ಬೆಂಗಳೂರು: ʼʼಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾಗಿರುವ ಪೆನ್‌ಡ್ರೈವ್ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾವುದೋ ವಿಚಾರದಲ್ಲಿ ನನ್ನನ್ನು ದೇವರಾಜೇಗೌಡ ಸಿಕ್ಕಿಸಿದ್ದಾನೆʼʼ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ. ʼʼಪೆನ್‌ಡ್ರೈವ್ ಹೊರಗೆ ಬಿಟ್ಟಿದ್ದು ದೇವರಾಜೇಗೌಡ ಮತ್ತು ಕಾರ್ತಿಕ್. ಹೀಗಾಗಿ ಈ ಇಬ್ಬರನ್ನೂ ವಿಚಾರಣೆ ನಡೆಸಬೇಕು. ಈ ಪ್ರಕರಣಕ್ಕೂ ಡಿ.ಕೆ.ಶಿವಕುಮಾರ್ ಅವರಿಗಾಗಲಿ ಮತ್ತು ನನಗಾಗಲಿ ಯಾವುದೆ ಸಂಬಂಧವಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.
ʼʼದೇವರಾಜೇಗೌಡ ನನಗೆ ಫೋನ್ ಮಾಡಿ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಹೇಳಿದ್ದ. ನಾನು ಆಗಲಿ ಎಂದು ಫೋನ್ನಲ್ಲಿ ಹೇಳಿದ್ದೆ. ಬಳಿಕ ಡಿಕೆಶಿ ಅವರಿಗೆ ಕರೆ ಮಾಡಿ ಹಲೋ ದೇವರಾಜೇಗೌಡ ಎಂದಿದ್ದು ಬಿಟ್ಟು ಬೇರೇನೂ ಕೇಳಿಲ್ಲ. ಇದನ್ನೇ ಮುಂದಿಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡಿದ್ದಾನೆ. ದೇವರಾಜೇಗೌಡ ಏ. 29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಬೌರಿಂಗ್ ಕ್ಲಬ್ನಲ್ಲಿ ನಮ್ಮನ್ನು ಭೇಟಿ ಮಾಡಿದ್ದೆ ಎಂದು ತಿಳಿಸಿದ್ದಾನೆ. ಮೋಸ್ಟ್ ಕ್ರಿಮಿನಲ್ ಮ್ಯಾನ್ ಇವನು. ಇವನ ಜತೆ ಯಾರೇ ವ್ಯವಹರಿಸುತ್ತಿದ್ದರೂ ಎಚ್ಚರಿಕೆಯಿಂದ ಇರಬೇಕು. ಬರೀ ಒಂದು ಫೋನ್ ಮಾತಾಡಿದ್ದಕ್ಕೆ ಸೀನ್ ಕ್ರಿಯೇಟ್ ಮಾಡಿದ್ದಾನೆʼʼ ಎಂದು ಶಿವರಾಮೇಗೌಡ ಹೇಳಿದ್ದಾರೆ.
ʼʼಅವನು (ದೇವರಾಜೇಗೌಡ) ಒಳಗೆ ಹೋದ ಮೇಲೆ ಹುಚ್ಚು ನಾಯಿ ಒಳಗೆ ಹೋಯಿತಲ್ಲ ಎಂದು ಪ್ರಾರ್ಥನೆ ಮಾಡಿದ್ದೇನೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್‌ಡ್ರೈವ್ ಅನ್ನು ಮಾರಾಟಕ್ಕೆ ಇಟ್ಟಿದ್ದೇ ದೇವರಾಜೇಗೌಡ. ಪೊಲೀಸ್ ಬಾಷೆಯಲ್ಲಿ ವಿಚಾರಿಸಬೇಕು. ಆಗ ಸತ್ಯ ಬಾಯಿ ಬಿಡುತ್ತಾನೆʼʼ ಎಂದು ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.
