ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ (MP Pratapsimha), ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಕೆ. ಸುಧಾಕರ್ ಅವರನ್ನು ಮಾತಿನ ಮೂಲಕವೇ ಬೆನ್ನಟ್ಟುತ್ತಿದ್ದ ಚಿಕ್ಕಬಳ್ಳಾಪುರದ ನೂತನ ಶಾಸಕ, ಪ್ರದೀಪ್ ಈಶ್ವರ್ (Pradeep Eshwar) ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ (MP Muniswami) ಮೇಲೆ ಮತ್ತೆ ಮುಗಿಬಿದ್ದಿದ್ದಾರೆ.
ಶನಿವಾರ ಶಾಸಕರ ಭವನದಲ್ಲಿ ಮಾತನಾಡಿದ ಅವರು ಕೋಲಾರ ಸಂಸದ ಮುನಿಸ್ವಾಮಿ ಅವರನ್ನು ಮನಿ ಸ್ವಾಮಿ, ಮೆಂಟಲ್ ಮುನಿಸ್ವಾಮಿ ಎಂದು ಕರೆದಿದ್ದಲ್ಲದೆ ಅವರೊಬ್ಬ ರೌಡಿ ಶೀಟರ್ ಎಂದು ದಾಖಲೆಗಳನ್ನು ತೋರಿಸಿದರು.
ಕೋಲಾರದ ಸಂಸದರು ಮತ್ತು ಚಿಕ್ಕಬಳ್ಳಾಪುರದ ಶಾಸಕರ ನಡುವೆ ಶುಕ್ರವಾರ ವಾಕ್ಸಮರ ತಾರಕಕ್ಕೇರಿತ್ತು. ಪ್ರದೀಪ್ ಈಶ್ವರ್ ಅವರು ಮುನಿಸ್ವಾಮಿ ಅವರನ್ನು ಚೈಲ್ಡ್ ಆರ್ಟಿಸ್ಟ್, ಸಂಸದನ ಗಾಂಭೀರ್ಯವಿಲ್ಲ ಎಂದು ಹೀಗಳೆದಿದ್ದರು. ಇದಕ್ಕೆ ಪ್ರತಿಯಾಗಿ ಪ್ರದೀಪ್ ಈಶ್ವರ್ ಎರಡನೇ ಹುಚ್ಚ ವೆಂಕಟ್, ಅವರಿಗೆ ರಾಜಕೀಯ ಅನುಭವ ಕಡಿಮೆ, ನನ್ನ ಹತ್ರ ಟ್ಯೂಷನ್ ತಗೊಳೋಕೆ ಹೇಳಿ ಎಂದಿದ್ದರು ಮುನಿಸ್ವಾಮಿ. ಇದರ ಮುಂದಿನ ಭಾಗ ಶನಿವಾರ ಶಾಸಕರ ಭವನದಲ್ಲಿ ನಡೆಯಿತು.
ʻಕೋಲಾರದ ಎಂಪಿ ಹೆಸರು ಏನು? ಮೆಂಟಲ್ ಮುನಿಸ್ವಾಮಿ ಅಂತ ಅವರ ಹೆಸರು. ಹಾಂ ಮನಿ ಸ್ವಾಮಿ. ಮುನಿಸ್ವಾಮಣ್ಣ ನೀವು ರೌಡಿ ಶೀಟರ್ ಇದ್ದೀರಾ.. ನೀವು ನಮ್ಮ ನಾಯಕರ ಬಗ್ಗೆ ಮಾತನಾಡುತ್ತೀರಲ್ಲಾ.. ನಿಮ್ಮ ರೌಡಿ ಶೀಟ್ ಬಗ್ಗೆ ಮಾತನಾಡಿʼʼ ಎಂದರು. ಮುನಿಸ್ವಾಮಿ ಅವರು ವೈಟ್ ಫೀಲ್ಡ್ ನಲ್ಲಿ ಕಾಂಪೌಂಡ್ ಹಾಕಿದ್ದಾರೆ. ಅದಕ್ಕೆ ಕೇಸ್ ಆಗಿ ರೌಡಿ ಶೀಟರ್ ಆಗಿದ್ದಾರೆ. ಇದರ ಬಗ್ಗೆ ಬಿಜೆಪಿ ಮಾತನಾಡಲಿ ಎಂದು ಸವಾಲು ಹಾಕಿದರು.
