Site icon Vistara News

Prajwal Revanna Case: ಅಶ್ಲೀಲ ವಿಡಿಯೊ ವೈರಲ್ ಕೇಸ್‌; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿಗೆ

Prajwal Revanna Case

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ವೈರಲ್ ಪ್ರಕರಣದಲ್ಲಿ (Prajwal Revanna Case) ವಕೀಲ ದೇವರಾಜೇಗೌಡ, ಇದೀಗ ಎಂಟನೇ ಆರೋಪಿಯಾಗಿದ್ದಾರೆ. ಏಪ್ರಿಲ್ 23 ರಂದು ಹಾಸನ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ 8ನೇ ಆರೋಪಿಯಾಗಿ ದೇವರಾಜೇಗೌಡ ಅವರ ಹೆಸರು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡ ಅವರನ್ನು ವಿಚಾರಣೆಗಾಗಿ ಒಂದು ದಿನದ ಮಟ್ಟಿಗೆ ಎಸ್‌ಐಟಿ ವಶಕ್ಕೆ ನೀಡಲಾಗಿದೆ.

ವಕೀಲ‌ ದೇವರಾಜೇಗೌಡ ಅವರನ್ನು ಶನಿವಾರ ಸಂಜೆ 5 ಗಂಟೆಯವರೆಗೆ ಎಸ್‌ಐಟಿ ವಶಕ್ಕೆ ನೀಡಿ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಆದೇಶ ಹೊರಡಿಸಿದೆ. ಅಶ್ಲೀಲ ವಿಡಿಯೊ ಪ್ರಕರಣ ಸಂಬಂಧ ದೇವರಾಜೇಗೌಡರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ದೇವರಾಜೇಗೌಡರನ್ನು ಎಸ್ಐಟಿ ಕಸ್ಟಡಿಗೆ ನೀಡಲಾಗಿದೆ.

ದೇವರಾಜೇಗೌಡ ವಿರುದ್ಧ ಪೆನ್‌ಡ್ರೈವ್ ಹಂಚಿಕೆ ಮಾಡಿರುವ ಆರೋಪವಿದ್ದು, ಹೆಚ್ಚಿನ ವಿಚಾರಣೆ ಅಗತ್ಯವಿದೆ. ಆದರೆ ಸಾಕ್ಷಿದಾರರನ್ನು ಇಲ್ಲಿ ಆರೋಪಿ ಮಾಡಲಾಗಿದೆ. ಉದ್ದೇಶ ಪೂರ್ವಕವಾಗಿಯೇ ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ದೇವರಾಜೇಗೌಡ ಪರ ವಕೀಲ ಸುನಿಲ್ ವಾದ ಮಂಡನೆ ಮಾಡಿದರು. ಅಂತಿಮವಾಗಿ ವಕೀಲರನ್ನು ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ | HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್‌ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದರಿಂದ ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್‌ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ವಕೀಲರನ್ನು ಒಂದು ದಿನದ ಮಟ್ಟಿಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಸಾಕ್ಷ್ಯ ಬಿಡುಗಡೆಗೆ ಮುಂದಾಗಿದ್ದ ದೇವರಾಜೇಗೌಡ ಅವರು ಬೇರೆ ಕೇಸ್‌ನಲ್ಲಿ ಬಂಧನವಾಗಿದ್ದಾರೆ. ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.

ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ | CM Ibrahim : ಯಾರನ್ನು ಕೇಳಿ ಮೈತ್ರಿ ಮಾಡಿದ್ರಿ ಎಂದ ಸಿಎಂ ಇಬ್ರಾಹಿಂ; ಅ. 16ರಂದು ಜೆಡಿಎಸ್‌ಗೆ ರಾಜೀನಾಮೆ?

ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಮಹಿಳೆಯೊಬ್ಬರು ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ದೇವರಾಜೇಗೌಡ ವಿರುದ್ಧ ಕೇಳಿ ಬಂದಿದೆ.

Exit mobile version