Site icon Vistara News

Prajwal Revanna Case: ಭಾರತಕ್ಕೆ ಬರುವ ಮೊದಲೇ ಜಾಮೀನಿಗಾಗಿ ಪ್ರಜ್ವಲ್‌ ಅರ್ಜಿ ಸಲ್ಲಿಕೆ; ಮುಂದೇನಾಗತ್ತೆ?

Prajwal Revanna Case

Prajwal Revanna Files Anticipatory Bail Plea Ahead Of His Returing To India

ಬೆಂಗಳೂರು: ಮೇ 31ರಂದು ಭಾರತಕ್ಕೆ ಆಗಮಿಸುವುದಾಗಿ ಹೇಳಿದ್ದ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರು, ಇದೀಗ ಬೆಂಗಳೂರಿಗೆ ಟಿಕೆಟ್‌ ಮಾಡಿರುವುದು ಕಂಡುಬಂದಿದೆ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಜ್ವಲ್‌ ರೇವಣ್ಣ, ಮೇ 30ರಂದು ಮಧ್ಯಾಹ್ನ ಜರ್ಮನಿಯಲ್ಲಿ ಫ್ಲೈಟ್‌ ಹತ್ತಲಿದ್ದಾರೆ. ಮತ್ತೊಂದೆಡೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ (Bengaluru Report) ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ನಿರೀಕ್ಷಣಾ ಜಾಮೀನಿಗಾಗಿ ಪ್ರಜ್ವಲ್‌ ರೇವಣ್ಣ ಪರ ವಕೀಲರೊಬ್ಬರು ಅರ್ಜಿ (Anticipatory Bail Plea) ಸಲ್ಲಿಸಿದ್ದಾರೆ.

ಹೌದು, ಪ್ರಜ್ವಲ್‌ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ವಕೀಲ ಅರುಣ್‌ ಅವರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್‌ ಸಿಕ್ಕಂತಾಗಿದೆ. ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರುತ್ತಲೇ ಅವರನ್ನು ಬಂಧಿಸಬಾರದು ಎಂಬ ದೃಷ್ಟಿಯಿಂದ ಅರುಣ್‌ ಅವರು ಪ್ರಜ್ವಲ್‌ ರೇವಣ್ಣ ಪರ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗ ನ್ಯಾಯಾಲಯವು ಅರ್ಜಿಯ ಕುರಿತು ಯಾವ ತೀರ್ಪು ನೀಡುತ್ತದೆ ಎಂಬ ಕುತೂಹಲ ಮೂಡಿದೆ.

Prajwal Revanna case

ಲುಫ್ತಾನ್ಸಾ ಏರ್‌ಲೈನ್ಸ್‌ ಮೂಲಕ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ, ಗುರುವಾರ ಮಧ್ಯಾಹ್ನ 12.05ಕ್ಕೆ ಮ್ಯೂನಿಚ್‌ನಲ್ಲಿ ಫ್ಲೈಟ್ ಹತ್ತಲಿದ್ದಾರೆ. ಮಧ್ಯರಾತ್ರಿ 12.30ಕ್ಕೆ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ಆಗಮಿಸುತ್ತಲೇ ವಶಕ್ಕೆ ಪಡೆಯಲು ಎಸ್‌ಐಟಿ ಸಜ್ಜಾಗಿದ ಎಂದು ಈಗಾಗಲೇ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಮೇ 27ರಂದು ವಿಡಿಯೊದಲ್ಲಿ ಮಾತನಾಡಿದ್ದ ಪ್ರಜ್ವಲ್‌ ರೇವಣ್ಣ, ನಾನು ಶುಕ್ರವಾರ (ಮೇ 31) ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂಬುದಾಗಿ ಹೇಳಿದ್ದರು.

ಇದನ್ನೂ ಓದಿ: Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Exit mobile version