Site icon Vistara News

Prajadhwani Yatre | ರೈತರಿಗೆ, ಯುವಕರಿಗೆ ಟೋಪಿ ಹಾಕಿದೆ ಬಿಜೆಪಿ: ಸಿದ್ದರಾಮಯ್ಯ ವಾಗ್ದಾಳಿ

BJP cheated farmers, youth says Siddaramaiah

ಚಿಕ್ಕೋಡಿ: ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ, ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂಧು ಹೇಳಿ ಅಧಿಕಾರಕ್ಕೆ ಬಂದ ನಂತರ ಆ ಮಾತನ್ನು ಮರೆತು ಟೋಪಿ ಹಾಕಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಬುಧವಾರ ಆರಂಭವಾದ ʼಪ್ರಜಾಧ್ವನಿʼ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜದ ಎಲ್ಲಾ ವರ್ಗದ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಬಲೀಕರಣಕ್ಕಾಗಿ ಶ್ರಮಿಸಿದೆ. ನಾನು ಬಸವಣ್ಣನವರ ಜಯಂತಿ ದಿನದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಅರ್ಧ ಗಂಟೆ ಒಳಗಾಗಿ 5 ಭರವಸೆಗಳನ್ನು ಈಡೇರಿಸಿದೆ. ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಜೊತೆಗೆ 30 ಹೊಸ ಕಾರ್ಯಕ್ರಮಗಳನ್ನು ನೀಡಿದ್ದೆ. ಬಿಜೆಪಿಯವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದವರು. ಬೆಳಗಾವಿ ಜಿಲ್ಲೆಯಲ್ಲಿ ಕೂಡ ಶಾಸಕರೊಬ್ಬರು ಖರೀದಿ ಆದರು. ಕಾಂಗ್ರೆಸ್‌ ನ 14 ಜನ ಮತ್ತು ಜೆಡಿಎಸ್‌ ನ 3 ಜನ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಜನ ಹಿತ ಮರೆತು ಲೂಟಿ ಮಾಡುವುದರಲ್ಲಿ ನಿರತರಾದದ್ದರಿಂದ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿಹೋಗಿದ್ದಾರೆ.

ಬಿಜೆಪಿ ಪಕ್ಷ 2018ರಲ್ಲಿ 600 ಭರವಸೆಗಳನ್ನು ನೀಡಿ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ನಾವು ಅಧಿಕಾರಕ್ಕೆ ಬಂದರೆ ಸೊಸೈಟಿಗಳು, ಬ್ಯಾಂಕುಗಳಲ್ಲಿ 1 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ಮಾಡಿದ್ದಾರ? ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 78,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರು. ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ಅವರು ಒಂದು ರೂಪಾಯಿಯಾದರೂ ಸಾಲ ಮನ್ನಾ ಮಾಡಿದ್ರಾ? ನಾವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ ಆದರೂ ನಾಡಿನ ರೈತರ ಕಷ್ಟವನ್ನು ಅರ್ಥಮಾಡಿಕೊಂಡು ಸಹಕಾರಿ ಸಂಘಗಳಲ್ಲಿ 22 ಲಕ್ಷದ 27 ಸಾವಿರ ರೈತರು ಸಹಕಾರಿ ಸಂಘಗಳಿಂದ ಪಡೆದಿದ್ದ 50,000 ವರೆಗಿನ 8,165 ಕೋಟಿ ಸಾಲವನ್ನು ಮಾಡಿದ್ದು ನಾವು. ರೈತರಿಗೆ ಬಿಜೆಪಿ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ ಟೋಪಿ ಹಾಕಿದೆ ಎಂದರು.

ದೇಶದ ಎಕಾನಮಿಯನ್ನು 5 ಟ್ರಿಲಿಯನ್‌ ಡಾಲರ್‌ ಎಕಾನಮಿ ಮಾಡುತ್ತೇವೆ ಎಂದು ನರೇಂದ್ರ ಮೋದಿ ಅವರು ಹೇಳಿದರು. ಮನಮೋಹನ್‌ ಸಿಂಗ್‌ ಅವರು ಇರುವಾಗ 2.2 ಟ್ರಿಲಿಯನ್‌ ಡಾಲರ್‌ ಜಿಡಿಪಿ ಇತ್ತು, ಇಂದು 3 ಟ್ರಿಲಿಯನ್‌ ಡಾಲರ್‌ ಅನ್ನು ಕೂಡ ದಾಟಿಲ್ಲ. ಬಿಜೆಪಿ ಅಂದರೆ ಸುಳ್ಳಿನ ಫ್ಯಾಕ್ಟರಿ. ರೈತರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮೋಸ ಮಾಡಿದ್ದಾರೆ.

