Site icon Vistara News

Prajwal Revanna: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಅಸಲಿ; ಎಫ್‌ಎಸ್‌ಎಲ್‌ ವರದಿ ಬಹಿರಂಗ, ಎಸ್‌ಐಟಿ ತನಿಖೆಗೆ ಬಲ!

Prajwal Revanna

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ, ಪ್ರಜ್ವಲ್‌ ರೇವಣ್ಣ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೊಗಳು ಅಸಲಿಯಾಗಿವೆ. ವಿಡಿಯೊಗಳನ್ನು ತಿರುಚಿಲ್ಲ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು (FSL Report) ತಿಳಿಸಿದೆ. ಇದರಿಂದಾಗಿ ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲು ಎಸ್‌ಐಟಿಗೆ ಆನೆ ಬಲ ಬಂದಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊಗಳು ಅಸಲಿ ಎಂಬುದು ಎಫ್‌ಎಸ್‌ಎಲ್‌ ವರದಿಯಿಂದ ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದ ವಿಡಿಯೊಗಳನ್ನು ಎಡಿಟ್‌ ಅಥವಾ ಮಾರ್ಫ್‌ ಮಾಡಿಲ್ಲ. ಯಾವುದೇ ರೀತಿಯಲ್ಲಿ ಎನಿಮೇಷನ್‌, ಗ್ರಾಫಿಕ್ಸ್‌ಗಳನ್ನು ಬಳಸಿಲ್ಲ. ಎಲ್ಲ ವಿಡಿಯೊಗಳು ಅಸಲಿಯಾಗಿವೆ ಎಂಬುದಾಗಿ ಎಸ್‌ಎಫ್‌ಎಲ್‌ ವರದಿ ಸಲ್ಲಿಸಿದ್ದು, ವರದಿ ಈಗ ಎಸ್‌ಐಟಿ ತಂಡದ ಕೈಸೇರಿದೆ. ಇದರಿಂದಾಗಿ ಎಸ್‌ಐಟಿ ಇನ್ನು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದೆ ಎಂದು ತಿಳಿದುಬಂದಿದೆ.

ವಿಡಿಯೊದಲ್ಲಿರುವುದು ಪ್ರಜ್ವಲ್‌ ರೇವಣ್ಣ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳಲ್ಲಿ ಪುರುಷನ ಮುಖವನ್ನು ತೋರಿಸಿಲ್ಲ. ಹಾಗಾಗಿ, ಅಶ್ಲೀಲ ವಿಡಿಯೊದಲ್ಲಿರುವುದು ಪ್ರಜ್ವಲ್‌ ರೇವಣ್ಣ ಹೌದೋ, ಅಲ್ಲವೋ ಎಂಬುದು ಇದುವರೆಗೆ ದೃಢವಾಗಿಲ್ಲ. ಈಗ ವಿಡಿಯೊಗಳು ಅಸಲಿಯಾಗಿವೆ ಎಂಬುದು ಮಾತ್ರ ವರದಿಯಿಂದ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಪ್ರಜ್ವಲ್‌ ರೇವಣ್ಣ ಹೌದೋ, ಅಲ್ಲವೋ ಎಂಬುದು ಕೂಡ ಬಯಲಾಗಿದೆ. ಎಫ್‌ಎಸ್‌ಎಲ್‌ ವರದಿ ಬಳಿಕ ಎಸ್‌ಐಟಿ ಅಧಿಕಾರಿಗಳ ತನಿಖೆಯು ಚುರುಕುಗೊಂಡಿದ್ದು, ಶೀಘ್ರದಲ್ಲೇ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸುತ್ತಾರೆ. ಅದರಲ್ಲಿ, ಎಫ್‌ಎಸ್‌ಎಲ್‌ ವರದಿಯ ಕುರಿತು ಕೂಡ ಉಲ್ಲೇಖಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್‌ ರೇವಣ್ಣ, ವಿಡಿಯೊ ವೈರಲ್‌ ಆಗುತ್ತಲೇ ವಿದೇಶಕ್ಕೆ ಪರಾರಿಯಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಅವರು ಭಾರತಕ್ಕೆ ವಾಪಸ್‌ ಬಂದಿದ್ದರು. ಭಾರತಕ್ಕೆ ವಾಪಸಾಗುತ್ತಲೇ ಅವರನ್ನು ಬಂಧಿಸಲಾಗಿದ್ದು, ಸದ್ಯ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯ ಅಪಹರಣ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ತಂದೆ ಎಚ್‌.ಡಿ.ರೇವಣ್ಣ ಅವರು ಕೂಡ ಜೈಲು ಸೇರಿದ್ದರು. ಅವರು ಈಗ ಜಾಮೀನು ಪಡೆದು ಹೊರಬಂದಿದ್ದಾರೆ. ಇದೇ ಪ್ರಕರಣವು ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೂ ಮುಳುವಾಗಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಎಫ್‌ಐಆರ್‌; ಪ್ರೀತಂ ಗೌಡ ಮೇಲೂ ದೂರು

Exit mobile version