Site icon Vistara News

Pradeep Eshwar: ಪ್ರತಾಪ್‌ಸಿಂಹ ಅವರೇ ಬಾಯಿ ಮುಚ್ಕೊಂಡಿರ್ಬೇಕು; ಪ್ರದೀಪ್‌ ಈಶ್ವರ್ ಠಕ್ಕರ್‌‌

pradeep Eshwar pratapsimha

#image_title

ಚಿಕ್ಕಬಳ್ಳಾಪುರ: ನಾನೇನೋ ಹೊಸ ಶಾಸಕ. ಮೊದಲ ಬಾರಿ ಗೆದ್ದಿದ್ದೇನೆ. ನೀವು ಸಂಸದರಾಗಿ ಒಂಬತ್ತು ವರ್ಷ ಆಯ್ತಲ್ವಾ? ನಿಮಗಿನ್ನೂ ಸರಿಯಾಗಿ ಯಾರೂ ಮಾತು ಕಲಿಸಿಲ್ವಲ್ವ?- ಹೀಗೆಂದು ಮೈಸೂರು ಸಂಸದ ಪ್ರತಾಪ್‌ ಸಿಂಹ (MP Pratapsimha) ಅವರಿಗೆ ಠಕ್ಕರ್‌ ನೀಡಿದ್ದಾರೆ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar). ಜತೆಗೆ ಪ್ರತಾಪ್‌ ಸಿಂಹ ಅವರೇ ಬಾಯಿ ಮುಚ್ಕೊಂಡಿರಬೇಕು ಎಂದೂ ಹೇಳಿದ್ದಾರೆ.

ಶಾಸಕರಾಗಿ 40 ವರ್ಷಗಳ ಅನುಭವ ಇರುವ ಸಿದ್ದರಾಮಯ್ಯ ಅವರು ಹೊಸ ಶಾಸಕರಿಗೆ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಓರಿಯೆಂಟೇಷನ್‌ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದು ಪ್ರತಾಪ್‌ಸಿಂಹ ಅವರು ಇತ್ತೀಚೆಗೆ ಹೇಳಿದ್ದರು. ಅಕ್ಕಿ ವಿಚಾರದಲ್ಲಿ ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಪ್ರದೀಪ್‌ ಈಶ್ವರ್‌ ಅವರು ತೇಜಸ್ವಿ ಸೂರ್ಯ ಮತ್ತು ಪ್ರತಾಪ್‌ ಸಿಂಹ ಅವರಿಗೆ ನೀಡಿದ ಬಹಿರಂಗ ಕರೆಗೆ ನೀಡಿದ ಬಹಿರಂಗ ಪ್ರತಿಕ್ರಿಯೆ ಇದಾಗಿತ್ತು.

ಪ್ರದೀಪ್‌ ಈಶ್ವರ್‌ ಅವರು ಶುಕ್ರವಾರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ, ಜನರ ಕಷ್ಟ ಸುಖಗಳನ್ನು ಅಲಿಸುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.

ಪ್ರದೀಪ್‌ ಈಶ್ವರ್‌ಗೆ ಓಪನ್‌ ಚಾಲೆಂಜ್

‌ಅಕ್ಕಿ ನೀಡುವ ವಿಚಾರದಲ್ಲಿ ಬಹಿರಂಗ ಚರ್ಚೆಯ ಆಹ್ವಾನವನ್ನು ಪ್ರದೀಪ್‌ ಈಶ್ವರ್‌ ಮತ್ತೆ ಪ್ರಕಟಿಸಿದರು. ʻನಿಮಗೆ ತಾಕತ್ ಇದ್ರೆ ಪ್ರಾಮಾಣಿಕರಾದ್ರೆ ಬಹಿರಂಗ ಚರ್ಚೆಗೆ ಬನ್ನಿ. ಸಾವಿರಾರು ಜನರನ್ನು ಕೂರಿಸಿ ನೀವೇನ್ ಮಾಡಿದ್ದೀರಿ ಹೇಳಿ, ಸಿದ್ದರಾಮಯ್ಯ ಸಾಹೆಬ್ರು ಏನ್ ಮಾಡಿದ್ದಾರೆ ಅಂತ ನಾನು ಹೇಳ್ತೇನೆʼʼ ಎಂದು ಹೇಳಿದರು.

ʻʻಪ್ರಾಮಾಣಿಕರಾಗಿದ್ದರೆ ಬನ್ನಿ ಸಾರ್ ಇಲ್ಲ ಅಂದ್ರೆ ನಾನೇನ್ ಮಾಡಕ್ಕಾಗಲ್ಲʼʼ ಎಂದು ಪ್ರದೀಪ್‌ ಠಕ್ಕರ್‌ ನೀಡಿದರು.