ಇನ್ನು ದೇವರಾಜೇಗೌಡ ಭೇಟಿಯ ಕುರಿತು ಸ್ಪಷ್ಟನೆ ನೀಡಿದ ಶಿವರಾಮೇಗೌಡ ಅವರು, ʼʼನಾನು ದೇವರಾಜೇಗೌಡ ಜತೆ ಮೊದಲು ಮಾತನಾಡಿದ್ದೆ ಏಪ್ರಿಲ್ 29ರಂದು. ಅಂದು ಪೆನ್‌ಡ್ರೈವ್ ಕೇಸ್ ಅನ್ನು ಸಿಎಂ, ಡಿಸಿಎಂ ಎಲ್ಲ ಸೇರಿ ಮುಚ್ಚಿ ಹಾಕ್ತಾರೆ ಕಣಣ್ಣ ಎಂದು ದೇವರಾಜೆಗೌಡ ಹೇಳಿದ್ದ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಬಿಟ್ಟು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಹೇಳುತ್ತಿದ್ದಾನೆ. ವಿಚಾರಣೆಯ ದಿಕ್ಕು ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆʼʼ ಎಂದು ಆರೋಪಿಸಿದ್ದಾರೆ.
ಮಾನನಷ್ಟ ಮೊಕದ್ದಮೆ ಹಾಕುತ್ತೇನೆ
ʼʼಕೇಸ್‌ನಲ್ಲಿ ಪದೇ ಪದೆ ನನ್ನ ಹೆಸರು ಪ್ರಸ್ತಾವಿಸುವ ಕಾರಣ ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈ ಬಗ್ಗೆ ಈಗಾಗಲೇ ವಕೀಲರ ಜತೆ ಮಾತನಾಡಿದ್ದೇನೆ. ಶ್ರೀಘ್ರದಲ್ಲಿಯೇ ಲೀಗಲ್ ನೋಟಿಸ್ ಕೊಡಲಿದ್ದೇವೆ. ಅವನು ನನ್ನ ಬಗ್ಗೆ ಹೇಳಿರುವ ವಿಡಿಯೊವನ್ನು ಈಗಾಗಲೇ ವಕೀಲರಿಗೆ ಕೊಟ್ಟಿದ್ದೇನೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ನೋವು ತಂದ್ರಲ್ಲ ಎಂಬ ನೋವು ನನಗೆ ಕಾಡುತ್ತಿದೆʼʼ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ?
ʼʼನಾನು ಈಗ ಬಿಜೆಪಿಗೆ ರಾಜೀನಾಮೆ ಕೊಟ್ಟಿದ್ದೇನೆ. ಮುಂದೆ ಯಾವ ಪಕ್ಷಕ್ಕೆ ಸೇರುತ್ತೇನೆ ಅಂತ ಹೇಳುತ್ತೇನೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ಕಳಿಸಿದ್ದೇನೆ. ಅವರು ಇನ್ನೂ ಏನು ಹೇಳಿಲ್ಲʼʼ ಎಂದು ಶಿವರಾಮೇಗೌಡ ತಿಳಿಸಿದ್ದಾರೆ. ʼʼಈ ಹಿಂದೆ ಅಧಿಕಾರ ಕೊಡುತ್ತಾರೆ ಅಂತ ಜೆಡಿಎಸ್ಗೆ ಸೇರಿದೆ. ಆಮೇಲೆ ರುಬ್ಬಿ ಹೊರಗಡೆಯೂ ಕಳುಹಿಸಿದ್ದಾರೆ. ನಾನು ಮೂಲತಃ ಕಾಂಗ್ರೆಸ್ ವ್ಯಕ್ತಿ. ಯೂತ್ ಕಾಂಗ್ರೆಸ್ನಲ್ಲೂ ಇದ್ದೆʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Prajwal Revanna Case: ಅಶ್ಲೀಲ ವಿಡಿಯೊ ವೈರಲ್ ಕೇಸ್; ವಕೀಲ ದೇವರಾಜೇಗೌಡ ಎಸ್‌ಐಟಿ ಕಸ್ಟಡಿ ಅವಧಿ 2 ವಿಸ್ತರಣೆ