ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Prajwal Revanna Case) ವಿಡಿಯೊ ವೈರಲ್ ಮಾಡಿದ ಆರೋಪದಲ್ಲಿ ಬಂಧನವಾಗಿರುವ ಲಿಖಿತ್ ಗೌಡ ಹಾಗೂ ಚೇತನ್‌ಗೆ ಜಾಮೀನು ತಿರಸ್ಕೃತಗೊಂಡಿದೆ. ಹಾಸನದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದೆ.
ಮೇ 12 ರಂದು ಎಸ್ಐಟಿ ಅಧಿಕಾರಿಗಳು ತಂಡ ಲಿಖಿತ್, ಚೇತನ್‌ರನ್ನು ಬಂಧಿಸಿತ್ತು. ಮೇ 12ರಂದು ಈ ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ, ಇದೀಗ ಆರೋಪಿಗಳಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೊಗಳನ್ನು ವೈರಲ್ ಮಾಡಲಾಗುತ್ತಿದೆ ಎಂದು ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಸದ್ಯ ಅಶ್ಲೀಲ ವಿಡಿಯೊ ಹರಿಬಿಟ್ಟವರನ್ನು ವಶಕ್ಕೆ ಪಡೆಯುತ್ತಿರುವ ಎಸ್‌ಐಟಿ ಅಧಿಕಾರಿಗಳ ತಂಡ, ಆರೋಪಿಗಳಾದ ಚೇತನ್ ಹಾಗೂ ಲಿಖಿತ್ನನ್ನು ಬಂಧಿಸಿದ್ದರು. ಇನ್ನುಳಿದ ನವೀನ್ ಗೌಡ ಮತ್ತು ಪುಟ್ಟರಾಜುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳಾದ ಲಿಖಿತ್ ಗೌಡ ಮತ್ತು ಚೇತನ್, ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾಗಿದ್ದಾರೆ. ಮೊದಲಿಗೆ ಪೆನ್‌ಡ್ರೈವ್ ವೈರಲ್ ಸಂಬಂಧ ದಾಖಲಾಗಿದ್ದ ಕೇಸ್‌ನಲ್ಲಿ ಈ ಇಬ್ಬರ ಹೆಸರು ಇರಲಿಲ್ಲ. ನಂತರ ಈ ಇಬ್ಬರ ಮೇಲೆ ವಿಡಿಯೊ ಹಂಚಿಕೆ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ | CM Siddaramaiah: ಕಾಂಗ್ರೆಸ್ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!
ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್. ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna Bail) ಅವರಿಗೆ ಸೋಮವಾರ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ (ಮೇ 14) ಬಿಡುಗಡೆ (HD Revanna Released) ಮಾಡಲಾಗಿದೆ.
ಇದರಿಂದಾಗಿ ಒಟ್ಟು 11 ದಿನಗಳ ವನವಾಸದಿಂದ ಎಚ್.ಡಿ. ರೇವಣ್ಣ ಮುಕ್ತರಾದರು. ಈ ವೇಳೆ ರೇವಣ್ಣ ಪರ ವಕೀಲರು ಜಾಮೀನು ಷರತ್ತುಗಳನ್ನು ಪೂರೈಸಿದರು. ರೇವಣ್ಣ ಪಾಸ್ ಪೋರ್ಟ್, ಇಬ್ಬರು ಶ್ಯೂರಿಟಿ, ಐದು ಲಕ್ಷ ರೂಪಾಯಿ ಬಾಂಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ವಕೀಲರು ಸಲ್ಲಿಸಿದ ಬಳಿಕ ರೇವಣ್ಣ ಅವರನ್ನು ಬಿಡುಗಡೆ ಮಾಡಲಾಯಿತು.
