ಬೆಂಗಳೂರು: ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿಯಾಗಿ ಭಾಗವಹಿಸಿ ಸಾಕಷ್ಟು ಸಂಚಲನ ಮೂಡಿಸಿದ್ದಾರೆ. ಇದೀಗ ಶುಕ್ರವಾರದಿಂದ ಇಬ್ಬರದ್ದೂ ಪ್ರತ್ಯೇಕ ಯಾತ್ರೆಗಳು ಆರಂಭವಾಗುತ್ತಿವೆ.
ಮೊದಲಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ, ದಕ್ಷಿಣ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಯಾತ್ರೆ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಅದಲು ಬದಲು ಆಗಲಿದೆ. ಬಸವಕಲ್ಯಾಣದಿಂದ ಯಾತ್ರೆ ಆರಂಭ ಮಾಡಲಿರುವ ಸಿದ್ದರಾಮಯ್ಯಗೆ ಎಂ.ಬಿ. ಪಾಟೀಲ್, ಎಸ್. ಆರ್. ಪಾಟೀಲ್, ಬಸವರಾಜ ರಾಯರಡ್ಡಿ, ಎಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಸಾಥ್ ನೀಡಲಿದ್ದಾರೆ.
ಕೋಲಾರದ ಕುರುಡುಮಲೈಯಿಂದ ಡಿ.ಕೆ. ಶಿವಕುಮಾರ್ ಯಾತ್ರೆ ಆರಂಭ ಮಾಡಲಿದ್ದು, ಡಾ. ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಸಲೀಂ ಅಹಮದ್ ಸೇರಿದಂತೆ ಹಿರಿಯ ನಾಯಕರ ತಂಡ ಜತೆಗಿರಲಿದೆ. 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಇಬ್ಬರೂ ಪ್ರತ್ಯೇಕವಾಗಿ ಪ್ರವಾಸ ಮಾಡಲಿದ್ದಾರೆ.
ಇದನ್ನೂ ಓದಿ : Prajadhwani : ಯಾರಿಗೇ ಟಿಕೆಟ್ ಕೊಟ್ಟರೂ ಕೆಲಸ ಮಾಡಿ; ಕೈತಪ್ಪಿದವರಿಗೆ MLC, ನಿಗಮ ಮಂಡಳಿ: ಡಿ.ಕೆ. ಶಿವಕುಮಾರ್ ಹೇಳಿಕೆ
ಇದಕ್ಕಾಗಿ ಪ್ರತ್ಯೇಕ ಬಸ್‌ಗಳನ್ನು ರೂಪಿಸಲಾಗಿದೆ. ಇಬ್ಬರೂ ನಾಯಕರಿಗೂ ಇದು ಶಕ್ತಿ ಪ್ರದರ್ಶನದ ವೇದಿಕೆಯಾಗಲಿದೆ. ಯಾರ ಸಮಾವೇಶಗಳಿಗೆ ಹೆಚ್ಚಿನ ಜನರು ಸೇರಲಿದ್ದಾರೆ, ಯಾರ ಸಮಾವೇಶಗಳು ಹೆಚ್ಚು ಚರ್ಚೆಗಳನ್ನು ಹುಟ್ಟುಹಾಕಲಿವೆ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ನೋಡಲಿದ್ದಾರೆ. ಪ್ರತಿಪಕ್ಷಗಳೂ ಈ ಯಾತ್ರೆಗಳನ್ನು ಗಮನಿಸುತ್ತಿದ್ದು, ಇಬ್ಬರೂ ನಾಯಕರು ಪ್ರತ್ಯೇಕವಾಗಿದ್ದಾಗ ಯಾರು ಪ್ರಬಲರು ಎಂಬುದು ಸ್ಪಷ್ಟವಾಗುತ್ತದೆ.