Site icon Vistara News

HD Kumaraswamy : ಪ್ರಜಾಧ್ವನಿ ಎಂದರೆ 500 ರೂ. ಕೊಟ್ಟು ಜನ ಸೇರ್ಸೋದಲ್ಲ, ಹಳ್ಳಿಗಳಿಗೆ ಹೋಗಿ ಎಂದ ಎಚ್‌ಡಿ ಕುಮಾರಸ್ವಾಮಿ

h d kumaraswamy warns govt that he may call citizens for not to pay electricity bill

ಮೈಸೂರು: ʻʻಪ್ರಜಾಧ್ವನಿ ಎಂದರೆ ಕಾಂಗ್ರೆಸ್ ನಾಯಕರು ನಗರ ಪ್ರದೇಶದಲ್ಲಿ ಸುತ್ತುವುದಲ್ಲ. ತಾಲೂಕುಗಳಲ್ಲಿ 500 ರೂ. ಕೊಟ್ಟು ಜನರನ್ನು ಸೇರಿಸುವುದಲ್ಲʼʼ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರು ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ʻʻಕಾಂಗ್ರೆಸ್‌ ನಾಯಕರು ನಗರ ಸುತ್ತುವ ಬದಲಾಗಿ ಹಳ್ಳಿಗಳಿಗೆ ಹೋಗಿ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇನ್ನೂ ಶೌಚಾಲಯ ವ್ಯವಸ್ಥೆ ಇಲ್ಲ. ನನ್ನ ಮನೆಗೆ ಬಂದು ಸಮಸ್ಯೆ ಹೇಳುವ ಜನರ ಕಷ್ಟ ಕೇಳಿ ನಾನು ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ. ಇದನ್ನು ಯಾವುದೇ ಅರ್ಥಶಾಸ್ತ್ರಜ್ಞ ಕೊಟ್ಟಿಲ್ಲʼʼ ಎಂದು ಕುಮಾರಸ್ವಾಮಿ ಹೇಳಿದರು.

ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ತಾವು ಅನುಭವಿಸಿದ ಪಾಡು, ಕಾಂಗ್ರೆಸ್‌ ಮತ್ತು ಬಿಜೆಪಿಗಳ ನಡವಳಿಕೆ, ಚುನಾವಣಾ ತಂತ್ರ, ಮುಂದಿನ ನಡೆಗಳ ಬಗ್ಗೆ ಅವರು ಸಂವಾದದಲ್ಲಿ ಮಾತನಾಡಿದರು.

ʻʻಕಾಂಗ್ರೆಸ್‌ ಜತೆಗೆ ಮೈತ್ರಿ ಸರ್ಕಾರವಿದ್ದಾಗ ಅವರು ನನ್ನ ಇಮೇಜ್ ಡ್ಯಾಮೇಜ್ ಮಾಡಲು ಪ್ರಯತ್ನಿಸಿದರು, ಆದರೆ ನನ್ನ ಇಮೇಜ್ ಎಲ್ಲೂ ಕಡಿಮೆ ಆಗಿಲ್ಲ. ಅವರು ಮಾಡಿದ ಅಪಮಾನಗಳನ್ನು ಸಹಿಸಿಕೊಂಡೆ. ಜನರಿಗಾಗಿ ದಣಿವರಿಯದೆ ದುಡಿದೆʼʼ ಎಂದು ಕುಮಾರಸ್ವಾಮಿ ಹೇಳಿದರು.

120 ಸ್ಥಾನ ಗೆದ್ದೇ ಗೆಲ್ಲುತ್ತೇವೆ

ʻʻಜೆಡಿಎಸ್ ಐಸಿಯುನಲ್ಲಿದೆ, ಶಕ್ತಿ ಉಳಿದಿಲ್ಲ, 10ರಿಂದ 15 ಜನ ಗೆಲ್ಲುತ್ತಾರೆ ಅನ್ನುವ ಮಾತಿತ್ತು. ಈಗಲೂ ನಾಲ್ಕೈದು ದಿನದಲ್ಲಿ ಮೂರ್ನಾಲ್ಕು ಜನ ಪಕ್ಷದಿಂದ ಹೋಗಬಹುದು. ಆದರೆ, ಈ ಬಾರಿ ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವೇ ಸ್ವತಂತ್ರವಾಗಿ 120 ಸ್ಥಾನಗಳಲ್ಲಿ ಗೆಲ್ಲುತ್ತೇವೆʼʼ ಎಂದು ಧೈರ್ಯದಿಂದ ಹೇಳಿದರು.