ʻಮೈಸೂರು ಸಂಸದರಾದ ಪ್ರತಾಪ್‌ ಸಿಂಹ ಅವರೇ ನೀವು ಬಾಯಿ ಮುಚ್ಕೊಂಡಿರ್ಬೇಕು. ಮಾತಾಡೋಕೆ ನಮಗೂ ಬರ್ತದೆ. ನಿಮಗೆ ನಿಜಕ್ಕೂ ಮಾತನಾಡೋಕೆ ಬರ್ತದೆ ಅಂತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ. ನೀವು ಏನೇನು ಮಾಡಿದ್ದೀರಿ ಅಂತ ಹೇಳಿ, ಸಿದ್ದರಾಮಯ್ಯ ಅವರು ಏನೇನು ಮಾಡಿದ್ದಾರೆ ಅಂತ ನಾನೂ ಹೇಳ್ತೀನಿʼʼ ಎಂದರು ಪ್ರದೀಪ್‌ ಈಶ್ವರ್‌.
ನೀವು ಎರಡೂ ಚುನಾವಣೆಗಳನ್ನು ಗೆದ್ದಿರುವುದು ಮೋದಿ ಅವರ ಹೆಸರಿನಲ್ಲಿ. ನಿಮ್ಮ ನೆಲೆಯಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ ಎಂದು ಮೊದಲು ಹೇಳಿ ಎಂದ ಸವಾಲು ಹಾಕಿದರು.

ನಿಮಗೆ ಯಾರೂ ಮಾತು ಕಲಿಸಿಲ್ವಾ?

ಸಿದ್ದರಾಮಯ್ಯನವರು ಹೊಸ ಶಾಸಕರಿಗೆ ಮಾತು ಕಲಿಸಬೇಕು ಎಂಬ ಪ್ರತಾಪ್‌ಸಿಂಹ ಮಾತಿಗೆ ಪ್ರತಿಕ್ರಿಯಿಸಿದ ಅವರು, ʻʻನಾನೇನಾದ್ರೂ ತಪ್ಪು ಮಾಡಿದ್ರೆ ಸಿದ್ದರಾಮಯ್ಯ ನನಗೆ ಬುದ್ದಿ ಹೇಳ್ತಾರೆ. ಅವರು ಏನೇ ಬುದ್ಧಿ ಹೇಳಿದ್ರು ನಾನ್ ಕೇಳ್ತೇನೆ. ನಾನು ಇನ್ನೂ ಮೊದಲನೇ ಸಾರಿ‌ ಶಾಸಕನಾಗಿದ್ದೇನೆ. ಪ್ರತಾಪ್ ಸಿಂಹ ಒಂಬತ್ತು ವರ್ಷ ಆಯಿತಲ್ಲಾ ಸಂಸದರಾಗಿ. ಪ್ರತಾಪ್ ಸಿಂಹ ಗೆ ಬಿಜೆಪಿಯವರು ಮಾತಾಡೋಕೆ ಕಲಿಸಿಲ್ವಾ?ʼʼ ಎಂದು ಪ್ರಶ್ನಿಸಿದರು.

ಸಚಿವ ಡಾ. ಎಂ.ಸಿ. ಸುಧಾಕರ್‌ ಹಾಡಿ ಹೊಗಳಿದ ಪ್ರದೀಪ್‌

ಈ ನಡುವೆ, ಚಿಕ್ಕಬಳ್ಳಾಪುರ ಸಚಿವ ಡಾ. ಎಂ.ಸಿ ಸುಧಾಕರ್ ಅವರನ್ನು ಹಾಡಿ ಹೊಗಳಿದರು ಶಾಸಕ ಪ್ರದೀಪ್ ಈಶ್ವರ್. ʻʻಚಿಕ್ಕಬಳ್ಳಾಪುರದಲ್ಲಿ ಮೊದಲು ಪ್ಲೆಕ್ಸ್ ಬ್ಯಾನ್ ಮಾಡಿದ್ದೇ ಸಚಿವ ಡಾ. ಎಂ.ಸಿ ಸುಧಾಕರ್. ಚಿಕ್ಕಬಳ್ಳಾಪುರ ವಿಷನ್‌ ಕಾನ್ಸೆಪ್ಟ್ ಸುಧಾಕರ್ ಸಾಹೇಬರದ್ದು. ಸಚಿವರಾಗಿ ಬಂದಾಗ ಚಿಂತಾಮಣಿಯಲ್ಲಿ ಒಂದು ಫ್ಲೆಕ್ಸ್ ಕಟ್ಟಿಸಲಿಲ್ಲ. ಅವರ ಸ್ಪೂರ್ತಿಯಿಂದಲೇ ನಾನು ಚಿಕ್ಕಬಳ್ಳಾಪುರದಲ್ಲಿ ಫ್ಲೆಕ್ಸ್ ಬ್ಯಾನ್ ಮಾಡಿದ್ದು. ಅವರ ಹುಟ್ಟು ಹಬ್ಬಕ್ಕೆ ಫ್ಲೆಕ್ಸ್‌ ಕಟ್ಟಿದ್ದರೆ ಫೋನ್‌ ಮಾಡಿ ತೆಗಿಸಿ ಅಂತ ಹೇಳಿದ್ರು. ಅವರ ಬರ್ತ್‌ ಡೇ ಬ್ಯಾನರ್ ಅವರೇ ತೆಗಿಸ್ತಾರೆ. ಇಂಥಹ ಜಂಟಲ್ ಮ್ಯಾನ್ ನಮಗೆ ಮಿನಿಸ್ಟರ್ ಆಗಿದ್ದಾರೆ. ಇದಕ್ಕಿಂತಲೂ ಪುಣ್ಯ ನಮಗೆ ಇನ್ನೇನು ಬೇಕು?ʼʼ ಎಂದು ಕೇಳಿದರು. ಚಿಕ್ಕಬಳ್ಳಾಪುರವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡಿಯೇ ಮಾಡ್ತೇವೆ ಎಂದರು ಪ್ರದೀಪ್‌ ಈಶ್ವರ್‌.

