Site icon Vistara News

power to fishermen | ಮೀನುಗಾರರ ದೋಣಿ ಮೇಲ್ದರ್ಜೆಗೇರಿಸಲು ಸಹಾಯಧನ: ಸಿಎಂ ಬಸವರಾಜ ಬೊಮ್ಮಾಯಿ

CM bommai

ಉಡುಪಿ: ಮುಂದಿನ ದಿನಗಳಲ್ಲಿ ಮೀನುಗಾರರು ಬಳಸುವ ಸೀಮೆ ಎಣ್ಣೆ ಮೋಟಾರ್‌ ದೋಣಿಗಳನ್ನು ಪೆಟ್ರೋಲ್ ಮೋಟರ್ ದೋಣಿಗಳಿಗೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಸಹಾಯಧನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿರುವ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೀನುಗಾರರ ಬೇಡಿಕೆಯಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮೀನುಗಾರರಿಗೆ ಸೀಮೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುವುದು. ಕರಾವಳಿ ಭಾಗದಲ್ಲಿ ಬೆಳೆದ ಕುಚ್ಚಲಕ್ಕಿಯನ್ನು ಖರೀದಿಸಿ ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮೀನುಗಾರಿಕೆ ಚಟುವಟಿಕೆಗಳಿಗೆ ಎಂಟು ಮೀನುಗಾರ ಬಂದರುಗಳನ್ನು ಅಭಿವೃದ್ಧಿಪಡಿಸಲು ಆಯವ್ಯಯದಲ್ಲಿ ಅನುದಾನ ಕಲ್ಪಿಸಲಾಗಿದ್ದು, ಪ್ರಕ್ರಿಯೆ ಪ್ರಾರಂಭವಾಗಿದೆ. ಈ ವರ್ಷ 100 ಹೈ ಸ್ಪೀಡ್ ದೋಣಿಗಳನ್ನು ನೀಡಲು ಕ್ರಮ ವಹಿಸಲಾಗಿದ್ದು, ಅದರಲ್ಲಿ ಶೇಕಡಾ 40ರಷ್ಟು ಸಬ್ಸಿಡಿ ವ್ಯವಸ್ಥೆಯಿದೆ. ಈ ಯೋಜನೆಗೆ ಜನರ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದಿನ ವರ್ಷದಿಂದ ಹೈಸ್ಪೀಡ್ ದೋಣಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.ಮಂಗಳೂರು ಹಾಗೂ ಕಾರವಾರ ಬಂದರು ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಕರಾವಳಿ ಬಂದರು ಅಭಿವೃದ್ಧಿ ಗೆ ಕೇಂದ್ರದ 1774 ಕೋಟಿ ರೂ.
ಕೇಂದ್ರ ಸರ್ಕಾರ ಸಾಗರ ಮಾಲಾ ಯೊಜನೆ ಅಡಿಯಲ್ಲಿ ಕರಾವಳಿ ಬಂದರು ಅಭಿವೃದ್ಧಿ ಗೆ 1774 ಕೋಟಿ ರೂ. ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಅಭಿವೃದ್ದಿಗೆ ಸಿಆರ್ ಝಡ್ ನಿಯಮಗಳಿಗೆ ವಿನಾಯಿತಿಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಇಡೀ ದೇಶದಲ್ಲಿ ರಾಜ್ಯದ ಕಡಲು ತೀರದ ಅಭಿವೃದ್ದಿ, ಉದ್ಯೋಗ,ಆರ್ಥಿಕತೆ ಮತ್ತು ಹೆಚ್ಚಿನ ಮಟ್ಟದ ವ್ಯಾಪಾರ ವಹಿವಾಟು ಕರ್ನಾಟಕದ ಕರಾವಳಿ ಭಾಗದಲ್ಲಿ ಆಗಲಿದೆ ಎಂದು.

