Site icon Vistara News

Pragya Singh Thakur | ಪ್ರಚೋದನಕಾರಿ ಭಾಷಣ; ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್ ವಿರುದ್ಧ ಎಫ್‌ಐಆರ್‌

Pragya Singh Thakur

ಶಿವಮೊಗ್ಗ: ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಭೋಪಾಲ್‌ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್ (Pragya Singh Thakur) ವಿರುದ್ಧ ನಗರದ ಕೋಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ಡಿ. 25ರಂದು ನಗರದ ಎನ್‌ಇಎಸ್ ಮೈದಾನದಲ್ಲಿ ಆಯೋಜಿಸಿದ್ದ ಹಿಂದು ಜಾಗರಣ ವೇದಿಕೆಯ 3ನೇ ದಕ್ಷಿಣ ಪ್ರಾಂತ ಸಮ್ಮೇಳನದಲ್ಲಿ ಭೋಪಾಲ್‌ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್ ಅವರು ಮಾಡಿದ್ದ ಭಾಷಣ, ಕೋಮುಗಲಭೆ ಹಾಗೂ ಹಿಂಸಾಚಾರಕ್ಕೆ ಪ್ರೇರೇಪಿಸುವಂತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್ ದೂರು ನೀಡಿದ್ದಾರೆ. ಹಾಗೆಯೇ, ಸಂಸದೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಕಾರಣ ಕೋಟೆ ಠಾಣೆ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿದ್ದೇನು?
ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗಬಾರದು. ಲವ್ ಜಿಹಾದ್ ಮಾಡುವವರಿಗೆ ತಕ್ಕ ಉತ್ತರ ನೀಡಬೇಕು. ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು. ಇದಕ್ಕಾಗಿ ಪ್ರತಿ ಮನೆಯಲ್ಲೂ ಶಸ್ತ್ರ ಇರಬೇಕು. ಮನೆಯಲ್ಲಿ ತರಕಾರಿ ಕೊಯ್ಯುವ ಚಾಕು ಕೂಡ ಹರಿತವಾಗಿ ಇಡಬೇಕು. ಹೆಣ್ಣುಮಕ್ಕಳನ್ನು ತಿರುಗಾಡುವ ಆಟಂ ಬಾಂಬ್ ಮಾಡಬೇಕು. ಯಾರಾದರೂ ಅವರ ಶೀಲಕ್ಕೆ ಕೈ ಹಾಕಿದರೆ ಅಲ್ಲೇ ಉತ್ತರ ಕೊಡಬೇಕು. ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿ ಆಗಬಾರದು. ಅದಕ್ಕೆ ತಕ್ಕ ಉತ್ತರ ನಾವು ಕೊಡಬೇಕು. ದೇಶದ ರಕ್ಷಣೆಗೆ ನಾವೆಲ್ಲ ಸದಾ ಬದ್ಧರಾಗಿರಬೇಕು. ಇನ್ನು ಮುಂದೆ ಯಾವುದೇ ಲವ್‌ ಜಿಹಾದ್‌, ಅತ್ಯಾಚಾರ, ಅನಾಚಾರವಾಗಲು ನಾವು ಬಿಡಬಾರದು. ಪ್ರತಿ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಬೇಕು. ಅದಕ್ಕೆ ಅಗತ್ಯ ಲೈಸೆನ್ಸ್ ಹೊಂದಬೇಕು ಎಂದು ಭಾಷಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿದ್ದರು.

ಇದನ್ನೂ ಓದಿ | Theft at temple | ದೇವಾಲಯದ ಗರ್ಭಗುಡಿ ಧ್ವಂಸ, ದೇವರ ಮಾಂಗಲ್ಯ ಸರ ಕಳ್ಳತನ, ಬಜರಂಗದಳ ಆಕ್ರೋಶ

Exit mobile version