Site icon Vistara News

Pradeep Eshwar: ಕನ್ನಡಿಗನೊಬ್ಬ ಲಂಡನ್‌ನಲ್ಲಿ ಕನ್ನಡ ಪಸರಿಸಲು ಪ್ರದೀಪ್‌ ಈಶ್ವರ್‌ ನೆರವು; ಭಾರಿ ಮೆಚ್ಚುಗೆ

Pradeep Eshwar

Pradeep Eshwar Helps A Kannadiga's London Dream To Spread Kannada

ಬೆಂಗಳೂರು: ಪ್ರಖರ ಭಾಷಣ, ಸ್ಫೂರ್ತಿದಾಯಕ ಮಾತುಗಳು, ಪರಿಶ್ರಮ ಅಕಾಡೆಮಿ ಮೂಲಕ ಗಮನ ಸೆಳೆದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಮಾತು, ಶಾಸಕನಾದ ಬಳಿಕ ಜನರೊಂದಿಗೆ ಬೆರೆಯುವ ರೀತಿ, ಸ್ಪಂದಿಸುವ ಪರಿ ಕುರಿತು ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ, ಕನ್ನಡಿಗನೊಬ್ಬ ಲಂಡನ್‌ನಲ್ಲಿ ನಾಡು, ನುಡಿ, ಇತಿಹಾಸ ಪಸರಿಸಲು ಪ್ರದೀಪ್‌ ಈಶ್ವರ್‌ ನೆರವಾಗಿದ್ದು, ಅವರ ಕನ್ನಡ ಪ್ರೇಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು, ಮಂಗಳೂರು ಮೂಲದ ಮೊಹಮ್ಮದ್‌ ಸಿನಾನ್‌ ಎಂಬ ವ್ಯಕ್ತಿಯು ಹಲವಾರು ದಿನಗಳಿಂದ ಕರ್ನಾಟಕದ ಐತಿಹಾಸಿಕ ಸ್ಥಳಗಳ ಫೋಟೊಗಳನ್ನು ಕಾರಿಗೆ ಅಂಟಿಸಿಕೊಂಡು ಕನ್ನಡದ ಧ್ವಜ ಹಾಗೂ ಭಾರತದ ಧ್ವಜ ಕಟ್ಟಿಕೊಂಡು ಸಾವಿರಾರು ಕಿಲೋಮೀಟರ್ ದೂರ ಪ್ರಯಾಣ ಮಾಡುತ್ತಿದ್ದಾರೆ. ಇವರು 100 ದೇಶಗಳಲ್ಲಿ ಕನ್ನಡ ನಾಡು ನುಡಿ ಇತಿಹಾಸವನ್ನು ಪ್ರಪಂಚಕ್ಕೆ ತಿಳಿಸುತ್ತ ಉದ್ದೇಶದಿಂದ ಪ್ರಯಾಣ ಮಾಡುತ್ತಿದ್ದಾರೆ. ಇವರಿಗೆ ಲಂಡನ್‌ನಲ್ಲೂ ಕನ್ನಡತನ ಪಸರಿಸುವ ಕನಸಿದ್ದು, ಇದಕ್ಕೆ ಪ್ರದೀಪ್‌ ಈಶ್ವರ ನೆರವಾಗಿದ್ದಾರೆ. ಈ ಕುರಿತು ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಅವರು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪ್ರದೀಪ್‌ ಈಶ್ವರ್‌ ಅವರ ಕನ್ನಡ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೂಪೇಶ್‌ ರಾಜಣ್ಣ ಪೋಸ್ಟ್