ಕಾಲು ಮುರಿದ ಕುದುರೆ ಕೊಟ್ಟರು.. ಏನ್ಮಾಡ್ಲಿ?

ʻʻಕಾಂಗ್ರೆಸ್‌ನವರು ಸರ್ಕಾರ ನಡೆಯಬೇಕಾದರೆ ಸಾಲ ಮನ್ನಾ ವಿಷಯದಲ್ಲಿ ಒಂದು ದಿನವೂ ಸಲಹೆ ನೀಡಲಿಲ್ಲ. ಮೊದಲ ಅವಧಿಯ ಬಜೆಟ್ ಮಾಡಲು ನನಗೆ ತೊಂದರೆ ನೀಡಿದರು. ಗೋಗರೆದು ಬಜೆಟ್ ಮಂಡನೆ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿದ್ದಾಗ ಮಧ್ಯಾಹ್ನದ ನಂತರ ಯಾರ ಕೈಗೂ ಸಿಗುತ್ತಿರಲಿಲ್ಲʼʼ ಎಂದು ಕುಮಾರಸ್ವಾಮಿ ಹೇಳಿದರು.

ʻʻಸಮ್ಮಿಶ್ರ ಸರ್ಕಾರದಲ್ಲಿ ನಾನು ಕತ್ತೆಯಂತೆ ದುಡಿದೆ. ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ರೂ. ನೀಡಿದ್ದೆ.
ಈಗ ಎಲ್ಲಾ ಕಡೆಗಳಲ್ಲಿ ʻಕೊಟ್ಟ ಕುದುರೆಯ ಏರದವ ವೀರನೂ ಅಲ್ಲ, ಧೀರನೂ ಅಲ್ಲʼ ಅಂತ ಭಾಷಣ ಮಾಡ್ತಾ ಇದ್ದಾರೆ. ʻಕಾಲು ಮುರಿದ ಕುದುರೆ ಕೊಟ್ಟು ಏರು ಏರುʼ ಎನ್ನುವವರನ್ನು ಮನೆ ಮುರುಕ ಎನ್ನುತ್ತಾರೆʼʼ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ಮಾಡಿದರು.

ಶಾಸಕಾಂಗ ಪಕ್ಷ ಸಭೆಯ ಒಳಗೂ ಬಿಡಲಿಲ್ಲ

ʻʻಸಮ್ಮಿಶ್ರ ಸರ್ಕಾರ ಇದ್ದಾಗ ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ಅವರ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಮಾಡಿದ್ದರು. ಆ ಸಭೆಗೆ ನನ್ನನ್ನು ಕರೆದಿದ್ದರು, ನಾನು ಹೋದೆ. ಸೌಜ್ಯನಕ್ಕೂ ನನ್ನ ಒಳಗೆ ಕರೆಯಲಿಲ್ಲ. ಮುಖ್ಯಮಂತ್ರಿಯಾಗಿದ್ದ ನಾನು ಅಬ್ಬೇಪ್ಪಾರಿ ಥರ ಹೊರಗೆ ನಿಂತಿದ್ದೆ.‌ ನಾನು ಯಾಕೆ ಅಲ್ಲಿ ಹೋದೆ ಅಂತ ಈಗಲೂ ನನಗೆ ಗೊತ್ತಿಲ್ಲ. ಇದು ಅವತ್ತಿನ ನನ್ನ ಪರಿಸ್ಥಿತಿ , ಕಾಂಗ್ರೆಸ್ ನನ್ನನ್ನೂ ಹೀನಾಯವಾಗಿ ನೋಡಿತು. ಒಬ್ಬ ಮುಖ್ಯಮಂತ್ರಿಯಾಗಿ ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆʼʼ ಎಂದು ಹೇಳಿದರು ಕುಮಾರಸ್ವಾಮಿ.

