ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೊಗಳು, ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಸೇರಿ ದೇಶಾದ್ಯಂತ ಸುದ್ದಿಯಾಗಿರುವ ಪೆನ್‌ಡ್ರೈವ್ ಕೇಸ್‌ನಲ್ಲಿ (Pendrive Case) ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ ಎಸ್‌ಐಟಿ ವಶಕ್ಕೆ ಸೇರಿದ್ದು, ಪ್ರಕರಣಕ್ಕೆ ಮಹತ್ವದ ತಿರುವೊಂದು ಸಿಕ್ಕಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ನಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ರೇವಣ್ಣ ಅವರನ್ನು ವಶಪಡಿಸಿಕೊಂಡಿರುವ ಕುರಿತು ಪ್ರಕ್ರಿಯೆ ಮುಗಿಸುವ ಅವರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದಾರೆ. ಆದಾಗ್ಯೂ, ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಕಾರಣ ಎಸ್‌ಐಟಿ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆ ಬಳಿಕ ವಿಚಾರಣೆ ನಡೆಸಲಿದ್ದಾರೆ. ಇಲ್ಲವೇ, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಎಚ್.ಡಿ.ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಎಸ್‌ಐಟಿ ಅಧಿಕಾರಿಗಳು, ಆರೋಪಿಯ ವಿಚಾರಣೆಗಾಗಿ ವಶಕ್ಕೆ ನೀಡಬೇಕು ಎಂಬುದಾಗಿ ಮನವಿ ಮಾಡಲಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೂ ಪತ್ತೆಯಾಗಿರುವುದರಿಂದ, ಪ್ರಕರಣದ ಗಾಂಭೀರ್ಯವನ್ನು ಅರಿತು ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆ ನಡೆಸಿತು, ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು. ಇದಾದ ಕೆಲ ಹೊತ್ತಿನಲ್ಲೇ ಎಸ್‌ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡರು.
ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಕೇಸ್; ದೇವೇಗೌಡರ ನಿವಾಸದಲ್ಲೇ ಎಚ್.ಡಿ.ರೇವಣ್ಣ ಬಂಧನ