Site icon Vistara News

Prabuddha Murder Case: ಪ್ರಬುದ್ಧ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಸಿಎಂ

Prabuddha Death Case

ಬೆಂಗಳೂರು: ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 15 ರಂದು ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧ ಸಾವು ಪ್ರಕರಣವನ್ನು (Prabuddha Murder Case) ಸಿಐಡಿ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು. ಮನವಿಯನ್ನು ಸಿಎಂ ಪುರಸ್ಕರಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದಾರೆ.

ವಿದ್ಯಾರ್ಥಿನಿ ತಾಯಿ ನೀಡಿದ ಮನವಿ ಪತ್ರದಲ್ಲೇನಿದೆ?

ಮಗಳ ಭೀಕರ ಹತ್ಯೆಯ ತನಿಖೆಯಲ್ಲಿ ಸ್ಥಳೀಯ ಪೋಲಿಸರ ಅಸಹಕಾರ, ಉದ್ದೇಶಪೂರ್ವಕ ನಿರ್ಲಕ್ಷ್ಯತೆ, ಸಾಕ್ಷ್ಯ ನಾಶ ಯತ್ನ, ಕೊಲೆಗಡುಕರೊಂದಿಗಿನ ಶಾಮೀಲುದಾರಿಕೆ, ಸಂತ್ರಸ್ತ ತಾಯಿಯಾದ ನನಗೆ ಬೆದರಿಕೆ ವಿಚಾರಗಳ ಬಗ್ಗೆ ಸಮಗ್ರ ತನಿಖೆ, ನ್ಯಾಯ ಮತ್ತು ರಕ್ಷಣೆಗಾಗಿ ಸಿಐಡಿಗೆ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಕೆ.ಆರ್.ಸೌಮ್ಯ ಕೋರಿದ್ದಾರೆ.

ಇದನ್ನೂ ಓದಿ | Actor Darshan: ಪತ್ನಿ, ಮಗ ನೋಡುತ್ತಿದ್ದಂತೆ ಕಣ್ಣೀರಿಟ್ಟ ನಟ ದರ್ಶನ್; ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ʻದಾಸʼ!

ಮೇ 15ರಂದು ಸಂಜೆ ಮನೆಯಲ್ಲೇ ಮಗಳ ಭೀಕರ ಹತ್ಯೆ ಮಾಡಲಾಗಿದೆ. ಹತ್ಯೆಯ ಮೊದಲ ದಿನದಿಂದಲೂ ಸುಬ್ರಮಣ್ಯಪುರ ಪೋಲೀಸ್ ಠಾಣೆಯ ತನಿಖಾಧಿಕಾರಿಗಳು ಮತ್ತು ಅವರ ತಂಡ ಸಂಶಯಾಸ್ಪದವಾಗಿ ವರ್ತಿಸುತ್ತಾ ನನ್ನ ಮನಸ್ಸಿಗೆ ಬಹು ಘಾತ ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಪದೇ ಪದೇ ಹೇಳಿದರೂ ಕೇಳಿಸಿಕೊಳ್ಳದ ತನಿಖಾ ತಂಡ ಮೊದಲ ಮೂರ್ನಾಲ್ಕು ದಿನವು ಇದನ್ನು ಆತ್ಮಹತ್ಯೆ ಎಂದೇ ಬಿಂಬಿಸುವ ಪ್ರಯತ್ನ ಮಾಡಿ, ಕೊಲೆಗಡುಕ ಮತ್ತು ಕೊಲೆಗಡುಕನಿಗೆ ಎಲ್ಲ ರೀತಿಯ ಸಹಾಯ ಮತ್ತು ಸಹಾಯ ಮಾಡಿ, ಕೊಲೆಯ ಸಂಗತಿಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ ಕೊಲೆಗಡುಕನ ತಂದೆ ತಾಯಿಯರನ್ನೂ ರಕ್ಷಿಸುವ ದುರುದ್ದೇಶದ ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.

ಆರೋಪಿ ಕಡೆಯವರು ಪೊಲೀಸರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದು, ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಪೋಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕಾಟಾಚಾರಕ್ಕೆ ಮಹಜರ್ ನಡೆಸಿದ್ದಾರೆ. ಜೆಜೆಬಿಯಲ್ಲಿ ವಕೀಲರಿಗೆ ಯಾವುದೇ ಮಾಹಿತಿ ಒದಗಿಸದೇ, ಆಪಾದಿತನು ಹತ್ತೇ ದಿನಕ್ಕೆ ಜಾಮೀನು ಪಡೆದು ನಿಶ್ಚಿಂತನಾಗಿ ಓಡಾಡಿಕೊಂಡಿದ್ದಾನೆ. ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದ ನನಗೆ ಈಗ ಜೀವಭಯವೂ ಉಂಟಾಗಿದೆ. ನನ್ನ ವಯಸ್ಸಾದ ತಾಯಿ ಮತ್ತು ಮಗನ ಕುರಿತೂ ಆತಂಕವಾಗಿದೆ. ಹೀಗಾಗಿ ಪ್ರಬುದ್ಧ ಹತ್ಯೆಯನ್ನು ಸಿ.ಐ.ಡಿ.ಗೆ ವಹಿಸಿ ಅಪರಾಧಿ ಮತ್ತು ಅವನಿಗೆ ಬೆಂಬಲ ನೀಡಿದವರಿಗೆ ತಕ್ಕ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂಗ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ?

ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸದ ಬಾತ್‌ ರೂಂನಲ್ಲಿ ಮೇ 15ರ ಮಧ್ಯಾಹ್ನ ಬಾಲಕಿ ಪ್ರಬುದ್ಧ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಕುತ್ತಿಗೆ ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರಿಂದ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಬುದ್ಧ, ಆ ದಿನ ತಾಯಿ ಸೌಮ್ಯಗೆ ಕರೆ ಮಾಡಿ ಫ್ರೆಂಡ್ಸ್‌ ಜತೆಗೆ ಇದ್ದೀನಿ ಪಾನಿಪುರಿ ತಿಂದು ಮನೆಗೆ ಹೋಗುತ್ತೀನಿ ಅಂದಿದ್ದಳು. ನಂತರ ತಾಯಿ ಆಫೀಸ್‌ ಮುಗಿಸಿ ಮನೆಗೆ ಬಂದು ನೋಡಿದಾಗ ಬಾತ್‌ ರೂಮಿನಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಮಗಳ ಮೃತದೇಹ ಪತ್ತೆಯಾಗಿತ್ತು. ಮನೆಯ ಮುಂದಿನ ಡೋರ್‌ ಲಾಕ್‌ ಆಗಿತ್ತು. ಆದರೆ ಹಿಂದಿನ ಡೋರ್‌ ಓಪನ್‌ ಆಗಿತ್ತು ಎಂದು ತಾಯಿ ಸೌಮ್ಯ ಘಟನೆ ವಿವರ ನೀಡಿದ್ದರು.

ಮಗಳ ಫೋನ್‌ ಸೋಫ್‌ ಮೇಲೆ ಇತ್ತು. ಆಕೆಯನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಬರುವಷ್ಟರಲ್ಲಿ ಫೋನ್‌ ಕೂಡ ಕಳ್ಳತನ ಆಗಿತ್ತು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳು ಅಲ್ಲ. ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಸಾಬೀತಾಗಿತ್ತು. ನಂತರ ಪ್ರಬುದ್ಧ ತಮ್ಮನ ಸ್ನೇಹಿತನೇ ಕೊಲೆ ಮಾಡಿದ್ದ ವಿಷಯ ಬಯಲಾಗಿತ್ತು. ಪ್ರಬುದ್ಧಳ ತಮ್ಮ ಹಾಗೂ ಹತ್ಯೆ ಮಾಡಿದ ಆರೋಪಿ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ತನ್ನ ಸ್ನೇಹಿತನ ಕನ್ನಡಕವನ್ನು ಡ್ಯಾಮೇಜ್ ಮಾಡಿದ್ದ. ಇದನ್ನು ರಿಪೇರಿ‌ ಮಾಡಿಸಿ ಕೊಡು ಎಂದು ಸ್ನೇಹಿತ ಪಟ್ಟು ಹಿಡಿದಿದ್ದ. ಆದರೆ ರಿಪೇರಿಗೆ ಕಾಸಿಲ್ಲದೇ ಅಪ್ರಾಪ್ತ ಆರೋಪಿ ಸುಮ್ಮನಾಗಿದ್ದ.

ಇದನ್ನೂ ಓದಿ | Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

ಕೊಲೆಯಾದ ದಿನ ಪ್ರಬುದ್ಧ ಮನೆಗೆ ಬಂದಿದ್ದ ಆರೋಪಿ, ಪರ್ಸ್‌ನಲ್ಲಿದ್ದ ಎರಡು ಸಾವಿರ ರೂಪಾಯಿ ಕದ್ದಿದ್ದ. ಆರೋಪಿ ಕದಿಯುವುದನ್ನು ಕಂಡ ಪ್ರಬುದ್ಧ ಪ್ರಶ್ನೆ ಮಾಡಿದ್ದಳು. ಇದರಿಂದ ಗಾಬರಿಗೊಂಡ ಆರೋಪಿ ಕ್ಷಮಿಸಿಬಿಡು ಎಂದು ಕಾಲು ಹಿಡಿದುಕೊಂಡಿದ್ದ. ಈ ಗಲಿಬಿಲಿಯಲ್ಲಿ ಆರೋಪಿ ಕಾಲು ಹಿಡಿದಾಗ ಪ್ರಬುದ್ಧ ಆಯ ತಪ್ಪಿ ಬಿದ್ದಿದ್ದಳು. ಈ ವೇಳೆ ತಲೆಗೆ ಪೆಟ್ಟು ಬಿದ್ದಾಗ, ಪ್ರಜ್ಞೆ ತಪ್ಪಿದ್ದಳು. ಇದರಿಂದ ಆತಂಕಗೊಂಡ ಆರೋಪಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಕೈ ಹಾಗೂ ಕುತ್ತಿಗೆಯನ್ನು ಕೊಯ್ದು ಅಲ್ಲಿಂದ ಪರಾರಿ ಆಗಿದ್ದ. ಪ್ರಜ್ಞೆ ತಪ್ಪಿದ್ದ ಪ್ರಬುದ್ಧ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು.

Exit mobile version