ರಾಷ್ಟ್ರ ಯುವಜನೋತ್ಸವದಲ್ಲಿ ಭಾಗಿಯಾಗಲು ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬರುತ್ತಿದ್ದಾರೆ. ನಿಜವಾಗಿ ಇದು ಯುವ ಜನರಿಗೆ ಮಾರಕವಾದ ಉತ್ಸವ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ, ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಲು ಹೋಗಿ ಎಂದರು. ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಬಿಜೆಪಿ ಪಕ್ಷ ಮಕ್ಮಲ್‌ ಟೋಪಿ ಹಾಕಿದೆ.

ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆ ಮನೆಗೆ ಪ್ರತೀ ತಿಂಗಳು 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹೈದರಾಬಾದ್‌ ಕರ್ನಾಟಕದಲ್ಲಿ ಘೋಷಣೆ ಮಾಡಿದ್ದೇವೆ, ದಲಿತ ಸಮಾವೇಶದಲ್ಲಿ ಕೆಲವು ಘೋಷಣೆ ಮಾಡಿದ್ದೇವೆ. ಮಾತೆತ್ತಿದ್ದರೆ ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ, ನಾನು ಹಿಂದೂ ಅಲ್ವಾ? ಆಪರೇಷನ್‌ ಆದಾಗ ಯಾರ ರಕ್ತವಾದರೂ ಕೊಡಿ ಎಂದು ಹೇಳುತ್ತೇವೆ, ಆಗಲೂ ನನ್ನದೇ ಜಾತಿ ಧರ್ಮದವನ ರಕ್ತ ಕೇಳುತ್ತೇವಾ ಇಲ್ಲ ಅಲ್ವಾ? ಹೀಗೆ ಎಲ್ಲರೂ ಮನುಷ್ಯರು ಎಂಬುದು ನಮ್ಮ ಸಿದ್ಧಾಂತ. ಇದನ್ನೇ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನ ಹೇಳುತ್ತದೆ. ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವ ನಾನು ಹಿಂದೂ ವಿರೋಧಿ ಆಗಲು ಹೇಗೆ ಸಾಧ್ಯ? ನಮ್ಮೂರಿನಲ್ಲಿ ನಾವು ರಾಮಮಂದಿರ ಕಟ್ಟಿಲ್ವಾ? ನಾವು ಎಲ್ಲಾ ಧರ್ಮಗಳನ್ನು ಗೌರವಿಸುವವರು. ಆದರೆ ಜಾತ್ರೆಗಳಲ್ಲಿ ಮುಸ್ಲಿಂಮರಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳುವ, ಹಲಾಲ್‌, ಹಿಜಾಬ್‌ ವಿಚಾರದಲ್ಲಿ ರಾಜಕಾರಣ ಮಾಡುವ ಹಿಂದುತ್ವದ ವಿರೋಧಿಗಳು. ನಾವು ಮನುಷ್ಟ ದ್ವೇಷಿಗಳಲ್ಲ. ನಾವು ಮನುಷ್ಯಪ್ರೇಮಿಗಳು. ಇದೇ ಕಾರಣಕ್ಕೆ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಯನ್ನು ಮಾಡುತ್ತಿರುವುದು. ದೇಶದ ಐಕ್ಯತೆಯನ್ನು ಗೌರವಿಸಬೇಕು, ಜನರನ್ನು ಪ್ರೀತಿಸಬೇಕು. ಇದನ್ನೇ ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್‌, ಮಹಮ್ಮದ್‌ ಪೈಗಂಬರ್‌, ಕ್ರಿಸ್ತ ಹೇಳಿದ್ದು. ಎಲ್ಲಾ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಇರುವುದು ಕಾಂಗ್ರೆಸ್‌ ಗೆ ಮಾತ್ರ.

ಬಿಜೆಪಿಯ ಪಾಪದ ಕೊಡ ತುಂಬಿದೆ. ಅವರ ಭ್ರಷ್ಟಾಚಾರಗಳ ಕರ್ಮಕಾಂಡದ ಆರೋಪ ಪಟ್ಟಿಯನ್ನು ಜನರ ಮುಂದೆ ಇಡುತ್ತಿದ್ದೇವೆ. ಜನ ಇದರ ತೀರ್ಮಾನ ಕೊಡಬೇಕು. ದಯವಿಟ್ಟು ಬಿಜೆಪಿಯವರ ಹುಸಿ ಹಿಂದುತ್ವ, ಜಾತೀಯತೆಯನ್ನು ನಂಬದೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತೇನೆ ಎಂದರು.

ಈದನ್ನೂ ಓದಿ | Prajadhwani Yatre | ಸಿಎಂ ಹುದ್ದೆಗೆ ₹2,500 ಕೋಟಿ: ʼಬಿಜೆಪಿ ಪಾಪದ ಪುರಾಣʼ ಆರೋಪ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್‌

Exit mobile version