ನನ್ನ ಕರೆಯೋಕೆ ಹೇಳಿ, ನಾನು ರಾಜಕೀಯ ಪಾಠ ಮಾಡ್ತೇನೆ
“ನಾನು ಏನೋ ಹೇಳಿದ್ರೆ ಪರ್ಸನಲ್ ಟಾರ್ಗೆಟ್ ಮಾಡ್ತಾರೆ. ಪರ್ಸನಲ್ ಟಾರ್ಗೆಟ್ ಬೇಡ. ನೀವು ಮಾತನಾಡಿದ್ರೆ ನಾವೂ ಮಾತನಾಡ್ತೇವೆ. ಸಂಸದರಾದವರು ಚೈಲ್ಡ್ ಆರ್ಟಿಸ್ಟ್ ತರಹ ಆಡ್ತಾರೆ. ಎಂಪಿಗೆ ಗಾಂಭೀರ್ಯ ಇರಬೇಕು. ನಾನು ಮಾಡಿದ ಆರೋಪಕ್ಕೆ ಉತ್ತರ ನೀಡಿʼʼ ಎಂದು ಹೇಳಿದರು ಪ್ರದೀಪ್ ಈಶ್ವರ್.
ಪ್ರದೀಪ್ ಈಶ್ವರ್‌ಗೆ ರಾಜಕೀಯ ಜ್ಞಾನ ಇಲ್ಲ, ಅವರು ನನ್ನ ಬಳಿ ಟ್ಯೂಷನ್‌ಗೆ ಬರಲಿ ಎಂಬ ಮುನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻನನ್ನ ಕರೆಯೋಕೆ ಹೇಳಿ ನಾನೇ ಅವರಿಗೆ ರಾಜಕೀಯ ಪಾಠ ಮಾಡ್ತೇನೆʼʼ ಎಂದರು.
ನಾನು ಸೋಲಿಸಿದ್ದು ಚೈಲ್ಡ್ ಆರ್ಟಿಸ್ಟನ್ನು ಅಲ್ಲ
ನಾನು ಚಿಕ್ಕಬಳ್ಳಾಪುರದಲ್ಲಿ ಸೋಲಿಸಿದ್ದು ಯಾರನ್ನು ಅಂತ ಗೊತ್ತಲ್ವಾ? ಅವರೇನೂ ಚೈಲ್ಡ್ ಆರ್ಟಿಸ್ಟ್ ಅಲ್ಲ. ಎಂದು ಹೇಳಿದ ಪ್ರದೀಪ್, ಬಿಜೆಪಿ ಸಂಸದರಿಗೆ ಸ್ವತಃ ಬಲದ ಮೇಲೆ ಗೆಲ್ಲುವ ಸಾಮರ್ಥ್ಯ ಇಲ್ಲ. ಮೋದಿ ಹೆಸರು ಹೇಳಿಕೊಂಡು ಹೋಗ್ತಾರೆ. ಈ ಬಾರಿ ಸ್ವತಃ ಸಾಮರ್ಥ್ಯದ ಮೇಲೆ ಚುನಾವಣೆ ಮಾಡಲಿ ಎಂದು ಬಿಜೆಪಿ ಎಂಪಿಗಳಿಗೆ ಸವಾಲು ಹಾಕಿದರು.
ಇದನ್ನೂ ಓದಿ: Pradeep Eshwar: ಶಾಸಕ ಪ್ರದೀಪ್ ಈಶ್ವರ್ 2ನೇ ಹುಚ್ಚ ವೆಂಕಟ್ ಎಂದ ಸಂಸದ ಮುನಿಸ್ವಾಮಿ
ಬಿಜೆಪಿ ಸಂಸದರು ಬಹಿರಂಗ ಚರ್ಚೆಗೆ ಬರಲಿ
ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಚರ್ಚೆಗೆ ಬರಲಿ. ಬಹಿರಂಗ ವೇದಿಕೆಯಲ್ಲಿ ಚರ್ಚೆ ಮಾಡೋಣ. ಕಾಂಗ್ರೆಸ್ ಸರ್ಕಾರ ಸಾಧನೆ, ಬಿಜೆಪಿ ಸರ್ಕಾರ ಸಾಧನೆ ಮಾತನಾಡೋಣ. ಜನರಿಗೆ ದಾರಿ ತಪ್ಪಿಸೋದು ಬೇಡ. ಜನರ ಮುಂದೆ ಚರ್ಚೆ ಮಾಡೋಣ ಎಂದು ಬಿಜೆಪಿ ಸಂಸದರಿಗೆ ಸವಾಲು ಹಾಕಿದರು. ಎಂಪಿಗಳು ರಾಜ್ಯ ಸರ್ಕಾರದ ಪರವಾಗಿ ಇರಬೇಕು. ಕೇಂದ್ರದ ಜೊತೆ ಮಾತನಾಡಿ ಅಕ್ಕಿ ಕೊಡಿಸಬೇಕು. ಅದು ಬಿಟ್ಟು ರಾಜಕೀಯ ಮಾತನಾಡುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದರು.