Site icon Vistara News

Prajadwani: ‌ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ, ವಿಸರ್ಜನೆಯಾಗಲ್ಲ; ದಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರಬೇಕು ಎಂದ ಡಿಕೆಶಿ

Prajadwani

ಮೈಸೂರು: ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೇ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಜೆಡಿಎಸ್ ಅಧಿಕಾರಕ್ಕೆ ಬರುವುದೇ ಇಲ್ಲ. ಜೆಡಿಎಸ್ ವಿಸರ್ಜನೆ ಆಗುವವರೆಗೂ ಕಾರ್ಯಕರ್ತರು ಏಕೆ ಕಾಯುತ್ತೀರಿ. ಈಗಾಗಲೇ ಜೆಡಿಎಸ್‌ನ ಹಾಲಿ, ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರು ಈಗಲೇ ಕಾಂಗ್ರೆಸ್ (Prajadwani) ಸೇರಿ ಒಂದು ಬಲಿಷ್ಠ ಸರ್ಕಾರ ಬರಲು ಬೆಂಬಲ‌ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್‌ನ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಮುಂದೆ‌ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭರವಸೆಯಿಂದ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಜೆಡಿಎಸ್‌ ಕಾರ್ಯಕರ್ತರೂ ಕಾಂಗ್ರೆಸ್‌ಗೆ ಸೇರ್ಪಡೆಯಾಗಬೇಕು ಎಂದು ಕರೆ ನೀಡಿದರು.

ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಏನಾದರೂ ಮಾಡಿ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಜನರು ಸಹ ಸಂಕಲ್ಪ‌ ಮಾಡಿದ್ದಾರೆ. ಜನರು ನಮಗೆ ಕೊಟ್ಟ ಸ್ವಾಗತ ಇಡೀ ರಾಜ್ಯದ ಜನರಿಗೆ ಕೊಟ್ಟ ಸ್ವಾಗತವಾಗಿದೆ. ಇದು ಮೈಸೂರು, ಚಾಮರಾಜನಗರ ಜಿಲ್ಲೆಯ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂಬಂತೆ ಜನರು ಕೊಟ್ಟಿರುವ ಸ್ವಾಗತ ಎಂದು ಹೇಳಿದರು.

ಇದನ್ನೂ ಓದಿ | Prajadhwani : ತನ್ನನ್ನು ತಾನು ಮಾರಿಕೊಂಡು ಪಕ್ಷ ಬಿಟ್ಟ ಆಸಾಮಿ ಸುಧಾಕರ್‌ : ಸಿದ್ದರಾಮಯ್ಯ ವಾಗ್ದಾಳಿ

ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ಗೆ ಬೆಂಬಲ ಕೊಟ್ಟೆವು. ಆದರೆ ಕುಮಾರಸ್ವಾಮಿಗೆ ಅಧಿಕಾರ ಉಳಿಸಿಕೊಳ್ಳಲಾಗಲಿಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರೂ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ, ಸಿದ್ದರಾಮಯ್ಯಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ನನ್ನ ಸ್ನೇಹಿತ ಸಂಸದ ಪ್ರತಾಪ್ ಮೈಸೂರು ಯೂನಿವರ್ಸಿಟಿಯಲ್ಲಿ ಹುದ್ದೆಗಳ ಮಾರಾಟದ ಬಗ್ಗೆ ಹೇಳಿದ್ದಾರೆ. ಮತ್ತೊಬ್ಬ ಮಾಜಿ ಸಚಿವರು ಒಂದು ವೋಟಿಗೆ 6 ಸಾವಿರ ರೂಪಾಯಿ ಕೊಟ್ಟು ಬೇಕಾದರೂ ಗೆಲ್ಲುತ್ತೇನೆಂದು ಹೇಳಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮೈಸೂರು, ಚಾಮರಾಜನಗರ ಜಿಲ್ಲೆಯ 15ಕ್ಕೆ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಆಲಿಬಾಬಾ ಚಾಲೀಸ್ ಚೋರ್ ಇದ್ದಂತೆ. ಇಂತಹ ಭ್ರಷ್ಟ ಸರ್ಕಾರ ಮುಂದೆಯೂ ಬರಬೇಕಾ? ರಾಜ್ಯದಲ್ಲಿರುವುದು ಜನಪರ ಸರ್ಕಾರವಲ್ಲ. ಇದು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರ ಎಂದು ಕಿಡಿಕಾರಿದರು.

