Site icon Vistara News

Prajwal Revanna Case: ಪೆನ್ ಡ್ರೈವ್ ಹಂಚಿಕೆ ಪ್ರಕರಣ; ಚೇತನ್, ನವೀನ್ ಗೌಡ ಎಸ್ಐಟಿ ವಶಕ್ಕೆ

Chetan and Naveen gowda

ಬೆಂಗಳೂರು: ಪೆನ್ ಡ್ರೈವ್ ಹಂಚಿಕೆ ಪ್ರಕರಣದ (Prajwal Revanna Case) ಆರೋಪಿಗಳಾದ ಚೇತನ್, ನವೀನ್ ಗೌಡನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇದ್ದ ಕಾರಣ ಹೈಕೋರ್ಟ್‌ಗೆ ಬಂದಿದ್ದ ಇಬ್ಬರನ್ನೂ ಮಂಗಳವಾರ ವಶಕ್ಕೆ ಪಡೆಯಲಾಗಿದೆ.

ಹೈಕೋರ್ಟ್‌ನಿಂದ ಹೊರಗೆ ಬರುತ್ತಿದ್ದಂತೆ ಪಾರ್ಕಿಂಗ್‌ ಲಾಟ್‌ ಬಳಿ ಚೇತನ್, ನವೀನ್ ಗೌಡ ಸಿಕ್ಕಿಬಿದ್ದಿದ್ದು, ಅವರ ಜತೆ ಇದ್ದ ಶ್ಯಾಂ ಸುಂದರ್ ಎಂಬಾತನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ವಿಚಾರಣೆ ನಡೆಸಲು ಸಿಐಡಿ ಕಚೇರಿಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ | Prajwal Revanna Case: ಪ್ರಜ್ವಲ್‌ ಬಂದ್ರೆ ಎಸ್‌ಐಟಿ ಮುಂದೆ ನಾನೂ ಹಾಜರಾಗುವೆ: ಆರೋಪಿ ನವೀನ್‌ ಗೌಡ

ಪೆನ್‌ಡ್ರೈವ್‌ ಹಂಚಿಕೆ ಆರೋಪದಲ್ಲಿ ಏ.23ರಂದು ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 6 ಮತ್ತು 7 ನೇ ಆರೋಪಿಗಳಾಗಿ ಇತ್ತೀಚೆಗೆ ಚೇತನ್ ಹಾಗೂ ಲಿಖಿತ್ ಬಂಧನವಾಗಿತ್ತು. ಇದೀಗ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಕೇಸ್‌ ದಾಖಲಾದ ಮೇಲೆ ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ, ಚೇತನ್ ಹಾಗೂ ಪುಟ್ಟಿ ಆಲಿಯಾಸ್ ಪುಟ್ಟರಾಜ್ ತಲೆಮರೆಸಿಕೊಂಡಿದ್ದರಿಂದ ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಅವರೇ ವಿಚಾರಣೆಗಾಗಿ ಕೋರ್ಟ್‌ ಬಳಿ ಬಂದಾಗ ಸಿಕ್ಕಿಬಿದ್ದಿದ್ದಾರೆ.

ಹಾಸನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಹಾಸನ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲು ಎಸ್ಐಟಿ ತಂಡ ಕರೆದೊಯ್ದಿದೆ. ನವೀನ್ ಗೌಡ ಹಾಗೂ ಚೇತನ್ ವಿರುದ್ಧ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಹಂಚಿಕೆ ಆರೋಪವಿತ್ತು. ಪ್ರಜ್ವಲ್ ರೇವಣ್ಣ ಆಪ್ತ ಪೂರ್ಣಚಂದ್ರ ತೇಜಸ್ವಿ ಎಂಬಾತ ಇವರ ವಿರುದ್ಧ ಏ.23ರಂದು ದೂರು‌ ನೀಡಿದ್ದರು.

ಸಂತ್ರಸ್ತೆಯರಲ್ಲಿ ಜೆಡಿಎಸ್‌ ಕಾರ್ಯಕರ್ತರೆಯರೇ ಹೆಚ್ಚಾಗಿದ್ದಾರೆ: ನವೀನ್‌ ಗೌಡ

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅವರು ಬರಲಿ ವಿಚಾರಣೆ ಎದುರಿಸಲಿ. ಸಂತ್ರಸ್ತೆಯರಲ್ಲಿ ಜೆಡಿಎಸ್‌ ಕಾರ್ಯಕರ್ತರೆಯರೇ ಹೆಚ್ಚಾಗಿದ್ದಾರೆ. ಅವರಿಗೆಲ್ಲ ನ್ಯಾಯ ದೊರಕಬೇಕು. ಪ್ರಜ್ವಲ್‌ ಕೇಸ್‌ನಿಂದ (Prajwal Revanna Case) ಎಷ್ಟೋ ಜನ ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡಲು ಆಗುತ್ತಿಲ್ಲ. ಎಸ್‌ಐಟಿ ಮುಂದೆ ವಿಚಾರಣೆಗೆ ಅವರೂ ಬರಲಿ, ನಾನೂ ಹಾಜರಾಗುತ್ತೇನೆ ಎಂದು ಅಶ್ಲೀಲ ವಿಡಿಯೊ ವೈರಲ್‌ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನವೀನ್‌ ಗೌಡ ಹೇಳಿದ್ದ.

