Site icon Vistara News

Prajwal Revanna Case: ಪ್ರಜ್ವಲ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್;‌ ರೇವಣ್ಣ ಪಿಎ ಮನೆಯಲ್ಲಿ ಸಂತ್ರಸ್ತೆಯ ರಕ್ಷಣೆ!

Prajwal Revanna Case

Prajwal Revanna Case: Victim Found In Mysore District In HD Revanna's PA's House

ಮೈಸೂರು: ಕರ್ನಾಟಕ ಸೇರಿ ದೇಶಾದ್ಯಂತ ಸುದ್ದಿಯಾಗಿರುವ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ (Prajwal Revanna Case) ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಮುನ್ನಡೆ ಸಿಕ್ಕಿದೆ. ಪ್ರಕರಣದಲ್ಲಿ ಅಪಹರಣಕ್ಕೀಡಾಗಿದ್ದ ಸಂತ್ರಸ್ತೆಯನ್ನು ಎಸ್‌ಐಟಿ ಅಧಿಕಾರಿಗಳು ಮೈಸೂರಿನಲ್ಲಿ ರಕ್ಷಣೆ ಮಾಡಿದ್ದಾರೆ. ಎಚ್‌.ಡಿ.ರೇವಣ್ಣ (HD Revanna) ಆಪ್ತ ಸಹಾಯಕ ರಾಜಶೇಖರ್‌ ತೋಟದ ಮನೆಯಲ್ಲಿದ್ದ ಸಂತ್ರಸ್ತೆಯನ್ನು ಅಧಿಕಾರಿಗಲು ರಕ್ಷಣೆ ಮಾಡಿದ್ದಾರೆ. ಇದು ಈಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

ಏಪ್ರಿಲ್‌ 29ರಂದು ಕೆ.ಆರ್.ನಗರದ ಮನೆಯಿಂದ ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್.‌ ನಗರ ಠಾಣೆಯಲ್ಲಿ ಎಚ್‌.ಡಿ.ರೇವಣ್ಣ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ಪುತ್ರ ದೂರು ದಾಖಲಿಸಿದ್ದ. ಈಗ ಅಧಿಕಾರಿಗಳು ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆಯನ್ನು ರಾಜಶೇಖರ್‌ ಕೂಡಿ ಹಾಕಿದ್ದ ಎಂದು ತಿಳಿದುಬಂದಿದೆ.

ಏಪ್ರಿಲ್‌ 29ರಿಂದಲೂ ಆಗಿಂದಲೂ ಹುಣಸೂರು ತಾಲೂಕಿನ ಕಾಳೇನಳ್ಳಿಯ ರೇವಣ್ಣ ಆಪ್ತ ಸಹಾಯಕ ರಾಜಶೇಖರ್ ತೋಟದಲ್ಲಿ ಇರಿಸಲಾಗಿತ್ತು. ರೇವಣ್ಣ ಸಂಬಂಧಿ ಸತೀಶ್ ಬಾಬು ಎಂಬಾತ ಮಹಿಳೆಯನ್ನು ಕರೆದೊಯ್ದಿದ್ದ. ಸಂತ್ರಸ್ತೆಯ ಪತ್ತೆಯೊಂದಿಗೆ ಪೊಲೀಸರು ನಿಟ್ಟುಸಿರು ಬಿಟ್ಟಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಿದ್ದಾರೆ. ಇದಾದ ಬಳಿಕ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಮಹಿಳೆಯನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಅವರು ವಿದೇಶಕ್ಕೆ ಹಾರಿದ್ದಾರೆ. ಇದರ ಬೆನ್ನಲ್ಲೇ, ಪ್ರಜ್ವಲ್‌ ರೇವಣ್ಣನಿಂದ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯನ್ನು ಅವರ ಮನೆಯಿಂದಲೇ ಅಪಹರಣ ಮಾಡಲಾಗಿತ್ತು. ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿದ್ದು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಎಚ್‌.ಡಿ.ರೇವಣ್ಣ ಅವರ ಜಾಮೀನು ಅರ್ಜಿಯ ಕುರಿತು ಕೋರ್ಟ್‌ ತೀರ್ಪು ಕಾಯ್ದಿರಿಸಿರುವ ಮಧ್ಯೆಯೇ ಸಂತ್ರಸ್ತೆಯನ್ನು ರಕ್ಷಣೆ ಮಾಡಿರುವುದು ಪ್ರಕರಣದಲ್ಲಿ ಸಿಕ್ಕ ಮಹತ್ವದ ಮುನ್ನಡೆ ಎಂದೇ ಹೇಳಲಾಗುತ್ತಿದೆ. ಸಂತ್ರಸ್ತೆಯು ದೂರು ದಾಖಲಿಸಿದರೆ ಪ್ರಕರಣವು ಇನ್ನಷ್ಟು ಗಂಭೀರ ಸ್ವರೂಪ ಪಡೆಯಲಿದೆ. ಮಹಿಳೆ ದೂರು ದಾಖಲಿಸಬಾರದು ಎಂಬ ಕಾರಣಕ್ಕಾಗಿಯೇ ಅವರನ್ನು ಅಪಹರಣ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Prajwal Revanna Case: ಜರ್ಮನಿ ಆಯ್ತು, ದುಬೈ ಬಿಟ್ಟಾಯ್ತು; ಮತ್ತೊಂದು ದೇಶಕ್ಕೆ ಹಾರಿದ ಪ್ರಜ್ವಲ್‌ ರೇವಣ್ಣ!

Exit mobile version