ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇಡೀ ಪ್ರಕರಣವು ಜೆಡಿಎಸ್ ಹಾಗೂ ಬಿಜೆಪಿಗೆ ಮುಜುಗರ ತಂದಿದೆ. ಇದರ ಬೆನ್ನಲ್ಲೇ, ಅಪಹರಣಕ್ಕೀಡಾದ ಸಂತ್ರಸ್ತೆಯು ಪ್ರಾಣಭಯದಿಂದ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸದಂತಹ ಸ್ಥಿತಿಗೆ ತಲುಪಿದ್ದಾರೆ.
ಹೌದು, ಎಚ್.ಡಿ.ರೇವಣ್ಣ ಸಂಬಂಧಿಯಾದ ಸತೀಶ್ ಬಾಬಣ್ಣ ಎಂಬಾತನು ಲೈಂಗಿಕ ದೌರ್ಜನ್ಯಕೀಡಾದ ಸಂತ್ರಸ್ತೆಯನ್ನು ಅಪಹರಿಸಿ, ಹುಣಸೂರಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಇರಿಸಿದ್ದು, ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಮಹಿಳೆಯನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅವರು ತನಿಖಾಧಿಕಾರಿಗಳ ಎದುರು ಎಲ್ಲವನ್ನೂ ಹೇಳಲು ಆಗುತ್ತಿಲ್ಲ. ಇದರಿಂದಾಗಿ ಪ್ರಕರಣದಲ್ಲಿ ಮಹತ್ವದ ಪ್ರಗತಿ ಸಾಧಿಸಲು ಎಸ್‌ಐಟಿ ಅಧಿಕಾರಿಗಲು ಹೆಣಗಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
“ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ” ಎಂದಷ್ಟೇ ಮಹಿಳೆಯು ಹೇಳುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಭದ್ರತೆ ಕುರಿತು ಎಷ್ಟು ಹೇಳಿದರೂ ಮಹಿಳೆಯು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಎಚ್.ಡಿ.ರೇವಣ್ಣ ಕುಟುಂಬಸ್ಥರು ಏನಾದರೂ ಮಾಡಿಬಿಡುತ್ತಾರೆ ಎಂಬ ಭಯ ಕಾಡುತ್ತಿದೆ. ಇದರ ಬೆನ್ನಲ್ಲೇ, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಅಪಹರಣದ ಕುರಿತು ಕೇಸ್ ದಾಖಲಿಸಿದ ಪುತ್ರನಿಗೂ ಜೀವ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಲು ಎಸ್‌ಐಟಿ ಅಧಿಕಾರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜ್ವಲ್ ಶರಣಾಗತಿ?
“ಎಸ್‌ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ಅವರು ನಡೆದುಕೊಳ್ಳುತ್ತಾರೆ. ಇನ್ನು, ಪ್ರಜ್ವಲ್ ರೇವಣ್ಣ ಕೂಡ ಆಗಮಿಸಲಿದ್ದಾರೆ. ಅವರು ಪೊಲೀಸರಿಗೆ ಶರಣಾಗಲಿದ್ದಾರೆ” ಎಂಬುದಾಗಿ ಜೆಡಿಎಸ್ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಹಿತಿ ನೀಡಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಯಾವಾಗ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬುದರ ಕುರಿತು ಅವರು ಮಾಹಿತಿ ನೀಡಿಲ್ಲ.
ಇದನ್ನೂ ಓದಿ: HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!