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಮೇ 31ರಂದು ಬೆಂಗಳೂರಿಗೆ ಆಗಮಿಸುತ್ತೇನೆ ಎಂದು ಹೇಳಿದ ಬೆನ್ನಲ್ಲೇ ನವೀನ್‌ ಗೌಡ ವಿಸ್ತಾರ ನ್ಯೂಸ್‌ಗೆ ಸೋಮವಾರ ಪ್ರತಿಕ್ರಿಯೆ ನೀಡಿದ್ದ.

ಅಶ್ಲೀಲ ವಿಡಿಯೊ ಆರೋಪದಲ್ಲಿ ಏ. 23ರಂದು ನನ್ನ ಮೇಲೆಯೂ ಎಫ್‌ಐಆರ್‌ ದಾಖಲಿಸಿದ್ದಾರೆ. ಹಾಸನದಲ್ಲಿ ಕಳೆದ 10 ವರ್ಷದಲ್ಲಿ ಎಷ್ಟು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ನಾಪತ್ತೆಯಾಗಿದ್ದಾರೆ ಎಂಬುವುದು ಮರು ತನಿಖೆಯಾಗಬೇಕಿದೆ. ಈ ಆತ್ಮಹತ್ಯೆಗಳಿಗೂ ಕೂಡ ಪ್ರಜ್ವಲ್‌ ರೇವಣ್ಣಗೆ ಸಂಬಂಧವಿದೆ. ಎಸ್‌ಐಟಿಯವರುವ ವಿಚಾರಣೆಗೆ ನನ್ನನ್ನು ಕರೆದಿಲ್ಲ. ಅವರು ಕರೆದರೆ ನಾನು ಹೋಗುತ್ತೇನೆ. ನಾನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕೇಸ್‌ ಹಾಕಿದ್ದಾರೆ ಹೇಳಿದ್ದ.

ಅಶ್ಲೀಲ ವಿಡಿಯೊ ವಿಷಯ ಬಹಿರಂಗಪಡಿಸದಂತೆ ನನಗೂ ಪ್ರಜ್ವಲ್‌ ರೇವಣ್ಣ ಅವರು ಆಮಿಷ ಒಡ್ಡಿದ್ದರು. ಅವರ ಸಹಚರನನ್ನು ನನ್ನ ಭೇಟಿಯಾಗಲು ಕಳುಹಿಸಿದ್ದರು ಎಂದು ಆರೋಪಿಸಿದ್ದ.

ನವೀನ್‌ ಗೌಡ ಯಾರು?

ನವೀನ್‌ ಗೌಡ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಶಾಸಕ ಜಮೀರ್‌ ಅಹಮ್ಮದ್‌ ಆಪ್ತರಲ್ಲೊಬ್ಬನಾಗಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈತ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೀಲ್‌ಗೂ ಆಪ್ತರಾಗಿದ್ದರು. ಚುನಾವಣೆ ವೇಳೆ ಶ್ರೇಯಸ್‌ ಪರವಾಗಿ ಪ್ರಚಾರವನ್ನೂ ಮಾಡಿದ್ದ. ಈತನೇ ಹಾಸನ ಜಿಲ್ಲಾದ್ಯಂತ ಪೆನ್‌ಡ್ರೈವ್‌ ಅನ್ನು ಹಂಚಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ನವೀನ್ ಗೌಡ ಮೇಲೆ ಏ.23ರಂದು ಹಾಸನ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ಬಳಿಕ ನವೀನ್ ಗೌಡ ನಾಪತ್ತೆಯಾಗಿದ್ದ. ಆದರೆ, ಭಾನುವಾರ ಫೇಸ್‌ಬುಕ್‌ನಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಶಾಸಕ ಎ. ಮಂಜು ವಿರುದ್ಧ ಪೋಸ್ಟ್ ಹಾಕಿ ಕೆಲವೇ ಸಮಯದ ಬಳಿಕ ಡಿಲೀಟ್‌ ಮಾಡಿದ್ದ.

ಇದನ್ನೂ ಓದಿ | Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

ಪೆನ್‌ಡ್ರೈವ್‌ ಹಂಚಿಕೆಯ ಪ್ರಮುಖ ಆರೋಪ ಹೊತ್ತಿರುವ ನವೀನ್‌ ಗೌಡ, ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿ, ಅರಕಲಗೂಡು ಶಾಸಕ ಎ. ಮಂಜು ಮೇಲೆ ಬೊಟ್ಟು ಮಾಡಿದ್ದ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಮಹಾ ನಾಯಕ ಇವರೇ ಎಂದು ಆರೋಪ ಮಾಡಿದ್ದ. ನಂತರ ಸುಳ್ಳು ಆರೋಪ ಮಾಡಿದ್ದಾರೆ ಎಂದು ನವೀನ್‌ ಗೌಡ ವಿರುದ್ಧ ಶಾಸಕ ಎ. ಮಂಜು ಅವರು ಎಸ್‌ಐಟಿಗೆ ದೂರು ನೀಡಿದ್ದರು.

Exit mobile version