“ಮೊಹಮ್ಮದ್‌ ಸಿನಾನ್‌ ಅವರು ಲಂಡನ್‌ಗೆ ತೆರಳಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಅನುಮತಿ ಪತ್ರ ಬೇಕಿರುತ್ತದೆ. ಇದಕ್ಕಾಗಿ ಹಲವಾರು ದಿನಗಳಿಂದ ಕೇಳಿಕೊಳ್ಳುತ್ತಿದ್ದು. ಇದನ್ನು ನನ್ನ ಗಮನಕ್ಕೆ ತರುತ್ತಾನೆ. ಆತ ಪ್ರದೀಪ್ ಈಶ್ವರ್ ಅವರಿಗೆ ಈ ಮಾಹಿತಿ ಮುಟ್ಟಿಸಿ ಎಂದು ಕೇಳಿಕೊಂಡಿದ್ದು ಕೂಡಲೇ ಪ್ರದೀಪ್ ಅವರಿಗೆ ಕರೆ ಮಾಡಿ ಇರುವ ವಿಷಯ ತಿಳಿಸಿ ಕೂಡು ಕರೆ ಮೂಲಕ ಮೂವರು ಮಾತಾಡಿದೆವು. ಪರಿಸ್ಥಿತಿ ಅರಿತ ಪ್ರದೀಪ್ ಅವರು ನಾಳೆಯೇ ಪ್ರವಾಸೋದ್ಯಮ ಸಚಿವರ ಬಳಿ ಮಾತಾಡಿ ಬೆಳೆಗ್ಗೆಯೇ ನನ್ನ ಮೊದಲ ಕೆಲಸ ತಮಗೆ ಪತ್ರ ಕೊಡಿಸುವುದಾಗಿ ಹೇಳಿದರು” ಎಂದು ರೂಪೇಶ್‌ ರಾಜಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ: Vishweshwar Bhat: ಹುಚ್ಚ ವೆಂಕಟ್ 2 ಅಂದ್ರೆ ಬೇಜಾರ್‌ ಮಾಡ್ಕೋಬೇಡಿ: ಪ್ರದೀಪ್‌ ಈಶ್ವರ್‌ಗೆ ವಿಶ್ವೇಶ್ವರ ಭಟ್‌ ಸಲಹೆ

“ಆಗ ಆತನ ಪ್ರಯಾಣಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ ಎಂದು ಹೇಳಿ ನನಗೆ ಈಗ ಸ್ವಲ್ಪ ಕಷ್ಟವಾಗಿದೆ ನನಗೆ ಮುಂದುವರಿಯಲು ಆಗುತ್ತಿಲ್ಲ ಅಂದಾಗ, ಪ್ರದೀಪ್ ಅವರು ಕೂಡಲೇ 5 ಲಕ್ಷ ಹಣ ನಾನು ನಿಮ್ಮ ಖಾತೆಗೆ ಹಾಕಿಸುವೆ ಕನ್ನಡಕ್ಕಾಗಿ ನೀವು ನಿಮ್ಮ ಕೆಲಸ ಸಾಧಿಸಿ. ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಅನ್ನೋ ಮಾತು ಹೇಳಿದ್ದು ನಿಜಕ್ಕೂ ನನಗೆ ಮನ ತುಂಬಿ ಬಂದಿತು. ಆ ಹುಡುಗನ ಕನ್ನಡಪ್ರೇಮದ ಕೆಲಸಕ್ಕೆ ಹಿಂದೆ ಮುಂದೆ ನೋಡದೆ ತಕ್ಷಣ ಸ್ಪಂದಿಸಿದ ರೀತಿ ಇದಿಯಲ್ಲ ಅದು ನಿಜಕ್ಕೂ ಅದ್ಭುತ. ಕನ್ನಡದ ವಿಚಾರಕ್ಕೆ ಬೆಂಬಲಿಸಿದ ಪ್ರದೀಪ್ ಈಶ್ವರ್ ಅವರಿಗೆ ಕನ್ನಡಿಗರ ಪರವಾಗಿ ಕೋಟಿ ಧನ್ಯವಾದಗಳು” ಎಂದು ರೂಪೇಶ್‌ ರಾಜಣ್ಣ ಬರೆದುಕೊಂಡಿದ್ದಾರೆ. ಕನ್ನಡತನ ಪಸರಿಸುತ್ತಿರುವ ಮೊಹಮ್ಮದ್‌ ಸಿನಾನ್‌ ಹಾಗೂ ಇವರಿಗೆ ಸಹಾಯ ಮಾಡಿದ ಪ್ರದೀಪ್‌ ಈಶ್ವರ್‌ ಅವರಿಗೆ ಫೇಸ್‌ಬುಕ್‌ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.

Exit mobile version