ಬೆಂಗಳೂರು: ನಾಯಕರಿಗೆ ಅಧಿಕಾರದ ಜತೆಗೆ ಕಾರ್ಯಕರ್ತರಿಗೂ ಅಧಿಕಾರ ನೀಡುವ ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ಕೆಲವು ಮಾನದಂಡಗಳನ್ನು ಇಟ್ಟುಕೊಂಡಿದ್ದೇವೆ. ನಿಗಮ ಮಂಡಳಿಗಳಿಗೆ ಅರ್ಜಿ ಹಾಕಿದ ನಾಯಕರು ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly elections) ಬೂತ್ ಮಟ್ಟದಲ್ಲಿ (Booth Level) ಎಷ್ಟು ಮತ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ. ಅದರ ಆಧಾರದ ಮೇಲೆ ಕಾರ್ಯಕರ್ತರಿಗೆ ಸಮಿತಿಗಳಲ್ಲಿ ಅಧಿಕಾರವನ್ನು ನೀಡುತ್ತೇವೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.
ಕೆಪಿಸಿಸಿ ನೂತನ ಕಟ್ಟಡದಲ್ಲಿ ಸೋಮವಾರ (ಆಗಸ್ಟ್ 14) ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡುತ್ತೇವೆ. ರಾಜ್ಯ ಮಟ್ಟದ ಪದಾಧಿಕಾರಿಗಳಿಗೂ ಸಮಿತಿಗೆ ಹೆಸರು ಶಿಫಾರಸು ಮಾಡಲು ಅವಕಾಶ ಇದೆ. ಇಂಧನ ಇಲಾಖೆಯಲ್ಲಿ ಕಾರ್ಯಕರ್ತರನ್ನು ಸಮಿತಿಗಳಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಈ ಬಗ್ಗೆ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರಿಗೂ ಮನವಿ ಮಾಡಿದ್ದೇವೆ. ಇನ್ನು ಸಹಕಾರ ಇಲಾಖೆಯಲ್ಲಿ ಸಹ ಸಮಿತಿಗೆ ನೇಮಕ ಮಾಡಲು ಅವಕಾಶ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾವು ಅಧಿಕಾರಕ್ಕೆ ತಂದಿದ್ದೇವೆ. ಆದರೆ, 30-40 ಜನರಿಗೆ ಮಾತ್ರ ಅಧಿಕಾರವೇ ಎಂಬ ಬೇಸರ ಪಕ್ಷದ ಪ್ರಮುಖ ಕಾರ್ಯಕರ್ತರಲ್ಲಿ ಇದೆ. ಬಹಳ ಜನ ಅರ್ಜಿ ಹಾಕಿದ್ದೀರಿ. ಎಲ್ಲರಿಗೂ ಸಹಾಯ ಮಾಡಲು ಆಗಲಿಲ್ಲ. ಎಲ್ಲವನ್ನೂ ಸರಿಯಾಗಿ ಮಾಡಿದ್ದೇವೆ ಅಂತ ನಾನು ಹೇಳೋದಿಲ್ಲ. ಕೆಲವೊಂದು ತಪ್ಪುಗಳನ್ನು ಸಹ ಮಾಡಿದ್ದೇವೆ. ಆದರೆ, ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋದನ್ನು ಬಿಡಬೇಕು. ಮುಂದೆ ಇನ್ನಷ್ಟು ಹೋರಾಟ ಮಾಡಬೇಕು. ಕಳೆದ ಚುನಾವಣೆ ವೇಳೆ ಬಿಜೆಪಿ, ಜೆಡಿಎಸ್ ಅನ್ನು ಸೋಲಿಸುವ ಪಣ ತೊಟ್ಟಿದ್ದೆವು. ಈಗಲೂ ಅದನ್ನು ಮತ್ತೆ ಮಾಡಬೇಕಿದೆ. ಜನರನ್ನು ನಮ್ಮ ಜತೆ ಸೇರಿಸಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ನಾವೆಲ್ಲ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಯೋಗಕ್ಕಿಂತ ಯೋಗಕ್ಷೇಮ ಮುಖ್ಯ: ಡಿಕೆಶಿ
ಎಲ್ಲಿರಿಗೂ ಯೋಗ ಬರುತ್ತದೆ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಬಂದಿರುವ ಯೋಗವನ್ನ ಯಾವ ರೀತಿ ಉಪಯೋಗಿಸಿಕೊಳ್ಳಬೇಕೆಂಬುದು ಮುಖ್ಯ. ಜನರ ವಿಶ್ವಾಸ ಗಮನಿಸಿಕೊಂಡು ಅದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿದು ನಾನು ಮತ್ತು ಸಿಎಂ ಸಿದ್ದರಾಮಯ್ಯ ಅವರು ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೊಂದೇ ಗುರಿಯಾಗಿತ್ತು
