್ನು ಗೆಲ್ಲಿಸಲು ಪಣ ತೊಡುತ್ತಿದ್ದ ಅವರು ಕಳೆದ ಕೆಲವು ವರ್ಷಗಳಿಂದ ಹಾವು- ಮುಂಗುಸಿಗಳು. ಈಗ ಲಕ್ಷ್ಮೀ ಹೆಬ್ಬಾಳ್ಕರ್‌ ಮಂತ್ರಿಣಿ. ರಮೇಶ್‌ ಜಾರಕಿಹೊಳಿ ಶಾಸಕನಾಗಿ ಗೆದ್ದರೂ ನಾಯಕನಾಗಿ ಸೋತಿದ್ದಾರೆ. ಮೊನ್ನೆ ಮೊನ್ನೆ ವಸ್ತುಶಃ ಬಾಯಿ ಮಾತಿನಲ್ಲಿ ಹೊಡೆದಾಡುತ್ತಿದ್ದ ಅವರು ಈ ಕ್ಷಣ ಪರಸ್ಪರ ಮುಖಾಮುಖಿಯಾದರೆ ಪರಿಸ್ಥಿತಿ ಹೇಗಿರಬಹುದು (Power Point with HPK)?

ಈ ಒಂದು ಕುತೂಹಲದ ಪ್ರಶ್ನೆ ಎದ್ದಿದ್ದು ವಿಸ್ತಾರ ನ್ಯೂಸ್‌ನಲ್ಲಿ ನಡೆದ ಪವರ್‌ ಪಾಯಿಂಟ್‌ ವಿಥ್‌ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ. ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಮುಂದೆ ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ಈ ಪ್ರಶ್ನೆಯನ್ನು ಇಟ್ಟರು.

ಬೆಳಗಾವಿ ರಾಜಕಾರಣದಲ್ಲಿ ರಮೇಶ್‌ ಜಾರಕಿಹೊಳಿ ಮತ್ತು ನಿಮ್ಮದು ದೊಡ್ಡ ಮಟ್ಟದ ಫೈಟ್‌. ನಿಮ್ಮನ್ನು ಅವರು ಸೋಲಿಸಲು ಪ್ರಯತ್ನ ಮಾಡ್ತಾರೆ ಅಂತಾನೂ, ನೀವು ಅವರನ್ನು ಸೋಲಿಸಲು ಪ್ರಯತ್ನಿಸ್ತೀರಿ ಅನ್ನುವ ಚರ್ಚೆಯೂ ಇತ್ತು. ಕೊನೆಗೆ ಇಬ್ಬರೂ ಗೆದ್ದಿದ್ದೀರಿ. ಈಗ ರಮೇಶ್‌ ಜಾರಕಿಹೊಳಿ ಅವರ ಬಗ್ಗೆ ಏನು ಹೇಳಲು ಬಯಸುತ್ತೀರಿ? ಒಂದು ವೇಳೆ ಈ ಕ್ಷಣ ಅವರು ನಿಮ್ಮ ಮುಂದೆ ಬಂದು ನಿಂತರೆ ಅವರಿಗೆ ಏನು ಹೇಳುತ್ತೀರಿ?

ಈ ಪ್ರಶ್ನೆಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಭಾರಿ ಸಂಯಮದ ಉತ್ತರ ನೀಡಿದರು.

ರಮೇಶ್‌ ಜಾರಕಿಹೊಳಿ ಅವರು ನನ್ನನ್ನು, ನನ್ನ ತಮ್ಮ ಚನ್ನರಾಜ ಹಟ್ಟಿಹೊಳಿಯನ್ನು ಸೋಲಿಸಬೇಕು ಅಂತ ಹಠಕ್ಕೆ ಬಿದ್ದರು. ಆದರೆ, ನಾನು ಮಾತ್ರ ಅಂಥ ದ್ವೇಷ ರಾಜಕಾರಣಕ್ಕೆ ಹೋಗಲಿಲ್ಲ. ಆದರೆ ನನ್ನ ಸ್ಟೇಟ್‌ಮೆಂಟ್‌ಗಳನ್ನು ತೆಗೆದು ನೋಡಿ. ನಾನು ಎಲ್ಲರೂ ಕೂಡಾ ಅವರಿಗೆ ಉತ್ತರ ಕೊಡೋದಾಗಲೀ, ಅವಮರ್ಯದೆ ಮಾಡುವುದಾಗಲೀ, ನನ್ನ ಸಂಸ್ಕಾರವನ್ನು ಬಿಟ್ಟು ಉತ್ತರ ಕೊಡುವುದನ್ನಾಗಲೀ ಮಾಡಲಿಲ್ಲ. ಚುನಾವಣೆಗಿಂತ ಮೊದಲೂ ಉತ್ತರ ಕೊಟ್ಟಿಲ್ಲ, ನಂತರವೂ ಕೊಟ್ಟಿಲ್ಲ ಎಂದರು.

