Site icon Vistara News

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

HD Revanna

Prajwal Revanna Case: HD Revanna Cries In SIT Cell In Bengaluru

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಆಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ (Bowring Hospital) ವೈದ್ಯಕೀಯ ಪರೀಕ್ಷೆ (Medical Test) ಮಾಡಿಸಿದ್ದಾರೆ. ಇದಾದ ಬಳಿಕ ಎಚ್‌.ಡಿ.ರೇವಣ್ಣ ಅವರನ್ನು ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ಇಡೀ ರಾತ್ರಿ ಎಸ್‌ಐಟಿ ಸೆಲ್‌ನಲ್ಲಿಯೇ ಮಾಜಿ ಸಚಿವ ಕಳೆಯಲಿದ್ದಾರೆ. ಇನ್ನು, ಎಸ್‌ಐಟಿ ಸೆಲ್‌ನಲ್ಲಿ ಎಚ್‌.ಡಿ.ರೇವಣ್ಣ ಅವರು ಗಳಗಳನೆ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಎಚ್‌.ಡಿ.ದೇವೇಗೌಡರ ಮನೆಯಲ್ಲಿ ಎಚ್‌.ಡಿ. ರೇವಣ್ಣ ಅವರನ್ನು ವಶಪಡಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಮೊದಲು ಅವರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಹೋದರು. ಇದಾದ ಬಳಿಕ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಮತ್ತೆ ಸಿಐಡಿ ಕಚೇರಿಗೆ ಕರೆತಂದು, ಎಸ್‌ಐಟಿ ಸೆಲ್‌ನಲ್ಲಿ ಇರಿಸಿದರು. ಎಚ್‌.ಡಿ.ರೇವಣ್ಣ ಅವರು ಮಲಗಲು ಹಾಸಿಗೆ ಹಾಗೂ ಬೆಡ್‌ಶೀಟ್‌ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಎಚ್‌.ಡಿ.ರೇವಣ್ಣ ಅವರನ್ನು ವಿಚಾರಣೆ ಮಾಡಲಿರುವ ಅಧಿಕಾರಿಗಳು, ಬಳಿಕ ವಿಶ್ರಾಂತಿಗೆ ಅವಕಾಶ ನೀಡಲಿದ್ದಾರೆ. ಸೆಲ್‌ನಲ್ಲಿ ರೇವಣ್ಣ ಅವರಿಗೆ ಒಂದು ಸಾಮಾನ್ಯ ಬೆಡ್‌ ಹಾಗೂ ಕುರ್ಚಿ ನೀಡಲಾಗಿದೆ. ಇದೆಲ್ಲವನ್ನೂ ಕಂಡ ರೇವಣ್ಣ ಅವರು ಕಣ್ಣೀರು ಹಾಕಿದ್ದಾರೆ. ಮಗ ವಿದೇಶಕ್ಕೆ ಪರಾರಿಯಾಗಿದ್ದಾನೆ. ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದೆ. ಈಗ ನಾನು ಸೆಲ್‌ನಲ್ಲಿ ಇರಬೇಕಾಯಿತಲ್ಲ ಎಂಬುದನ್ನು ನೆನೆದು ರೇವಣ್ಣ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಲಿರುವ ಅಧಿಕಾರಿಗಳು, ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನ್ಯಾಯಾಧೀಶರು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಸಂಜೆವರೆಗೆ ಸಮಯವಿದೆ.

ನಮ್ಮನ್ನೆಲ್ಲ ಸಾಯಿಸ್ತಾರೆ ಎಂದ ಮಹಿಳೆ

ಮೈಸೂರಿನ ತೋಟದ ಮನೆಯಿಂದ ರಕ್ಷಿಸಲ್ಪಟ್ಟ ಸಂತ್ರಸ್ತ ಮಹಿಳೆಯು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದರೂ ರೇವಣ್ಣ ಕುಟುಂಬದ ಭಯದಲ್ಲಿದ್ದಾರೆ. “ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ” ಎಂದಷ್ಟೇ ಮಹಿಳೆಯು ಹೇಳುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಭದ್ರತೆ ಕುರಿತು ಎಷ್ಟು ಹೇಳಿದರೂ ಮಹಿಳೆಯು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಎಚ್‌.ಡಿ.ರೇವಣ್ಣ ಕುಟುಂಬಸ್ಥರು ಏನಾದರೂ ಮಾಡಿಬಿಡುತ್ತಾರೆ ಎಂಬ ಭಯ ಕಾಡುತ್ತಿದೆ. ಇದರ ಬೆನ್ನಲ್ಲೇ, ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಅಪಹರಣದ ಕುರಿತು ಕೇಸ್‌ ದಾಖಲಿಸಿದ ಪುತ್ರನಿಗೂ ಜೀವ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಲು ಎಸ್‌ಐಟಿ ಅಧಿಕಾರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

Exit mobile version