ʻʻನಾನು ಬೆಳಗ್ಗೆ 8ರಿಂದ ಜನರಿಗಾಗಿ ದುಡಿದೆ. ಆದರೂ ನಾನು ತಾಜ್ ಹೋಟೆಲ್ ಅಲ್ಲಿ ಕೂತಿದ್ದೇನೆ ಅಂತ ಅಪಪ್ರಚಾರ ಮಾಡಿದ್ರುʼʼ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಗುಡುಗಿದರು.

ಪ್ರಜಾಧ್ವನಿ ಎಂದರೆ 500 ರೂ. ಕೊಟ್ಟು ಜನ ಸೇರ್ಸೋದಲ್ಲ!

ʻʻಕಾಂಗ್ರೆಸ್ ನಾಯಕರು ನಗರ ಪ್ರದೇಶದಲ್ಲಿ ಪ್ರಜಾಧ್ವನಿ ಮಾಡುವುದಲ್ಲ. ತಾಲೂಕುಗಳಲ್ಲಿ 500 ರೂ. ಕೊಟ್ಟು ಜನರನ್ನು ತರುವುದಲ್ಲ, ಬದಲಾಗಿ ಹಳ್ಳಿಗಳಿಗೆ ಹೋಗಿ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಇನ್ನೂ ಶೌಚಾಲಯ ವ್ಯವಸ್ಥೆ ಇಲ್ಲ. ನನ್ನ ಮನೆಗೆ ಬಂದು ಸಮಸ್ಯೆ ಹೇಳುವ ಜನರ ಕಷ್ಟ ಕೇಳಿ ನಾನು ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ. ಇದನ್ನು ಯಾವುದೇ ಅರ್ಥಶಾಸ್ತ್ರಜ್ಞ ಕೊಟ್ಟಿಲ್ಲʼʼ ಎಂದು ಕುಮಾರಸ್ವಾಮಿ ಹೇಳಿದರು.

ʻʻಕೆಲವರು ಹಲವಾರು ಭಾಗ್ಯಗಳನ್ನು ಕೊಟ್ಟು ಸಮಾಜವನ್ನು ಉದ್ದಾರ ಮಾಡಿದ್ದೇನೆ ಎನ್ನುತ್ತಾರೆ. ದಿನ ಬೆಳಗಾದರೆ ದಲಿತ ಸಮುದಾಯದ ಜನ ನನ್ನ ಮನೆಯ ಮುಂದೆ ಜನರು ಬಂದು ಸಮಸ್ಯೆ ಹೇಳುತ್ತಾರೆʼʼ ಎಂದು ಹೇಳಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಘೋಷಣೆ ಮಾಡಿರುವ ಉಚಿತ ವಿದ್ಯುತ್, ಮಹಿಳೆಯರಿಗೆ 2000 ಕಾರ್ಯಕ್ರಮ ಜಾರಿಗೊಳಿಸಲು 48 ಸಾವಿರ ಕೋಟಿ ರೂ. ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ 7 ಕೆಜಿ ಕೊಡುವುದಾಗಿ ಘೋಷಣೆ ಮಾಡಿದರು. ಕೇವಲ 5 ಕೆಜಿಗೆ ಆಗುವಷ್ಟು ಹಣ ಮಾತ್ರ ಕೊಟ್ಟರು, 2 ಕೆಜಿ ಹೊರೆ ನನ್ನ ಮೇಲೆ ಬಿತ್ತುʼʼ ಎಂದರು.