ಕರಾವಳಿ ಜಿಲ್ಲೆಗಳಲ್ಲಿ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ
ಕರಾವಳಿ ಜಿಲ್ಲೆಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದೆ. ಪ್ರಧಾನ ಮಂತ್ರಿಯವರು ನಾಡಿದ್ದು ಬೆಂಗಳೂರಿಗೆ ಆಗಮಿಸಿ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ. ಕೊಂಕಣ ರೈಲಿನ ವಿದ್ಯುದೀಕರಣ ಯೋಜನೆ ರಾಜ್ಯವನ್ನು ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸಲಿದೆ. ಮಂಗಳೂರು, ಕಾರವಾರ ಬಂದರುಗಳನ್ನು ಪ್ರಮುಖ ನಗರಗಳಿಗೆ ಜೋಡಿಸುವ ಗತಿ ಶಕ್ತಿ ಯೋಜನೆ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ಮೋದಿಯವರು 5 ಬಿಲಿಯನ್ ಡಾಲರ್ ಆರ್ಥಿಕತೆಯ ಕನಸು ಹೊಂದಿದ್ದು, ಅದರಲ್ಲಿ ಕರ್ನಾಟಕ ರಾಜ್ಯ 1 ಲಕ್ಷ ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಇದೆ ಎಂದರು.

ಮೀನುಗಾರರ 5000 ಮನೆಗಳಿಗೆ ಮಂಜೂರಾತಿ
ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಲಾಗುತ್ತಿದೆ. ನಮ್ಮದು ಡಬಲ್ ಇಂಜನ್ ಸರ್ಕಾರ, ಈ ಸರ್ಕಾರ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತದೆ. ಕೇಂದ್ರದಲ್ಲಿ ಮೋದಿ ನಾಯಕತ್ವ ಹಾಗು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ವಿಶ್ವಾಸ ಇದೆ ಎಂದರು. ರೈತರಿಗೆ ಕೃಷಿ ಚಟುವಟಿಕೆಗೆ ಡೀಸೆಲ್ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ವಿದ್ಯಾ ನಿಧಿ ಯೋಜನೆಯನ್ನು ರೈತರ, ರೈತ ಕೂಲಿಕಾರರ, ನೇಕಾರರ, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೆ ನೀಡಲಾಗುತ್ತಿದೆ. ವಿದ್ಯಾನಿಧಿ ಯೋಜನೆ ಮೂಲಕ 2. ಲಕ್ಷ ಮೀನುಗಾರರ ಮಕ್ಕಳಿಗೆ, _20 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಿದ್ದೇವೆ. ಮೀನುಗಾರರ 5000 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು.

ಒಡೆದು ಆಳುವ ನೀತಿಯಕಾಂಗ್ರೆಸ್ ಪಕ್ಷ
ʻʻಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ನ್ಯಾಯ ಎನ್ನುವುದು ಬರೀ ಭಾಷಣದ ಸರಕು ಅಷ್ಟೆ. ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳದ ಬೇಡಿಕೆ 50 ವರ್ಷದಿಂದಲೇ ಇತ್ತು. ಈ ಬಗ್ಗೆ ದಿಟ್ಟತನದ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಅವರಿಗೆ ದಮ್‌ ಇರಲಿಲ್ಲ. ಎಸ್ಸಿ ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ವಿರೋಧ ಮಾಡಿದ್ದಾರೆʼʼ ಎಂದರು ಸಿಎಂ ಬೊಮ್ಮಾಯಿ.

ಶೇ. 10 ಮೀಸಲು: ಸುಪ್ರೀಂಕೋರ್ಟ್‌ ತೀರ್ಪಿಗೆ ಸ್ವಾಗತ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಲ್ವರ್ಗದ ಬಡವರಿಗೂ ಶೇ. 10ರಷ್ಟು ಮೀಸಲಾತಿ ನೀಡುವ ತೀರ್ಮಾನವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಈ ನಿರ್ಣಯವನ್ನು ನಾನು ಸ್ವಾಗತಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ವಿ. ಸುನಿಲ್ ಕುಮಾರ್, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸಿನದ್ದು: ಸಿಎಂ ಬಸವರಾಜ ಬೊಮ್ಮಾಯಿ

Exit mobile version