ಬೆಂಗಳೂರು: ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 137 ಸಾಕ್ಷಿಗಳ ಹೇಳಿಕೆ ಸೇರಿ 2144 ಪುಟಗಳ ದೋಷಾರೋಪ ಪಟ್ಟಿಯನ್ನು 42ನೇ ವಿಶೇಷ ಜನಪ್ರತಿನಿಗಳ ಕೋರ್ಟ್‌ಗೆ ಎಸ್‌ಐಟಿ ಸಲ್ಲಿಸಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿರುವ ತನಿಖಾಧಿಕಾರಿ ಸುಮಾರಾಣಿ ಅವರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 137 ಸಾಕ್ಷಿಗಳ ಹೇಳಿಕೆ ಸೇರಿದಂತೆ 2144 ಪುಟಗಳ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ | Student Missing: ಓದಿಲ್ಲ ಎಂದು ಬೈದದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪ ಕುರಿತ ಎಫ್‌ಐಆರ್ ರದ್ದುಪಡಿಸಲು ಕೋರಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 29ಕ್ಕೆ ಇತ್ತೀಚೆಗೆ ಮುಂದೂಡಿತ್ತು.
ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಜುಲೈ 24ರಂದು ವಜಾಗೊಂಡಿತ್ತು. ನಾಲ್ಕನೇ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದಕ್ಕೂ ಮೊದಲು ಮೂರು ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ಇದರಲ್ಲಿ ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿ ಸೇರಿವೆ. ಅದೇ ರೀತಿ ಜುಲೈ 24ರಂದು ಮೂರನೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿತ್ತು. ಇದರಿಂದ ನಾಲ್ಕನೇ ಕೇಸ್‌ನಲ್ಲಿಯೂ ಪ್ರಜ್ವಲ್‌ಗೆ ಹಿನ್ನಡೆಯಾಗಿತ್ತು.
ಏನಿದು ಪ್ರಕರಣ?
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್ ವಿರುದ್ದ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಶ್ರೇಯಸ್ ಪಟೇಲ್ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಹಾಸನ ಸಂಸದ ಶ್ರೇಯಸ್ ಪಟೇಲ್ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ವಕೀಲ ದೇವರಾಜೇಗೌಡ ಪುತ್ರ ಡಿ.ಚರಣ್ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದರು.
ಸಂಸದರಾಗಿ ಶ್ರೇಯಸ್ ಎಂ.ಪಟೇಲ್ ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿಲ್ಲ. ಆ ಕುರಿತು ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಹಾಗಾಗಿ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲ ಹಾಗೂ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರ ಡಿ.ಚರಣ್ ಕೋರಿದ್ದಾರೆ. ಅರ್ಜಿ ಸಂಬಂಧ ಶ್ರೇಯಸ್ ಪಟೇಲ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.