ಮನೆ ಮನೆಗೆ ಹೋಗಿ ಖಾತೆ ಹಂಚಿದ ಪ್ರದೀಪ್‌ ಈಶ್ವರ್‌

ಪ್ರದೀಪ್‌ ಈಶ್ವರ್‌ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ಮನೆ ಮನೆಗೆ ಭೇಟಿ ನೀಡಿ ಅವರ ಇ ಖಾತೆ ದಾಖಲೆಗಳನ್ನು ವಿತರಿಸಿದ್ದು ಗಮನ ಸೆಳೆಯಿತು. ಬೆಳ್ಳಂಬೆಳಗ್ಗೆ ಮನೆ ಮುಂದೆ ಶಾಸಕನ್ನು ನೋಡಿ ಮನೆ ಮಂದಿಯೇ ಶಾಕ್‌ಗೆ ಒಳಗಾದರು. ಖಾತೆ ಮಾಡಿಸಿ ಮನೆ ಮನೆಗೆ ತೆರಳಿ ದಾಖಲೆ ನೀಡಿದ್ದಕ್ಕೆ ಖುಷಿಯಾದರು.

ಚಿಕ್ಕಬಳ್ಳಾಪುರ ನಗರದ ಒಂದನೇ ವಾರ್ಡ್, ಎರಡನೇ ವಾರ್ಡ್‌ ಸೇರಿದಂತೆ ಹಲವು ವಾರ್ಡ್ ಗಳಿಗೆ ತೆರಳಿ ಖಾತೆ ಪತ್ರ ಹಂಚಿಕೆ ಮಾಡಿದರು ಪ್ರದೀಪ್‌ ಈಶ್ವರ್‌. ಅವರಿಗೆ ನಗರಸಭೆ ಅಧಿಕಾರಿಗಳು ಸಾಥ್‌ ನೀಡಿದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿಯೇ ಹಾಕುತ್ತೇನೆ ಎಂದ ಪ್ರದೀಪ್‌

ʻʻಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಿಮಗೂ ನನಗೂ ಗೊತ್ತು, ಇಡೀ ಕರ್ನಾಟಕಕ್ಕೆ ಗೊತ್ತು. ಖಾತೆ ಮಾಡಿಕೊಡೋಕೆ ಲಂಚ ಕೊಡಲೇಬೇಕು. ಇದಕ್ಕೆಲ್ಲಾ ಒಂದಷ್ಟು ಜನ ಸೂತ್ರದಾರರಿದ್ದಾರೆ, ಅವರಿಗೆಲ್ಲ ಕಡಿವಾಣ ಹಾಕ್ತೇನೆ. ಕೂಲಿ ಮಾಡೋರು ಬಡವರ ಬಳಿ ನಲವತ್ತು ಐವತ್ತು ಸಾವಿರ ಕಿತ್ತುಕೊಳ್ತಾರೆʼʼ ಎಂದು ಹೇಳಿದ ಅವರು, ʻʻನಾನೇ ಪ್ರತಿ ವಾರ್ಡ್‌ಗೂ ಹೋಗಿ ಟೇಬಲ್ ಹಾಕಿಕೊಂಡು ಖಾತೆ ಮಾಡಿಸ್ತೇನೆʼʼ ಎಂದರು.

ಖಾತೆ ಸೆಕ್ಷನ್‌ನಲ್ಲಿ ಕಿರಿಕ್‌ ಮಾಡೋರನ್ನೆಲ್ಲ ವರ್ಗಾವಣೆ ಮಾಡಿಸ್ತೇನೆ. ಭ್ರಷ್ಟಾಚಾರಾನ ನಾವ್ ಸಹಿಸೋದೇ ಇಲ್ಲ. ಕಾನೂನು ಚೌಕಟ್ಟಿನಲ್ಲಿದ್ದರೆ ಯಾವುದೇ ಖಾತೆ ನಿಲ್ಲಿಸಲ್ಲ. ಕಾನೂನು ಚೌಕಟ್ಟು‌ ಬಿಟ್ಟು ನಾನು ಏನೂ ಮಾಡಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ: MP Pratapsimha: ಶಾಸಕ ಪ್ರದೀಪ್‌ ಈಶ್ವರ್‌ಗೆ ಓರಿಯೆಂಟೇಷನ್‌ ಅಗತ್ಯವಿದೆ ಎಂದ ಪ್ರತಾಪ್‌ಸಿಂಹ

Exit mobile version