ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ (Prajwal Revanna Case) ಸಂಬಂಧಿಸಿದಂತೆ ಮತ್ತೊಂದು ಆಡಿಯೊ ಬಯಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಾಸನ ಪೆನ್‌ಡ್ರೈವ್ ಕೇಸ್‌ಗೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (Devarajegowda), ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (LR Shivarame Gowda) ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರ ನಡುವಿನ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೊ ಲಭ್ಯವಾಗಿದ್ದು, ಮಾತುಕತೆಯು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್ ಕುರಿತೇ ಇವರು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ಲಭ್ಯವಾಗಿರುವ ಆಡಿಯೊ ಪ್ರಕಾರ, ಮೊದಲು ದೇವರಾಜೇಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ದೂರವಾಣಿಯಲ್ಲಿ ಮಾತನಾಡಿದ್ದಾರೆ. “ನಾನು ಫೋನ್‌ಅನ್ನು ಡಿ.ಕೆ.ಶಿವಕುಮಾರ್ ಅವರಿಗೆ ಕೊಡುತ್ತೇನೆ. ಏನೇನಾಗಿದೆ ಎಲ್ಲದರ ಕುರಿತು ಮಾಹಿತಿ ಕೊಡು” ಎಂಬುದಾಗಿ ಶಿವರಾಮೇಗೌಡ ಅವರು ದೇವರಾಜೇಗೌಡರಿಗೆ ತಿಳಿಸುತ್ತಾರೆ. ಇದಾದ ಬಳಿಕ ದೇವರಾಜೇಗೌಡ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಇಲ್ಲಿದೆ ಆಡಿಯೊ ಸಂಭಾಷಣೆ
“ಏನೇನಾಯ್ತು? ಏನಿದೆ ಪರಿಸ್ಥಿತಿ” ಎಂಬುದಾಗಿ ಡಿ.ಕೆ.ಶಿವಕುಮಾರ್ ಕೇಳುತ್ತಾರೆ. ಆಗ ದೇವರಾಜೇಗೌಡ ಅವರು, “ಸದ್ಯದ ಪರಿಸ್ಥಿತಿಯಲ್ಲಿ ನಾಳೆ ಕೋರ್ಟ್‌ನಲ್ಲಿ ಸ್ಟೇ ಆಗೋ ಚಾನ್ಸ್ ಇದೆ. ಸರಿಯಾಗಿ ದೂರು ಕೊಟ್ಟಿಲ್ಲ. ಮಹಿಳೆ ನೀಡಿರುವ ಹೇಳಿಕೆ ಹಾಗೂ ನಡೆದಿರುವ ಘಟನೆ ಮಧ್ಯೆ ಹಲವು ವರ್ಷ ವ್ಯತ್ಯಾಸ ಇದೆ. ಆದರೆ, ಎಸ್‌ಐಟಿಯವರು ಮಹಿಳೆಯನ್ನು ಕರೆದುಕೊಂಡು ಹೋಗಿ ವಿಚಾರಣೆ, ತನಿಖೆ ನಡೆಸಿದರೆ ಸೀರಿಯಸ್ ಕೇಸ್ ಆಗುತ್ತದೆ. ಆದರೆ, ಮಹಿಳೆಯು ಪ್ರಕರಣದಲ್ಲಿ ಸ್ಟ್ರಾಂಗ್ ಇಲ್ಲ” ಎಂದಿದ್ದಾರೆ.
ಇದಾದ ಬಳಿಕ ಡಿ.ಕೆ.ಶಿವಕುಮಾರ್, “ಏನಾದರೂ ಬೇರೆ ಎವಿಡೆನ್ಸ್ ಇದೆಯಾ” ಎಂದು ಪ್ರಶ್ನಿಸಿದ್ದಾರೆ. ಆಗ, ದೇವರಾಜೇಗೌಡ ಅವರು “ಯಾವುದೇ ಎವಿಡೆನ್ಸ್ ಇಲ್ಲ” ಎಂದಿದ್ದಾರೆ. ಇದಾದ ಬಳಿಕ ಇಬ್ಬರ ನಡುವಿನ ಮಾತುಕತೆ ಮುಗಿದಿದೆ. ದೇವರಾಜೇಗೌಡ ಅವರು ಜೈಲಿಗೆ ಹೋಗುವ ಮೊದಲು ನಡೆದ ಮಾತುಕತೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ.
ದೇವರಾಜೇಗೌಡ ಗಂಭೀರ ಆರೋಪ
ಪೆನ್‌ಡ್ರೈವ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. “ಪೆನ್ ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದ್ದಾರೆ. ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಬಳಿ ಪೆನ್‌ಡ್ರೈವ್ ತರಿಸಿಕೊಂಡು ಎಲ್ಲವನ್ನೂ ರೆಡಿ ಮಾಡಿದ್ದು ಡಿಕೆಶಿ, ಇದರಲ್ಲಿ ಸುಮ್ಮನಾಗಲು 100 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜತೆಗೆ ಮಾತನಾಡಿದ್ದಲ್ಲ ಎಂದು ಹೇಳಿದ್ದಾರೆ.