ಚಿಕ್ಕಬಳ್ಳಾಪುರ: ಮಾಜಿ ಶಾಸಕ ಡಾ. ಕೆ. ಸುಧಾಕರ್ (Dr K Sudhakar) ಮತ್ತು ಚಿಕ್ಕಬಳ್ಳಾಪುರದ ಹಾಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕದನ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಪ್ರದೀಪ್ ಈಶ್ವರ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಂದು ಚುನಾವಣೆಗೆ ನಿಲ್ಲಲಿ, ನಾನೂ ಬರ್ತೇನೆ ಎಂದು ಸುಧಾಕರ್ ಅವರು ಶುಕ್ರವಾರವಷ್ಟೇ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಯಾಗಿ ವಾಗ್ದಾಳಿ ಮಾಡಿರುವ ಪ್ರದೀಪ್ ಈಶ್ವರ್ ನಿಮಗೆ ನಿಮ್ಮ ಊರಲ್ಲೇ ಗೌರವ ಇಲ್ಲ ಎಂದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಮಾತನಾಡಿದ ಅವರು ಮಾತಿನ ಆರಂಭದಲ್ಲೇ ʻʻಮಾನ್ಯ ಮಾಜಿ ಶಾಸಕ ಮತ್ತು ಜೀವನಪೂರ್ತಿ ಮಾಜಿ ಶಾಸಕರಾಗಿಯೇ ಉಳಿಯಲಿರುವ ಡಾ ಕೆ ಸುಧಾಕರ್ʼʼ ಎಂದು ವ್ಯಂಗ್ಯವಾಡಿದರು.
ʻʻನಮ್ಮ ಹುಡುಗುರು ನಿಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಹೇಳಿದ್ದೀರಲ್ಲಾ.. ನಿಮಗೆ ತಾಕತ್ ಇದ್ದರೆ ಪ್ರೂವ್ ಮಾಡಿʼʼ ಎಂದು ಹೇಳಿದು. ʻʻನಿಮ್ಮ ಫಾಲೋಯೆರ್ ಅದ್ಯಾರೋ ಪೆಟ್ರೋಲ್, ಡೀಸೆಲ್ ಎಲ್ಲ ಗೊತ್ತಿಲ್ಲ ನನಗೆʼʼ ಎಂದು ಹೇಳಿದರು.
ʻʻಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ಪಕ್ಷೇತರವಾಗಿ ಸ್ಪರ್ಧೆ ಮಾಡೋಣ ಅಂತ ಹೇಳ್ತೀರಲ್ವಾ ಸುಧಾಕರ್. ಯಾಕೆ ಬಿಜೆಪಿಯವರು ನಿಮಗೆ ಟಿಕೆಟ್ ಕೊಡಲ್ವಾ?ʼʼ ಎಂದು ಗೇಲಿ ಮಾಡಿದರು. ʻʻತಾಕತ್ ಇದ್ರೆ ಪಕ್ಷೇತರವಾಗಿ ಸ್ಪರ್ಧೆ ಮಾಡು ಅಂತೀರಲ್ವಾ? ನಾನು ನಿಮ್ಮನ್ನು ಸೋಲಿಸಿ ಇನ್ನೂ ಎರಡು ತಿಂಗಳಷ್ಟೇ ಆಗಿರುವುದು. ಮುಂದಾದರೂ ಯಾವುದಾದರೂ ಬೇರೆ ಕ್ಷೇತ್ರ ಹುಡುಕಿಕೊಳ್ಳಿ. ಈ ಕ್ಷೇತ್ರದ ಮೇಲೆ ನಂಬಿಕೆ ಇಟ್ಟುಕೊಂಡರೆ ಇನ್ನೂ ಐದು ವರ್ಷ ಸಫರ್ ಆಗ್ತೀರಾʼʼ ಎಂದು ಎಚ್ಚರಿಸಿದರು.
ಪರೇಸಂದ್ರದಲ್ಲೇ ಆ ಮನುಷ್ಯನಿಗೆ ಗೌರವ ಇಲ್ಲ
ʻʻಸುಧಾಕರ್ ಮುಖ ನೋಡಿದರೆ ಐನೂರೂ ವೋಟೂ ಬರಲ್ಲ. ನನಗೆ ಐದು ಸಾವಿರ ಓಟಾದ್ರೂ ಬರುತ್ತದೆ. ಕಳೆದ ಚುನಾವಣೆಯಲ್ಲಿ ಪರೇಸಂದ್ರದಲ್ಲಿ ಅವರಿಗೆ ಸಿಕ್ಕಿದ್ದು ಆರುನೂರು ಓಟು, ನನಗೆ ಯಾಕೆ ಸಾವಿರದ ಆರನೂರು ಓಟು ಅಂತ ಅವರೇ ಯೋಚನೆ ಮಾಡ್ಲಿ. ಹುಟ್ಟೂರಲ್ಲೇ ಆ ಮನುಷ್ಯನಿಗೆ ಗೌರವ ಇಲ್ಲʼʼ ಎಂದು ಹೇಳಿದರು ಪ್ರದೀಪ್ ಈಶ್ವರ್.
