ಬೆಂಗಳೂರು: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ವಿದೇಶದಲ್ಲಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ನಗರದ 42ನೇ ಎಸಿಎಂಎಂ ಕೋರ್ಟ್, ಇತ್ತೀಚೆಗೆ ಸಂಸದನ ವಿರುದ್ಧ ಬಂಧನ ವಾರಂಟ್ ಹೊರಡಿಸಿ, ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಿತ್ತು. ಹೀಗಾಗಿ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಎಸ್‌ಐಟಿ ಪತ್ರ ಬರೆದಿದೆ.
ಈ ಕೂಡಲೇ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದು ಮಾಡಬೇಕು ಎಂದು ಮನವಿ ಮಾಡಿರುವ ಎಸ್‌ಐಟಿ, ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಎಲ್ಲವನ್ನೂ ಪತ್ರದ ಜತೆ ಟ್ಯಾಗ್ ಮಾಡಿದೆ. ಜತೆಗೆ ಪ್ರಜ್ವಲ್ ವಿರುದ್ಧದ ಪ್ರಕರಣಗಳ ಬಗ್ಗೆ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದು, ಸಂಸದ ಯಾವ ದೇಶದಲ್ಲಿ ಇದ್ದಾನೆ ಎಂಬ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ | Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್; ಜೂನ್ 13ಕ್ಕೆ ಮತದಾನ
ಪ್ರಜ್ವಲ್ ತನಿಖೆ ಎದುರಿಸುವುದೇ ಸೂಕ್ತ: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸಂತ್ರಸ್ತೆ ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡಿಯೂ ತೋರಿಸಿಲ್ಲ. ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಎಷ್ಟು ಸರಿ? ಇಡೀ ರಾಜ್ಯದ ಜನಕ್ಕೆ ಈ ರೀತಿಯ ತೋರಿಸಿದ್ದು ಯಾರು? ಅವರ ಬಗ್ಗೆ ಯಾಕೆ ತನಿಖೆ ಆಗುತ್ತಿಲ್ಲ? ಇದರಲ್ಲಿ ಯಾರ ಪಾತ್ರ ಇದೆಯೋ , ರಾಜ್ಯ ಸರ್ಕಾರದ ಜವಾಬ್ದಾರಿ ಇದೆ. ಇದು ಇವತ್ತು ರಾಷ್ಟ್ರದ ಮಟ್ಟದಲ್ಲಿ ಸುದ್ದಿ ಆಗಿದೆ. ಇದಕ್ಕೆ ಉತ್ತರ ಸಿಗಬೇಕು. ತನಿಖೆ ಪಾರದರ್ಶಕವಾಗಿ ಆಗಬೇಕು ಅಲ್ವಾ? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ | MLC Election: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಎನ್. ರವಿಕುಮಾರ್
ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ತನಿಖೆ ಎದುರಿಸುವುದು ಸೂಕ್ತ. ಘಟನೆ ಆದ ದಿನವೇ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಬೇಕು ಅಂತ. ಎಸ್‌ಐಟಿ ತನಿಖೆ ಮಾಡುತ್ತಲಿದೆ. ಹೀಗಾಗಿ ಸಂಸದರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಪ್ರಜ್ವಲ್ ನನ್ನ ಜತೆಯಂತೂ ಸಂಪರ್ಕದಲ್ಲಿಲ್ಲ ಎಂದು ನಿಖಿಲ್ ಹೇಳಿದರು.