224 ಸೀಟ್‌ಗೆ 218 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಒಮ್ಮತದಿಂದ ಮಾಡಿದ್ದೇವೆ. ಇದು ದೇಶಕ್ಕೆ ಮಾದರಿಯಾಗಿದೆ. ಎಲ್ಲೆಡೆ ಕರ್ನಾಟಕ ಮಾದರಿ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. ನಮಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೊಂದೇ ಗುರಿಯಾಗಿತ್ತು. ನಿಮಗೂ ನಿದ್ರೆ ಮಾಡಲು ಬಿಡುವುದಿಲ್ಲ. ನಾನೂ ನಿದ್ದೆ ಮಾಡೋದಿಲ್ಲ ಎಂದು ಹೇಳಿದ್ದೆ. ಆಗ ಕೆಲವರು ಬಯ್ದುಕೊಂಡರು, ಮತ್ತೆ ಹಲವರು ಖುಷಿಯಾದರು. ಪ್ರತಿ ಬೂತ್‌ನಲ್ಲೂ ಡಿಜಿಟಲ್ ತಂತ್ರಜ್ಞಾನ ಅಳವಡಿಸಲು ಹೇಳಿದ್ದೆ. ಇಡೀ ದೇಶದ ನಾಯಕರು ನಮ್ಮ ರಾಜ್ಯದತ್ತ ನೋಡುತ್ತಿದ್ದರು. ದೇಶದ ಎಲ್ಲ ವಿರೋಧ ಪಕ್ಷಗಳ ನಾಯಕರು ಕರ್ನಾಟಕಕ್ಕೆ ಬಂದಿದ್ದರು. ಇಂಡಿಯಾ ಹೆಸರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದರು ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಯಾರನ್ನೋ ಹೆದರಿಸಿದಂತೆ ಈ ಡಿ.ಕೆ. ಶಿವಕುಮಾರ್‌ನನ್ನು ಹೆದರಿಸೋಕೆ ಆಗಲ್ಲ. ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮುಜುಗರ ಉಂಟು ಮಾಡುವುದಿಲ್ಲ. ಯಾರು 15 ಪರ್ಸೆಂಟ್ ಕೇಳಿದ್ದಾರೆ ಅನ್ನೋದನ್ನೂ ಕೂಡ ತನಿಖೆ ಮಾಡಿಸುತ್ತೇನೆ. ನಾನು ಮುಜುಗರ ಉಂಟು ಮಾಡುವ ಕೆಲಸ ಮಾಡಿದ್ದಿದ್ದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಂದು ನನ್ನ ಜತೆಗೆ ಜೈಲಿನಲ್ಲಿ ಮಾತನಾಡುತ್ತಿದ್ದರಾ? ಗುತ್ತಿಗೆದಾರರ ಬಗ್ಗೆ ನನ್ನ ಹತ್ತಿರ ಎಲ್ಲ ದಾಖಲೆ ಇದೆ. ಎರಡು ಮೂರು ದಿನ ಆಗಲಿ, ಎಲ್ಲ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ತರುವಂತಹ ಯಾವ ಕೆಲಸವನ್ನೂ ನಾನು ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅತ್ತ ಡಿಸಿಎಂ ಭಾಷಣ, ಇತ್ತ ಸಿಎಂ ನಿದ್ದೆ
ಹೆಣದಲ್ಲೂ ಹಣ ಹೊಡೆದರಲ್ಲ ಅದನ್ನೆಲ್ಲ ಕಂಡು ಹಿಡಿಬೇಕೋ ಬೇಡವೋ? ಎಲ್ಲ ದಾಖಲೆ ರೆಡಿ ಮಾಡಿ ಇಟ್ಟಿದ್ದೇನೆ. ಪಾಪ ಸಚಿವ ಚೆಲುವರಾಯಸ್ವಾಮಿ ಮೇಲೆ ಅರ್ಜಿ ಬರೆದುಕೊಟ್ಟಿದ್ದಾರಂತೆ. ಮೊದಲು ಅವರ ಮೇಲೆ, ಆಮೇಲೆ ನನ್ನ ಮೇಲೆ ಆರೋಪ ಮಾಡಿದರು. ಸಿ.ಟಿ. ರವಿಯಂತೆ, ಅಶ್ವಥ್ ನಾರಾಯಣನಂತೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ. ಸಿಎಂ ಎಲ್ಲ ಬಹಿರಂಗ ಮಾಡು ಅಂತ ಹೇಳಿದ್ದಾರೆ. ಪ್ರೆಸ್‌ಮೀಟ್ ಕರೆದು ದಾಖಲೆ ಬಿಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ನಮಗೆ ಜಿಲ್ಲಾ, ತಾಲೂಕು ಹಾಗೂ ಬಿಬಿಎಂಪಿ ಚುನಾವಣೆ ಬಹಳ ಮುಖ್ಯ. ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಕೋರ್ಟ್‌ನಲ್ಲಿದೆ. ಬಿಜೆಪಿಯವರು 243 ವಾರ್ಡ್‌ಗಳನ್ನು ಮಾಡಿದ್ದರು. ನಾವು ಈಗ ಅದನ್ನು 223ಕ್ಕೆ ಇಳಿಸಿದ್ದೇವೆ. ನಾಳೆ, ನಾಡಿದ್ದು ಆಕ್ಷೇಪಣೆ ಸಲ್ಲಿಸಲು ಆದೇಶ ಹೊರಬೀಳಲಿದೆ. ಬೇರೆ ಪಕ್ಷಗಳಿಗೆ ಏನೇನು ಆಕ್ಷೇಪ ಇದೆಯೋ ಅದನ್ನು ಸಲ್ಲಿಸಬಹುದು. ಚುನಾವಣೆಗೆ ಎಲ್ಲರೂ ಸಿದ್ಧರಾಗಿರಬೇಕು. ಚುನಾವಣೆ ನಡೆಸಲು ನಾವು ಬದ್ಧರಾಗಿದ್ದೇವೆ. ಇದರಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ನ್ಯಾಯಾಲಯ ಹೇಳಿದರೆ ಚುನಾವಣೆ ನಡೆಸಲು ಬದ್ಧರಾಗಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಎಚ್‌ಡಿಕೆ ಪೆನ್‌ಡ್ರೈವ್ ಬಗ್ಗೆ ಸಿಎಂ ವ್ಯಂಗ್ಯ; ವಿಡಿಯೊ ಇಲ್ಲಿದೆ
ಎಚ್‌ಡಿಕೆ ಹಿಟ್ ಆ್ಯಂಡ್ ರನ್ ಕೇಸ್
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಪೆನ್‌ಡ್ರೈವ್ ಇಟ್ಟುಕೊಂಡಿದ್ದೇನೆ ಎಂದು ಹೇಳಿ ತೆಗೆದು ತೋರಿಸೋದು, ಒಳಗಿಟ್ಟುಕೊಳ್ಳೋದು ಮಾಡುತ್ತಿದ್ದಾರೆ. ಬಿಜೆಪಿಯವರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಕೂಡಲೇ ವರ್ಗಾವಣೆ ದಂಧೆ ಅಂತ ಆರೋಪ ಮಾಡಿದರು. ಯಾಕೆ ನಿಮ್ಮ ಕಾಲದಲ್ಲಿ ವರ್ಗಾವಣೆಗಳು ನಡೆದೇ ಇಲ್ವಾ? ಚೆಲುವರಾಯಸ್ವಾಮಿ ಸದನದಲ್ಲೇ ಕುಮಾರಸ್ವಾಮಿ ಸರ್ಕಾರದ ವರ್ಗಾವಣೆ ಬಗ್ಗೆ ಎಲ್ಲ ಮಾಹಿತಿ ಬಿಚ್ಚಿಟ್ಟರು. ಕುಮಾರಸ್ವಾಮಿ ಇದಾರಲ್ಲ ಅವರದ್ದು ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸೇ. ಬಿಜೆಪಿಯವರಿಗೆ ತನಿಖೆಗಳಿಂದ ನಡುಕ ಶುರುವಾಗಿದೆ. ಭಂಡತನದಿಂದ ಮಾತನಾಡುತ್ತಿದ್ದವರಿಗೆ ಈಗ ಭಯ ಶುರುವಾಗಿದೆ. ತನಿಖಾ ವರದಿಗಳು ಬರಲಿ ಅವರಿಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಲೋಕಸಭೆ ಚುನಾವಣೆಯಲ್ಲಿ ಶೇಕಡಾ ನೂರಕ್ಕೆ ನೂರು ಬಿಜೆಪಿ ಸೋಲುತ್ತದೆ. 25 ಸ್ಥಾನ ಪಡೆದಿದ್ದ ಬಿಜೆಪಿಯವರು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ, ಅವರು ಯಾವ ಸ್ಥಿತಿಗೆ ಹೋಗಿದ್ದಾರೆ ಎಂದು? ಅವರಿಗೆ ಭಯ ಶುರುವಾಗಿದೆ. ನಾನು ಹೈಕಮಾಂಡ್‌ಗೆ 20 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೇನೆ. ಈ ಜೆಡಿಎಸ್‌ನವರು ಕಳೆದ ಬಾರಿ 1 ಸ್ಥಾನ ಗೆದ್ದಿದ್ದರು. ಈ ಬಾರಿ ಅದನ್ನೂ ಗೆಲ್ಲಲಾರರು ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ. ಈ ವರ್ಷ ಶಿಕ್ಷಣ ನೀತಿ ಜಾರಿ ಸ್ವಲ್ಪ ತಡವಾಯಿತು ಎಂದು ತಿಳಿಸಿದರು.