Site icon Vistara News

Prajwal Revanna Case: ವಿಚಾರಣೆಗೆ ಬರುವ ಪ್ರಜ್ವಲ್‌ ನಿರ್ಧಾರ ಸ್ವಾಗತಿಸುವೆ ಎಂದ ಸಚಿವ ಪರಮೇಶ್ವರ್‌

BJP-JDS Padayatra

ತುಮಕೂರು: ಪ್ರಜ್ವಲ್ ರೇವಣ್ಣ (Prajwal Revanna Case) ವಿಡಿಯೊ ಮೂಲಕ ಮಾತನಾಡಿದ್ದಾರೆ. ಇದೇ ತಿಂಗಳ 31 ರಂದು ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ತನಿಖೆಗೆ ಸಹಕಾರ ಕೊಡುತ್ತೀನಿ ಎಂದು ಹೇಳ್ತಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೊ ಮಾಡಿ ಹರಿಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಈ ಬಗ್ಗೆ ಇಡೀ ಜಗತ್ತೇ ಮಾತನಾಡುವ ಸಂದರ್ಭದಲ್ಲಿ ಅವರನ್ನು ಕರೆತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿತ್ತು. ಪ್ರಧಾನಮಂತ್ರಿಗಳಿಗೆ ಮುಖ್ಯಮಂತ್ರಿಗಳು ಎರಡು ಬಾರಿ ಪತ್ರ ಬರೆದರು. ಸಿಬಿಐ, ಇಂಟರ್ ಪೋಲ್‌ಗೆ ಮನವಿ ಮಾಡಿದ್ದೆವು. ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಿದ್ದರು ಎಂದು ತಿಳಿಸಿದ್ದಾರೆ.

ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್ ಪೊರ್ಟ್ ರದ್ದು ಮಾಡಿ ಅವರನ್ನು ಕರೆತರಲು ಕೇಂದ್ರ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದೆವು. ಪಾಸ್ ಪೊರ್ಟ್ ರದ್ದು ಪ್ರಕ್ರಿಯೆ ಪ್ರಾರಂಭ ಮಾಡಿದ್ದೀವಿ‌ ಅಂತ ಅವರು ತಿಳಿಸಿದ್ದರು. ಈ ಮಧ್ಯೆ ಅವರೇ ವಿಚಾರಣೆಗೆ ಬರುತ್ತೇನೆ ಎಂದು ಹೇಳಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ಎಸ್ಐಟಿ ಬಳಿ ಏನು ಸಾಕ್ಷ್ಯಗಳಿವೆಯೋ, ಅವುಗಳ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದ ಎಂದು ಪರಮೇಶ್ವರ್‌ ತಿಳಿಸಿದ್ದಾರೆ.

ಇದನ್ನೂ ಓದಿ | DK Shivakumar: ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ; ಡಿ.ಕೆ.ಶಿವಕುಮಾರ್

ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ ಗೃಹ ಸಚಿವ

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡಲಿಲ್ಲ. ಡಿಪ್ಲೊಮ್ಯಾಟಿಕ್ ಪಾಸ್ ಪೊರ್ಟ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಹೇಳಿದರು. ನಮ್ಮ ಪತ್ರಗಳಿಗೆ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಅವರು ಏನೂ ಮಾಡಿಲ್ಲ ಎಂದು ಅರ್ಥ ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

ನಾನು ಪ್ರಜ್ವಲ್ ವಿಡಿಯೊ ನೋಡಿರಲಿಲ್ಲ‌, ನನಗೆ ಎರಡು ಗಂಟೆ ಮುಂಚೆ ಸುದ್ದಿ ಬಂತು. ಈ ರೀತಿಯಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ ಅಂತ, ನಾನು ಬೇರೊಂದು ಕೆಲಸಕ್ಕೆ ಬಂದಿದ್ದೆ. ಹಾಗಾಗಿ ವಿಡಿಯೊ ನೋಡಿರಲಿಲ್ಲ, ಇವಾಗ ವಿಡಿಯೊ ನೋಡಿದಾಗ ಕನ್ಫರ್ಮ್ ಆಯ್ತು. ಅವರು ಏನಾದರೂ ಹೇಳಿಕೊಳ್ಳಲಿ, ಅವರು ಹೇಳಿದಕ್ಕೆ ನಾನು ಉತ್ತರ ಕೊಡಲಿಕ್ಕೆ ಹೋಗಲ್ಲ‌ ಎಂದು ಹೇಳಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ಅವರನ್ನು ಯಾವ ರೀತಿ ಕಸ್ಟಡಿಗೆ ತಗೋಬೇಕು ಎಂಬುವುದು ಎಸ್‌ಐಡಿ ಅವರಿಗೆ ಗೊತ್ತಿರುತ್ತದೆ. ಯಾವ ರೀತಿಯಾಗಿ ಕಾನೂನಿನ ಚೌಕಟ್ಟಿಗೆ ತರಬೇಕು ಅಂತ ಡಿಸೈಡ್ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

ಪ್ರಜ್ವಲ್ ರೇವಣ್ಣ ಮಾಜಿ ಕಾರು ಡ್ರೈವರ್ ಕಾರ್ತಿಕ್ ಬಂಧನ ವಿಚಾರ‌ ಪ್ರತಿಕ್ರಿಯಿಸಿ, ಅವರು ಕೊರ್ಟ್‌ಗೆ ಹೋಗಿದ್ದಾರೆ. ಇದೇ ವೇಳೆ ಪ್ರಜ್ವಲ್ ರೇವಣ್ಣ ನನ್ನದೇನು ತಪ್ಪಿಲ್ಲ ಎಂಬ ಹೇಳಿಕೆ ವಿಚಾರಕ್ಕೆ ಸ್ಪಂದಿಸಿ, ಎಲ್ಲರೂ ಹಾಗೆಯೇ ಹೇಳುತ್ತಾರೆ, ತಪ್ಪಿಲ್ಲ ಅಂದ್ರೆ ಮಾಡಿದವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎಸ್‌ಐಟಿಯವರು ಎಲ್ಲಾ ಮಾಹಿತಿ ಕಲೆಹಾಕಿ ಹೇಳುತ್ತಾರೆ. ಮೇ 31ಕ್ಕೂ ಪ್ರಜ್ವಲ್‌ ಬರದಿದ್ದರೆ ಮುಂದೆ ಏನಾಗುತ್ತೆ ನೋಡೋಣ ಎಂದು ಹೇಳಿದ್ದಾರೆ.

Exit mobile version