ಇದೇ ವೇಳೆ ಸುಧಾಕರ್ ಬೆಂಬಲಿಗರ ಮೇಲೂ ಸಲಹೆ ರೂಪದಲ್ಲಿ ವಾಗ್ದಾಳಿ ಮಾಡಿದರು. ʻʻಸುಧಾಕರ್ ಬೆಂಬಲಿಗರಿಗೂ ರಿಕ್ವೆಸ್ಟ್ ಮಾಡ್ತೇನೆ. ಯಾರ ಪರವೋ ಹೋಗಿ ನಿಮ್ಮ ಹೆಂಡತಿ ಮಕ್ಕಳನ್ನು ಯಾಕೆ ಉಪವಾಸ ಹಾಕ್ತೀರಾ?ʼʼ ಎಂದು ಪ್ರಶ್ನಿಸಿದರು.
ಕರ್ಮ ಈಸ್ ಬ್ಯಾಕ್ ಮಿಸ್ಟರ್ ಸುಧಾಕರ್ ಸರ್!
ʻʻಒಂದು ವರ್ಷದ ಹಿಂದೆ ನಾನು ವಾಟ್ಸಪ್ ವಿಡಿಯೊ ಮಾಡ್ತಿದ್ದೆ. ಆಗ ಸುಧಾಕರ್ ಶಾಸಕರಾಗಿದ್ದರು. ಈಗ ಅವರು ವಾಟ್ಸಪ್ ವಿಡಿಯೊ ಮಾಡ್ತಿದ್ದಾರೆ, ನಾನು ಶಾಸಕನಾಗಿದ್ದೇನೆ. ಆಗ ಆತ ಫೋನೇ ಎತ್ತುತ್ತಿರಲಿಲ್ಲ. ಈಗ ಆತನೇ ವಾಟ್ಸಪ್ ವೀಡಿಯೋ ಗ್ರೂಪ್ ಲ್ಲಿ ಶೇರ್ ಮಾಡ್ತಾರೆ. ಅವರು ಅಧಿಕಾರದಲ್ಲಿದ್ದಾಗ ಸೈರನ್ ಹಾಕಿಕೊಂಡು ಬರುತ್ತಿದ್ದರು. ಜೊತೆಗೆ ಹಿಂದೆ-ಮುಂದೆ ಪೊಲೀಸ್ ಜೀಪ್‌ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು. ಈಗ ಯಾರೂ ಇಲ್ಲʼʼ ಎಂದು ಹೇಳಿದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಕರ್ಮ ಈಸ್ ಬ್ಯಾಕ್ ಅಂದರು.
ಅಧಿಕಾರ ಯಾವತ್ತೂ ಶಾಶ್ವತ ಅಲ್ಲ
ʻʻನಾನು ಯಾವತ್ತೂ ಹಿಂದೆ ಮುಂದೆ ಪೊಲೀಸ್ ಜೀಪ್‌ಗಳನ್ನು ಇಟ್ಟುಕೊಂಡು ಓಡಾಡಿದವನಲ್ಲ. ನಾನು ನಿಮ್ಮ ಹುಡುಗ ಸರ್, ಅಧಿಕಾರ ನನಗೂ ಶಾಶ್ವತ ಅಲ್ಲ ನಿಮಗೂ ಶಾಶ್ವತ ಅಲ್ಲʼʼʼ ಎಂದು ಹೇಳಿದ್ದಾರೆ ಪ್ರದೀಪ್ ಈಶ್ವರ್.
ಅಧಿಕಾರ ಇಲ್ಲದೆ ಇದ್ದಾಗಲೇ ನಾನು ಯಾರನ್ನೂ ಕ್ಯಾರ್ ಮಾಡಿಲ್ಲ
ʻʻದೈಹಿಕ ಹಲ್ಲೆ, ಮಾನಸಿಕ ಹಲ್ಲೆ ಮಾಡಿದ್ದಾರೆ ಅಂತ ಹೇಳ್ತಾರೆ. ನಿಮಗೆ ನಾಚಿಕೆ, ಮಾನ, ಮರ್ಯಾದೆ ಏನಾದ್ರೂ ಇದೀಯಾ ಸುಧಾಕರ್, ದೈಹಿಕ ಹಲ್ಲೆ ಅಂತ ಕಂಪ್ಲೆಂಟ್‌ನಲ್ಲಿ ಬರೆದಿದ್ದಾರಲ್ಲಾ.. ಗಾಯ ತೋರಿಸೋಕೆ ಹೇಳಿ. ಇನ್ನು ಮಾನಸಿಕ ಹಲ್ಲೆ ಅಂತೆ. ಅದು ಮನಸ್ಸಿದ್ದರೆ ಅಲ್ವಾ?ʼʼ ಎಂದು ಕಿಚಾಯಿಸಿದ ಪ್ರದೀಪ್ ಈಶ್ವರ್, ʻʻಸುಮ್ ಸುಮ್ನೇ ಆರೋಪ ಮಾಡ್ತಾರೆ, ಯಾರ್‌ರೀ ಗೂಂಡಾ ರಾಜಕೀಯ ಮಾಡಿದ್ದು? ಅಧಿಕಾದ ಇಲ್ಲದೇ ಇದ್ದಾಗಲೇ ನಾನ್ಯಾರ ಮಾತು ಕೇಳಿಲ್ಲ ಸುಧಾಕರ್, ನಿಮ್ಮ ಫಾಲೋಯರ್ಸ್‌ಗೆ ಹೇಳಿ ಬಾಲ ಬಿಚ್ಚಿದ್ರೆ ಕಟ್ ಮಾಡ್ತೇವೆʼʼ ಎಂದು ಖಡಕ್ ವಾರ್ನಿಂಗ್ ನೀಡಿದರು.