ಜೆಡಿಎಸ್‌ನ 3 ಶಾಸಕರನ್ನು ಬಿಜೆಪಿಗೆ ಕಳುಹಿಸಿದವರು ಯಾರು?

ಕಾಂಗ್ರೆಸ್‌ನ 14 ಶಾಸಕರನ್ನು ಸಿದ್ದರಾಮಯ್ಯನವರೇ ಬಿಜೆಪಿಗೆ ಕಳಿಸಿದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ‌ಂ ಹೇಳಿದ್ದಾರೆ. ಹಾಗಾದರೆ ಜೆಡಿಎಸ್‌ನ ಮೂವರು ಶಾಸಕರನ್ನು ಯಾರು ಬಿಜೆಪಿಗೆ ಕಳುಹಿಸಿದರು ಎಂದು ಪ್ರಶ್ನಿಸಿದ ಅವರು, ನಿಮಗೆ ನಾಚಿಕೆಯಾಗಲ್ಲವೇ? ರಾಜ್ಯದಲ್ಲಿ ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಜೆಡಿಎಸ್‌ನವರೇ ಕಾರಣ‌. ಜೆಡಿಎಸ್ ಎಂದಿಗೂ ಗೆದ್ದೆತ್ತಿನ ಬಾಲವನ್ನು ಹಿಡಿಯುತ್ತದೆ. ನಾವು ಇನ್ನೆಂದೂ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಲ್ಲ ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಹೊಂದಾಣಿಕೆ ಬೇಡ ಎಂದಿದ್ದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಕೇಳಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 20 ರಿಂದ 22 ಸೀಟು ಗೆದ್ದರೇ ಹೆಚ್ಚು. ಜೆಡಿಎಸ್‌ಗೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ, ಬಿಜೆಪಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Prajadhwani : ಚಾಮರಾಜನಗರ ಅಭಿವೃದ್ಧಿಗೆ ನರೇಂದ್ರ ಮೋದಿ ಕೊಡುಗೆ ಏನು?: ಪ್ರಶ್ನಿಸಿದ ಸಿದ್ದರಾಮಯ್ಯ

40 ಪರ್ಸೆಂಟ್ ಬಿಟ್ಟರೆ ಅಭಿವೃದ್ಧಿಯಿಲ್ಲ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ರಾಜ್ಯದಲ್ಲಿರುವುದು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವ ಭ್ರಷ್ಟ ಸರ್ಕಾರ.‌ ವಿವಿಧ ಇಲಾಖೆಗಳ ಹುದ್ದೆಗಳನ್ನು ಮಾರಾಟಕ್ಕಿಡಲಾಗಿದೆ. ಬಿಜೆಪಿ ಸರ್ಕಾರದಿಂದ 40 ಪರ್ಸೆಂಟ್ ಪಡೆಯುವುದನ್ನು ಹೊರತುಪಡಿಸಿದರೇ ಬೇರೇನೂ ಅಭಿವೃದ್ಧಿ, ಸಾಧನೆಗಳು ಕಾಣುತ್ತಿಲ್ಲ. ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ದೂರು‌ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಜತೆಗೆ ಹಲವು ಗುತ್ತಿಗೆದಾರರು ರಾಜ್ಯ ಸರ್ಕಾರದ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹರಿಹಾಯ್ದರು.

Exit mobile version