ಅವರು ನನ್ನನ್ನು ಸೋಲಿಸುತ್ತೇನೆ ಅಂದಾಗ ಸೋಲಿಸುವುದು ಗೆಲ್ಲಿಸುವುದು ಯಾರೂ ಅಲ್ಲ. ಜನ ತೀರ್ಮಾನ ಮಾಡುತ್ತಾರೆ ಅಂದರೆ, ಅವರು ಏನೇ ಹೇಳಿದರು ಜನ ಉತ್ತರ ಕೊಡ್ತಾರೆ ಅಂತ ಹೇಳಿದ್ದೆ. ಈಗ ಎದುರುಗಡೆ ಬಂದರೆ ಹಲೋ ಹೇಳಿದರೆ ಹಲೋ ಹೇಳ್ತೇನೆ. ಸಿಂಪಲ್‌ ಅಂದರು ಲಕ್ಷ್ಮಿ ಹೆಬ್ಬಾಳ್ಕರ್‌.

ಲಕ್ಷ್ಮಿ ಜಾರಕಿಹೊಳಿ ಅವರು ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಗೆದ್ದವರು, ರಮೇಶ್‌ ಜಾರಕಿಹೊಳಿ ಗೋಕಾಕ ಕ್ಷೇತ್ರದಿಂದ. ಇಲ್ಲಿ ಪರಸ್ಪರ ಕತ್ತಿ ಮಸೆಯುತ್ತಿದ್ದ ಅವರು ಪರಸ್ಪರರನ್ನು ಸೋಲಿಸುವ ಪಣ ತೊಟ್ಟಿದ್ದರು. ಶಿವಾಜಿ ಪ್ರತಿಮೆ ವಿಚಾರದಲ್ಲಂತೂ ಇವರ ನಡುವೆ ದೊಡ್ಡ ರಾಜಕೀಯವೇ ನಡೆದಿತ್ತು.

ಲೋಕಸಭಾ ಚುನಾವಣೆಯಲ್ಲೂ ಈ ಫೈಟ್‌ ಮುಂದುವರಿಕೆ

ರಮೇಶ್‌ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್‌ ನಡುವಿನ ಜಿದ್ದಾಜಿದ್ದಿ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯುವ ಸೂಚನೆ ಸ್ಪಷ್ಟವಾಗಿದೆ. ಈ ಕೆಳಗಿನ ಪ್ರಶ್ನೆ ಮತ್ತು ಉತ್ತರ ಇದನ್ನು ನಿರೂಪಿಸುತ್ತದೆ.

ಹರಿಪ್ರಕಾಶ್‌ ಕೋಣೆಮನೆ: ತವರು ಜಿಲ್ಲೆ ಬೆಳಗಾವಿ, ಉಸ್ತುವಾರಿ ಜಿಲ್ಲೆ ಉಡುಪಿ. ಎರಡೂ ಹಿಂದುತ್ವದ ನೆಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್‌ ಬಾವುಟ ಹಾರಿಸುವ ನಿಮ್ಮ ವಿಶ್ವಾಸ ಎಷ್ಟಿದೆ?

ಲಕ್ಷ್ಮಿ ಹೆಬ್ಬಾಳ್ಕರ್‌: ದಯವಿಲ್ಲದ ಧರ್ಮ ಯಾವುದಯ್ಯಾ? ದಯವೇ ಧರ್ಮದ ಮೂಲವಯ್ಯಾ.. ನೀವು ಹಿಂದುತ್ವ ಅಂತ ಹೇಳಿದಿರಿ. ನಾನು ಬಸವಣ್ಣನ ತತ್ವ ಮತ್ತು ಹಿಂದೂ ಧರ್ಮದ ಮೇಲೆ ಬಹಳಷ್ಟು ಭಕ್ತಿಯನ್ನು ಇಟ್ಟುಕೊಂಡವಳು. ನಾನು ತುಂಬ ವಿಶ್ವಾಸ ಹೊಂದಿದ್ದೇನೆ ಸರ್‌.. ಐದು ಗ್ಯಾರಂಟಿಗಳು, ನುಡಿದಂತೆ ನಡೆದ ಸರ್ಕಾರ, ಸಿದ್ದರಾಮಯ್ಯನವರ ಜನಪ್ರಿಯತೆ, ಡಿ.ಕೆ. ಶಿವಕುಮಾರ್‌ ಅವರ ಸಂಘಟನೆ ಖಂಡಿತವಾಗಿಯೂ ನಾವು ಉಡುಪಿಯಲ್ಲೂ ಗೆಲ್ತೀವಿ, ಬೆಳಗಾವಿ, ಚಿಕ್ಕೋಡಿಯಲ್ಲೂ ಗೆಲ್ತೀವಿ.

ಇದನ್ನೂ ಓದಿ: Power point with HPK : ನಾನು ಯಾರನ್ನೂ ಅವಲಂಬಿಸಿಲ್ಲ, I am Independent; ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟ ನುಡಿ

Exit mobile version