ಹಾಸನ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ (Prajwal Revanna Case) ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಗಳು ಕೇಳಿಬರುತ್ತಿವೆ. ಈ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಣ ಮಾಡಿರುವುದು ಬೇರೆ ಎಲ್ಲೂ ಅಲ್ಲ, ನಗರದ ಎಂಪಿ ಗೆಸ್ಟ್ ಹೌಸ್‌ನಲ್ಲೇ ಎನ್ನಲಾಗಿದೆ. ಮತ್ತೊಂದೆಡೆ ಮುಖ್ಯ ರಸ್ತೆ ಪಕ್ಕದಲ್ಲೇ ಗೆಸ್ಟ್ ಹೌಸ್ ಇದ್ದರೂ ಅಲ್ಲಿ ಸಿಸಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಂಪಿ ಗೆಸ್ಟ್ ಹೌಸ್, ರಸ್ತೆ ಪಕ್ಕದಲ್ಲೇ ಇದ್ದರೂ ಕಟ್ಟಡದ ಹೊರಗೆ ಹಾಗೂ ಒಳಗೆ ಎಲ್ಲೂ ಸಿಸಿ ಕ್ಯಾಮೆರಾ ಪತ್ತೆಯಾಗಿಲ್ಲ. ಸರ್ಕಾರಿ ಬಂಗಲೆಗೆ ಸಿಸಿ ಕ್ಯಾಮೆರಾ ಇಲ್ಲದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಯಾರು ಬಂದರು, ಹೋದರು ಎಂಬ ಸಾಕ್ಷಿಗೂ ಸಿಸಿ ಕ್ಯಾಮೆರಾಗಳು ಇಲ್ಲದಂತಾಗಿದೆ.
ಇನ್ನು ಪ್ರಜ್ವಲ್ ವಿರುದ್ಧ ಪ್ರಕರಣದ ದಾಖಲಾದ ಬಳಿಕ ಹಾಸನ ಎಂಪಿ ಗೆಸ್ಟ್ ಹೌಸ್ ಖಾಲಿ ಖಾಲಿಯಾಗಿದ್ದು, ಅಲ್ಲಿಗೆ ಬಂದಿರುವ ಪತ್ರಗಳು ಬಾಗಿಲಿನಲ್ಲೇ ಸಿಕ್ಕಿಸಿರುವುದು ಕಂಡುಬಂದಿದೆ. ಪತ್ರಗಳು ಬಂದು ಎರಡು ದಿನ ಕಳೆದರೂ ಯಾರೂ ತೆಗೆದುಕೊಂಡಿಲ್ಲ.
ಸಂಸದರಾಗಿದ್ದಾಗ ಹಾಸನದ ಎಂಪಿ ಕ್ವಾರ್ಟರ್ಸ್ ದೇವೇಗೌಡರ ಅಧಿಕೃತ ನಿವಾಸವಾಗಿತ್ತು. ಬಳಿಕ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗುತ್ತಲೇ ಪ್ರಜ್ವಲ್ಗೆ ಮನೆ ಹಸ್ತಾಂತರ ಮಾಡಲಾಗಿತ್ತು, ಹಾಸನಕ್ಕೆ ಬಂದಾಗ ಸಂಸದರ ನಿವಾಸದಲ್ಲೇ ಪ್ರಜ್ವಲ್ ವಾಸ್ತವ್ಯ ಹೂಡುತ್ತಿದ್ದರು. ಚುನಾವಣಾ ಸಮಯದಲ್ಲಿ ಇದೇ ಮನೆಯಲ್ಲಿ ಪ್ರಜ್ವಲ್ ರೇವಣ್ಣ ನೆಲೆಸಿದ್ದರು. ಅಧಿಕಾರಿಗಳ ಸಭೆ ಸೇರಿದಂತೆ ಜೆಡಿಎಸ್ ಮುಖಂಡರ ಸಭೆಗಳನ್ನು ಪ್ರಜ್ವಲ್ ನಡೆಸುತ್ತಿದ್ದರು.
ಇದನ್ನೂ ಓದಿ | Prajwal Revanna: ಜರ್ಮನಿಯಲ್ಲಿ ಪ್ರಜ್ವಲ್ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್ ಹಾಲಿಡೇಸ್?
ಮಾಜಿ ಪ್ರಧಾನಿ ದೇವೇಗೌಡರು ಹಾಸನದ ಸಂಸದರಾಗಿದ್ದಾಗ ಸರ್ಕಾರದಿಂದ ನಿವೇಶನ ಮಂಜೂರಾಗಿ, ಅವರ ವಾಸ್ತವ್ಯಕ್ಕಾಗಿ 2019ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಟ್ಟಡದಲ್ಲಿ ಒಟ್ಟು ನಾಲ್ಕು ಕೊಠಡಿ ಇದ್ದು, ನೆಲ ಮಹಡಿಯಲ್ಲಿ ಎರಡು ಹಾಗೂ ಮೊದಲ ಅಂತಸ್ತಿನಲ್ಲಿ ಎರಡು ಕೊಠಡಿಗಳಿವೆ. ದೇವೇಗೌಡರು ಹಾಸನಕ್ಕೆ ಬಂದಾಗ ಹೆಚ್ಚಾಗಿ ಇದೇ ಗೆಸ್ಟ್ ಹೌಸ್ನಲ್ಲಿ ಉಳಿಯುತ್ತಿದ್ದರು.