ಹಾಸನ: ಹೊಳೆನರಸೀಪುರದ ಇತಿಹಾಸ ಪ್ರಸಿದ್ಧ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಸೋಮವಾರ ಪ್ರಸಾದ ವಿನಿಯೋಗ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ (JDS Politics) ನಡುವೆ ನಡೆದಿದ್ದ ಜಟಾಪಟಿ ಮಂಗಳವಾರವೂ ಮುಂದುವರಿದಿದೆ. ಇದನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕುಟುಂಬ ಈಗ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಇದರ ಪರಿಣಾಮ ಸಂಸದ ಪ್ರಜ್ವಲ್ ರೇವಣ್ಣ ಅವರು ದೇವಾಲಯದ ಸಂಪೂರ್ಣ ಉಸ್ತುವಾರಿಯನ್ನೇ ವಹಿಸಿಕೊಂಡಿದ್ದಾರೆ.
ಪ್ರಸಾದ ವಿತರಣೆಗೆ ಸಂಬಂಧಪಟ್ಟಂತೆ ಸೋಮವಾರ ಜೆಡಿಎಸ್ – ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟಗಳು ನಡೆದಿದ್ದವು. ಪ್ರತಿ ವರ್ಷವೂ ರೇವಣ್ಣ ಕುಟುಂಬದವರೇ ಪ್ರಸಾದ ವಿತರಣೆಯನ್ನು ಮಾಡುತ್ತಾರೆ. ಹೀಗಾಗಿ ಈ ಭಾರಿ ತಮಗೂ ಪ್ರಸಾದ ವಿನಿಮಯಕ್ಕೆ ಅವಕಾಶ ಕೊಡಬೇಕು ಎಂಬುದು ಕಾಂಗ್ರೆಸ್ಸಿಗರ ವಾದವಾಗಿತ್ತು. ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು.
ಕೊನೆಗೆ ತಹಸೀಲ್ದಾರ್ ಮಧ್ಯಪ್ರವೇಶ ಮಾಡಿ, ಈ ಹಿಂದಿನಿಂದಲೂ ಯಾವುದೇ ಪಕ್ಷದ ಹೆಸರಿನಲ್ಲಿ ಪ್ರಸಾದ ವಿನಿಯೋಗ ನಡೆದಿಲ್ಲ. ಈ ವರ್ಷ ಕೂಡ ಯಾರ ವೈಯಕ್ತಿಕ ಹೆಸರು ಅಥವಾ ಪಕ್ಷದ ಹೆಸರಿನಲ್ಲಿ ಅನ್ನ ಸಂತರ್ಪಣೆ ಆಗುವುದಿಲ್ಲ. ಆದರೆ, ಮುಜರಾಯಿ ಇಲಾಖೆಗೆ ಯಾರು ಬೇಕಾದರೂ ದಾನ ಕೊಡಬಹುದು. ದಾನಿಗಳು ದಿನಸಿ ಕೊಟ್ಟರೆ ಅದನ್ನು ಅನ್ನ ಸಂತರ್ಪಣೆಗೆ ಬಳಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಯಾರಿಗೂ ಪ್ರಸಾದ ವಿನಿಯೋಗಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಆದರೆ, ಈಗ ಮಂಗಳವಾರ ಬೆಳಗ್ಗೆಯೇ ಭೇಟಿ ನೀಡಿರುವ ಸಂಸದ ಪ್ರಜ್ವಲ್ ರೇವಣ್ಣ, ದೇವಸ್ಥಾನದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.
ಪ್ರಸಾದ ವಿತರಣೆ, ಭಕ್ತರಿಗೆ ನೀರು ವಿತರಣೆ ಸೇರಿದಂತೆ ಎಲ್ಲವನ್ನೂ ಮಾರ್ಗದರ್ಶನ ಮಾಡುತ್ತಿರುವ ಪ್ರಜ್ವಲ್ ರೇವಣ್ಣ, ಸರತಿ ಸಾಲಿನ ಬಗ್ಗೆ ಸೂಚನೆ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮತ್ತು ತಾಲೂಕು ಆಡಳಿತಕ್ಕೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಖುದ್ದು ಸ್ಥಳದಲ್ಲಿ ನಿಂತು ಟೇಬಲ್ ಹಾಕಿಸಿ ವ್ಯವಸ್ಥೆ ಮಾಡಿಸಿದ್ದಾರೆ. ಈಗ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ದೇವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: JDS Politics: 4ನೇ ಹಂತದ ಪಂಚರತ್ನ ವೇಳಾಪಟ್ಟಿ ಘೋಷಣೆ: ಹಾಸನ ವಿಧಾನಸಭಾ ಕ್ಷೇತ್ರ ಮಿಸ್ಸಿಂಗ್!
ರೇವಣ್ಣ ದಂಪತಿಯಿಂದ ಮುಂಜಾನೆಯೇ ಪೂಜೆ
ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ಮಾಜಿ ಸಚಿವ ರೇವಣ್ಣ ಮತ್ತವರ ಪತ್ನಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವಕ್ಕೂ ಮುನ್ನವೇ ಪೂಜೆ ನೆರವೇರಿಸಿದರು.