ದೇವೇಗೌಡರಿಗೆ ಕೊಟ್ಟ ಗೌರವ ಚೆನ್ನಾಗಿ ಗೊತ್ತಿದೆ

ʻʻದೇವೇಗೌಡರಿಗೆ ರಾಮನಗರದಲ್ಲಿ ಗೌರವ ಕೊಟ್ಟಿದ್ದೇವೆ ಎಂದು ಡಿ.ಕೆ. ಬ್ರದರ್ಸ್ ಹೇಳಿಕೊಂಡಿದ್ದಾರೆ. ದೇವೇಗೌಡರನ್ನು ಸೋಲಿಸಲೇಬೇಕು ಎಂದು ರಾಮನಗರದಲ್ಲಿ ಏನೆಲ್ಲ ಪ್ರಯತ್ನ ಮಾಡಿದ್ರು ಎಲ್ಲರಿಗೂ ಗೊತ್ತಿದೆʼʼ ಎಂದು ತಿರುಗೇಟು ನೀಡಿದರು ಕುಮಾರಸ್ವಾಮಿ.

ʻʻಸಮ್ಮಿಶ್ರ ಸರ್ಕಾರದಲ್ಲಿ ನಾನು ಟ್ರ್ಯಾಪ್ ಆಗಿದ್ದಂತೂ ಸತ್ಯ. ಕಾಂಗ್ರೆಸ್ಸಿಗೆ ನಮ್ಮಿಂದ ಹೆಲ್ಪ್‌ ಆಗಿದೆ. ಅವರಿಂದ ಜೆಡಿಎಸ್ ಪಕ್ಷಕ್ಕೆ ಹೆಲ್ಪ್ ಆಗಿಲ್ಲʼʼ ಎಂದರು ಕುಮಾರಸ್ವಾಮಿ.

ಬಿಜೆಪಿಯವರಿಗಾಗಿ ಹತ್ತಾರು ಪರಪ್ಪನ ಅಗ್ರಹಾರ ಕಟ್ಟಬೇಕಾಗುತ್ತದೆ!

ʻʻಸಿದ್ದರಾಮಯ್ಯ ಅವರ ಕಾಯಿಲೆ ಇದೀಗ ಅಮಿತ್ ಶಾ ಅವರಿಗೂ ಶುರುವಾಗಿದೆ. ಜೆಡಿಎಸ್‌ ಅವರಿಗೆ ಮತ ನೀಡಿದರೆ ಕಾಂಗ್ರೆಸ್ ಅವರಿಗೆ ಮತ ನೀಡಿದಂತೆ ಎನ್ನುತ್ತಿದ್ದಾರೆʼʼ ಎಂದು ಹೇಳಿದರು ಕುಮಾರಸ್ವಾಮಿ.

ʻʻಬಿಜೆಪಿ ನಾಯಕರ ಒಬ್ಬೊಬ್ಬರ ಇತಿಹಾಸ ನೋಡಿದರೆ ಇವರು ಏನಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇವರ ಮೇಲೆ ಇರುವ ದೂರು, ಆಪಾದನೆ, ಇವರು ಮಾಡಿರುವ ಹಗರಣಗಳನ್ನು ನೋಡಿದರೆ ಬಿಜೆಪಿಯವರಿಗಾಗಿಯೇ ಹತ್ತಾರು ಪರಪ್ಪನ ಅಗ್ರಹಾರ ಕಟ್ಟಬೇಕಾಗುತ್ತದೆʼʼ ಎಂದು ಕುಮಾರಸ್ವಾಮಿ ಹಂಗಿಸಿದರು.

ʻʻಮೋದಿ ಕರ್ನಾಟಕಕ್ಕೆ ಬಂದರೂ ಕೆಲಸಗಳು, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಬಿಜೆಪಿಯವರು ಆ ಪಕ್ಷವನ್ನು ಕಟ್ಟಿದ ಆಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರ ಕಾಲು ಮುರಿದು ಮೂಲೆಗುಂಪು ಮಾಡಿದ್ದಾರೆ. ಇಂಥವರು ಸತ್ತು ಸ್ವರ್ಗ ಸೇರಿರುವ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರನ್ನು ಸ್ಮರಿಸುತ್ತಿದ್ದಾರೆʼʼ ಎಂದು ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ಅವರ ಮೇಲೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : Devine power : ದೇವೇಗೌಡರ ಆರೋಗ್ಯ, ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ 11 ದಿನಗಳ ಮಹಾಯಾಗಕ್ಕೆ ಮೊರೆ ಹೋದ ಎಚ್‌ಡಿಕೆ

Exit mobile version