ಗುಳಿಕ ಕಾಲದಲ್ಲಿಯೇ ರೇವಣ್ಣ ಜೈಲಿನಿಂದ ರಿಲೀಸ್
ಮಧ್ಯಾಹ್ನ 3:22 ರಿಂದ 5 ಗಂಟೆಯವರೆಗೆ ರಾಹುಕಾಲ ಇರುವ ಹಿನ್ನೆಲೆಯಲ್ಲಿ ಬಿಡುಗಡೆ ಪ್ರಕ್ರಿಯೆಯನ್ನು ಬೇಗ ಮಾಡಲಾಗಿದೆ. ಮಧ್ಯಾಹ್ನ 12.5 ರಿಂದ 1:39ರವರೆಗೆ ಗುಳಿಕ ಕಾಲ ಇದ್ದರಿಂದ 1.30ಕ್ಕೆ ರೇವಣ್ಣ ಜೈಲಿನಿಂದ ರಿಲೀಸ್ ಆಗಿದ್ದಾರೆ. ರೇವಣ್ಣ ಜೈಲಿನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಆದರೆ, ಅಲ್ಲಿ ಕ್ಷಣವೂ ನಿಲ್ಲದ ಎಚ್.ಡಿ. ರೇವಣ್ಣ ಸೀದಾ ಪದ್ಮನಾಭನಗರದಲ್ಲಿರುವ ಎಚ್.ಡಿ.ದ ದೇವೇಗೌಡ ಅವರ ನಿವಾಸಕ್ಕೆ ಹೊರಟಿದ್ದಾರೆ.
ಇದನ್ನೂ ಓದಿ | HD Revanna Released: ತಬ್ಬಿಕೊಂಡ ಎಚ್‌ಡಿಕೆ; ಕುಟುಂಬಸ್ಥರ ಕಂಡು ಕಣ್ಣೀರಿಟ್ಟ ರೇವಣ್ಣ, ಇಷ್ಟಾದರೂ ಬಾರದ ಭವಾನಿ!
ಎಚ್.ಡಿ. ರೇವಣ್ಣಗೆ ಜಾಮೀನು ಸಿಗುವುದಕ್ಕೆ ಕಾರಣಗಳೇನು?
- ರೇವಣ್ಣ ಅವರೇ ಕಿಡ್ನ್ಯಾಪ್ ಮಾಡಿಸಿದ್ದು ಎನ್ನುವುದಕ್ಕೆ ಸಾಕ್ಷಿ ಇಲ್ಲ.
- ಸಿಆರ್ಪಿಸಿ ಅಡಿ ಸಂತ್ರಸ್ತೆ ನೀಡಿದ್ದ ಹೇಳಿಕೆಯಲ್ಲೂ ಪ್ರಸ್ತಾಪ ಇಲ್ಲ.
- ರಿಮ್ಯಾಂಡ್ ಅಪ್ಲಿಕೇಶನ್ನಲ್ಲಿ ಸಾಕ್ಷಿ ಒದಗಿಸಲು ಎಸ್ಐಟಿ ವಿಫಲವಾಗಿದೆ.
- ಎಚ್.ಡಿ. ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್ ಅನ್ನಲು ಸಾಕ್ಷಿ ಇಲ್ಲ.
- ರೇವಣ್ಣ ಅವರಿಗೆ ಏಕೆ ಜಾಮೀನು ಕೊಡಲಾಗುತ್ತಿದೆ ಎಂಬುದಾಗಿ ಈ ಮೇಲಿನ ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಧೀಶರು ಸ್ಪಷ್ಟವಾಗಿ ಆದೇಶಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.
8 ಷರತ್ತುಗಳನ್ನು ವಿಧಿಸಿ ಬೇಲ್ ಕೊಟ್ಟ ಕೋರ್ಟ್!
- 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಕೊಡಬೇಕು
- ಇಬ್ಬರ ಶ್ಯೂರಿಟಿಯನ್ನು ಒದಗಿಸಿಕೊಡಬೇಕು
- ಯಾವ ಕಾರಣಕ್ಕೂ ದೇಶ ಬಿಟ್ಟು ಹೋಗಬಾರದು
- ಕೇಸ್ ಆಗಿರುವ ಕೆ.ಆರ್.ನಗರಕ್ಕೆ ಹೋಗಬಾರದು
- ಎಸ್ಐಟಿ ತನಿಖೆಗೆ ಸೂಕ್ತ ಸಹಕಾರ ನೀಡಲೇಬೇಕು
- ಯಾವುದೇ ರೀತಿಯ ಸಾಕ್ಷ್ಯ ನಾಶ ಮಾಡಬಾರದು
- ಪಾಸ್ ಪೋರ್ಟ್ ಅನ್ನು ಕೋರ್ಟ್ಗೆ ಸಲ್ಲಿಸಬೇಕು.
- ನ್ಯಾಯಾಲಯದ ಅನುಮತಿ ಇಲ್ಲದೇ ರಾಜ್ಯದಿಂದ ಹೊರಹೋಗುವಂತಿಲ್ಲ.