ಚಿಕ್ಕಬಳ್ಳಾಪುರ: ಅತ್ತ ರಾಜ್ಯ ರಾಜಕೀಯದಲ್ಲಿ ಅನೇಕ ಬದಲಾವಣೆಗಳು, ಬೆಳವಣಿಗೆಗಳು ನಡೆಯುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸುದ್ದಿಯಲ್ಲಿರುತ್ತಾರೆ. ಆಗಾಗ ಕ್ಷೇತ್ರ ಸಂಚಾರ ಮಾಡುವ ಮೂಲಕ ಸುದ್ದಿಯಲ್ಲಿರುವ ಅವರು, ಈಗ “ಆಟೋ ರಾಜ” ಆಗಿದ್ದಾರೆ. ಖಾಕಿ ಶರ್ಟ್ ಧರಿಸಿ ಆಟೋವನ್ನು ಚಲಾಯಿಸುವ ಮೂಲಕ ಆಟೋ ಡ್ರೈವರ್‌ಗಳ (Auto Driver) ಪಾಲಿನ “ಶಂಕರ್ ನಾಗ್” (Shankar Nag) ಆಗಿದ್ದಾರೆ. ಇದರ ಜತೆಗೆ ಚಿಕ್ಕಬಳ್ಳಾಪುರ ನಗರದ ಆಟೋ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ (ಜುಲೈ 30) ಕಾರ್ಯಕ್ರಮವನ್ನು ನಡೆಸಿದ ಅವರು, ಆಟೋ ಚಾಲಕರ ಕುಟುಂಬಕ್ಕೆ 5 ಸಾವಿರ ರೂಪಾಯಿ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ನಗರದಲ್ಲಿರುವ ಎಲ್ಲ ಆಟೋ ಚಾಲಕರಿಗೆ 5 ಸಾವಿರ ರೂಪಾಯಿ ಧನಸಹಾಯ ಮಾಡಲಿದ್ದು, ಪ್ರತಿ ವರ್ಷವೂ ಈ ಕೆಲಸವನ್ನು ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Karnataka Politics : ಸಚಿವರ ವಿರುದ್ಧದ ಪತ್ರಕ್ಕೆ ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ: ಬಿ.ಆರ್. ಪಾಟೀಲ್
ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವಂತೆ ಕರೆ
ನೂರಾರು ಆಟೋ ಚಾಲಕರಿಗೆ ಧನಸಹಾಯ ಮಾಡಿದ ಪ್ರದೀಪ್ ಈಶ್ವರ್, ತಾವು ಇನ್ನು ಮುಂದೆ ಪ್ರತಿವರ್ಷ ಆಟೋ ಚಾಲಕರಿಗೆ ಧನಸಹಾಯ ಮಾಡುವುದಾಗಿ ಘೋಷಣೆ ಮಾಡಿದರು. ಧನಸಹಾಯವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವಂತೆ ಕರೆ ನೀಡಿದರು. ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗಳನ್ನು ನಿಲ್ಲಿಸಿ ಧನಸಹಾಯ ಮಾಡುತ್ತಿದ್ದರು.
ಡಾ. ಕೆ. ಸುಧಾಕರ್ ಸವಾಲಿಗೆ ಪ್ರದೀಪ್ ಈಶ್ವರ್ ಉತ್ತರ
ಮಾಜಿ ಶಾಸಕ ಡಾ. ಕೆ. ಸುಧಾಕರ್ (Dr K Sudhakar) ಮತ್ತು ಚಿಕ್ಕಬಳ್ಳಾಪುರದ ಹಾಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕದನ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಪ್ರದೀಪ್ ಈಶ್ವರ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಂದು ಚುನಾವಣೆಗೆ ನಿಲ್ಲಲಿ, ನಾನೂ ಬರ್ತೇನೆ ಎಂದು ಸುಧಾಕರ್ ಅವರು ಶುಕ್ರವಾರವಷ್ಟೇ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಯಾಗಿ ವಾಗ್ದಾಳಿ ಮಾಡಿರುವ ಪ್ರದೀಪ್ ಈಶ್ವರ್ ನಿಮಗೆ ನಿಮ್ಮ ಊರಲ್ಲೇ ಗೌರವ ಇಲ್ಲ ಎಂದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಮಾತನಾಡಿದ್ದ ಅವರು ಮಾತಿನ ಆರಂಭದಲ್ಲೇ ʻʻಮಾನ್ಯ ಮಾಜಿ ಶಾಸಕ ಮತ್ತು ಜೀವನಪೂರ್ತಿ ಮಾಜಿ ಶಾಸಕರಾಗಿಯೇ ಉಳಿಯಲಿರುವ ಡಾ. ಕೆ. ಸುಧಾಕರ್ʼʼ ಎಂದು ವ್ಯಂಗ್ಯವಾಡಿದ್ದರು.
ʻʻಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ಪಕ್ಷೇತರವಾಗಿ ಸ್ಪರ್ಧೆ ಮಾಡೋಣ ಅಂತ ಹೇಳ್ತೀರಲ್ವಾ ಸುಧಾಕರ್. ಯಾಕೆ ಬಿಜೆಪಿಯವರು ನಿಮಗೆ ಟಿಕೆಟ್ ಕೊಡಲ್ವಾ?ʼʼ ಎಂದು ಪ್ರದೀಪ್ ಈಶ್ವರ್ ಗೇಲಿ ಮಾಡಿದ್ದಾರೆ. ʻʻತಾಕತ್ ಇದ್ರೆ ಪಕ್ಷೇತರವಾಗಿ ಸ್ಪರ್ಧೆ ಮಾಡು ಅಂತೀರಲ್ವಾ? ನಾನು ನಿಮ್ಮನ್ನು ಸೋಲಿಸಿ ಇನ್ನೂ ಎರಡು ತಿಂಗಳಷ್ಟೇ ಆಗಿರುವುದು. ಮುಂದಾದರೂ ಯಾವುದಾದರೂ ಬೇರೆ ಕ್ಷೇತ್ರ ಹುಡುಕಿಕೊಳ್ಳಿ. ಈ ಕ್ಷೇತ್ರದ ಮೇಲೆ ನಂಬಿಕೆ ಇಟ್ಟುಕೊಂಡರೆ ಇನ್ನೂ ಐದು ವರ್ಷ ಸಫರ್ ಆಗ್ತೀರಾʼʼ ಎಂದು ಎಚ್ಚರಿಸಿದ್ದಾರೆ.
ಪರೇಸಂದ್ರದಲ್ಲೇ ಆ ಮನುಷ್ಯನಿಗೆ ಗೌರವ ಇಲ್ಲ
ʻʻಸುಧಾಕರ್ ಮುಖ ನೋಡಿದರೆ ಐನೂರೂ ವೋಟೂ ಬರಲ್ಲ. ನನಗೆ ಐದು ಸಾವಿರ ಓಟಾದ್ರೂ ಬರುತ್ತದೆ. ಕಳೆದ ಚುನಾವಣೆಯಲ್ಲಿ ಪರೇಸಂದ್ರದಲ್ಲಿ ಅವರಿಗೆ ಸಿಕ್ಕಿದ್ದು ಆರುನೂರು ಓಟು, ನನಗೆ ಯಾಕೆ ಸಾವಿರದ ಆರನೂರು ಓಟು ಅಂತ ಅವರೇ ಯೋಚನೆ ಮಾಡ್ಲಿ. ಹುಟ್ಟೂರಲ್ಲೇ ಆ ಮನುಷ್ಯನಿಗೆ ಗೌರವ ಇಲ್ಲʼʼ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: CT Ravi : ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ, ಕೇಳಿ ಪಡೆಯಲ್ಲ ಎಂದ ಸಿ.ಟಿ. ರವಿ; ದೆಹಲಿಗೆ ಬುಲಾವ್?
ಅಧಿಕಾರ ಯಾವತ್ತೂ ಶಾಶ್ವತ ಅಲ್ಲ
ʻʻನಾನು ಯಾವತ್ತೂ ಹಿಂದೆ ಮುಂದೆ ಪೊಲೀಸ್ ಜೀಪ್‌ಗಳನ್ನು ಇಟ್ಟುಕೊಂಡು ಓಡಾಡಿದವನಲ್ಲ. ನಾನು ನಿಮ್ಮ ಹುಡುಗ ಸರ್, ಅಧಿಕಾರ ನನಗೂ ಶಾಶ್ವತ ಅಲ್ಲ ನಿಮಗೂ ಶಾಶ್ವತ ಅಲ್ಲʼʼʼ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.