Site icon Vistara News

Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ!

Nikhil Kumaraswamy

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣ (Prajwal Revanna Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡುತ್ತಿರುವ ನಡುವೆ ಮೊದಲ ಬಾರಿ ಮಾಧ್ಯಮಗಳಿಗೆ ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ದೇವೇಗೌಡರನ್ನು ಹಾಗೂ ಕುಮಾರಸ್ವಾಮಿ ಅವರನ್ನು ಮುಂದೆ ತರುವುದು ಸರಿಯಲ್ಲ. ನಾನು ಈಗಾಗಲೇ ಹೇಳಿದ್ದೇನೆ, ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಖಂಡಿತಾ ಶಿಕ್ಷೆ ಆಗಬೇಕು. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದರು.

ನಗರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಭೇಟಿಯಾದ ಬಳಿಕ ಅವರು ಮಾತನಾಡಿದ್ದು, ನನಗೆ ನಾಲ್ಕು ದಿನಗಳಿಂದ ವೈರಲ್ ಫೀವರ್ ಇತ್ತು. ಹಾಗಾಗಿ ದೇವೇಗೌಡರನ್ನು ಪೋನ್‌ನಲ್ಲಿ ಮಾತನಾಡಿದ್ದೆ. ಈಗ ಬಂದು ಅವರ ಆರೋಗ್ಯ ವಿಚಾರಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ | Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

ಇನ್ನು ಪ್ರಕರಣದಲ್ಲಿ ದೇಶದ ಪ್ರಧಾನಿಗಳನ್ನು ಈ ವಿಚಾರದಲ್ಲಿ ಕರೆತರುವುದು ಒಳ್ಳೆಯದಲ್ಲ, ಅದು ಸೂಕ್ತವೂ ಅಲ್ಲ. ಅಲ್ಲದೇ ಹಾಸನ ಪ್ರಕರಣ ವಿಚಾರಕ್ಕೆ ನನಗೂ ಸಂಬಂಧ ಇಲ್ಲ. ನಾನು ಹೆಚ್ಚಾಗಿ ಹಾಸನಕ್ಕೆ ಕಾಲೇ ಇಟ್ಟಿಲ್ಲ. ವರ್ಷದಲ್ಲಿ ಹಾಸನಾಂಬೆ ದರ್ಶನಕ್ಕೆ ಮಾತ್ರ ಹೋಗುತ್ತೇನೆ. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ. ಕರ್ನಾಟಕ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದೆ, ತನಿಖೆ ನಡೆಯುತ್ತಿದ್ದು, ಕಾನೂನಿಗಿಂತ ಯಾರು ದೊಡ್ಡವರಲ್ಲ. ಅದು ಒಂದು ಪ್ರಕ್ರಿಯೆ, ಅದರ ಬಗ್ಗೆ ನಾನು ಮಾತನಾಡಲು ಹೋಗಲ್ಲ ಎಂದು ಹೇಳಿದರು.

ಡಿ.ಕೆ. ಬ್ರದರ್ಸ್ ಅವರಿಂದ ದೇವೇಗೌಡ ಹಾಗೂ ಕುಮಾರಸ್ವಾಮಿ ಟಾರ್ಗೆಟ್ ಅಗುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಒಂದು ಪ್ರಕರಣ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡುತ್ತಿದೆ. ವಿಶೇಷವಾಗಿ ದೇವೇಗೌಡ ಅವರ ಜೀವನ ತೆರೆದ ಪುಸ್ತಕ, ಅಜ್ಜಿ ಚೆನ್ನಮ್ಮ ಯಾವ ರೀತಿ ಬದುಕಿದ್ದಾರೆ ಅಂತ ಅದು ನಮಗೆ ಗೊತ್ತು. ಹಾಗಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಅವರಿಗೆ 92 ವರ್ಷ ಆಗಿದೆ. ಅವರಿಗೆ ಸಹಜವಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ. ಒಬ್ಬರೇ ವಿಶ್ರಾಂತಿ ತೆಗೆದುಕೊಳ್ತಾ ಇದ್ದರು, ದೇವಸ್ಥಾನಕ್ಕೆ ಹೋಗಿಬಂದೆ ಅಂದರು. ಅವರು ಸಾಕಷ್ಟು ನೊಂದಿದ್ದಾರೆ, ನಮ್ಮ ಅಜ್ಜಿ ಸಹ ಬಹಳ ನೋವಿನಲ್ಲಿದ್ದಾರೆ ಎಂದು ತಿಳಿಸಿದರು.

ನನಗೆ ಒಂದೇ ಒಂದು ದುಃಖ ಏನೆಂದರೆ, ಆ ದೃಶ್ಯ ಏನಿದೆ ಅದನ್ನು ನಾನು ನೋಡಕ್ಕೆ ಹೋಗಿಲ್ಲ. ನನ್ನ ಆಪ್ತ ವರ್ಗದವರು ಹೇಳಿದ ಪ್ರಕಾರ, ಕನಿಷ್ಠ ಆ ವೀಡಿಯೊ ಬ್ಲರ್ ಕೂಡ ಆಗಿಲ್ಲ. ಆದರೆ, ಪಾಪ ಆ ಹೆಣ್ಣು ಮಕ್ಕಳನ್ನ ಓಪನ್ ಆಗಿ ತೋರಿಸಿದ್ದಾರ. ಇದು ನಿಜಕ್ಕೂ ಕೂಡ ಬೇಜಾರು ಆಗುತ್ತೆ. ಇದರ ಬಗ್ಗೆಯೂ ಸಹ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಹಾಸನ ಟಿಕೆಟ್ ವಿಚಾರದಲ್ಲಿ ಬಿಜೆಪಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರು ಅಂತಿಮ ನಿರ್ಧಾರ ಮಾಡುತ್ತಾರೆ, ಅವರ ನಿರ್ಧಾರಕ್ಕೆ ತಲೆಬಾಗಿ ಕೆಲಸ ಮಾಡಿದ್ದೇವೆ ಎಂದರು. ಇನ್ನು ಪ್ರಕರಣದಿಂದ ನೊಂದ ಪಕ್ಷದ ಹಾಸನ ಕಾರ್ಯಕರ್ತರರಿಗೆ ಧೈರ್ಯ ಹೇಳುವ ಬಗ್ಗೆ ಸ್ಪಂದಿಸಿ, ನೂರಕ್ಕೆ ನೂರು ಆ ವಿಚಾರದಲ್ಲಿ ಹಾಸನಕ್ಕೆ ಹೋಗೊದು ಇದೆ. ಪಕ್ಷದ ನಾಯಕರು ಕಾರ್ಯಕರ್ತರ ಬಳಿ ಕುಮಾರಣ್ಣ ಹೋಗುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | Prajwal Revanna Case: ಜರ್ಮನಿ ಆಯ್ತು, ದುಬೈ ಬಿಟ್ಟಾಯ್ತು; ಮತ್ತೊಂದು ದೇಶಕ್ಕೆ ಹಾರಿದ ಪ್ರಜ್ವಲ್‌ ರೇವಣ್ಣ!

ಶಿವರಾಮೇಗೌಡರ ಆರೋಪದ ವಿಚಾರ ಪ್ರತಿಕ್ರಿಯಿಸಿ, ಶಿವರಾಮೇಗೌಡರು ಬಹಳ ದೊಡ್ಡವರಿದ್ದಾರೆ. ಪಾಪ ಏನೋ ಮಾತನಾಡುತ್ತಾರೆ, ಎಸ್ಐಟಿ ರಚನೆ ಆಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Exit mobile version