ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನಗಳಿಂದ ವಿದೇಶದಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ (Prajwal Revanna Case) ಬೆಂಗಳೂರಿಗೆ ವಾಪಸಾಗಿದ್ದು, ಎಸ್‌ಐಟಿ ಅಧಿಕಾರಿಗಳು ಅವರನ್ನು 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್ ನಾಯ್ಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ವಾದ ಮಂಡಿಸಿದರು. ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ಅಶೋಕ್ ನಾಯ್ಕ್, ಜಾಮೀನು ನೀಡಬಹುದು ಎಂದು ಅರುಣ್ ವಾದ ಮಂಡಿಸಿದರು. ಇವರಿಬ್ಬರ ವಾದ-ಪ್ರತಿವಾದ ಹೀಗಿದೆ…
“ಸಂತ್ರಸ್ತೆಯರ ಮೇಲೆ ಪ್ರಜ್ವಲ್ ರೇವಣ್ಣ ಬಲ ಪ್ರಯೋಗ ಮಾಡಿದ್ದಾರೆ. ಸಂತ್ರಸ್ತೆಯರನ್ನು ಹೆದರಿಸಿ, ಬೆದರಿಸಿ ಕಿರುಕುಳ ನೀಡಿದ್ದಾರೆ. ಬಟ್ಟೆ ಬಿಚ್ಚಿಸುವುದಕ್ಕೂ ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಯಾವುದೇ ವಿಡಿಯೊಗಳಲ್ಲೂ ಮುಖ ಕಾಣದಂತೆ ರೆಕಾರ್ಡ್ ಮಾಡಲಾಗಿದೆ. ಆದರೆ, ಅವರು ಪ್ರಜ್ವಲ್ ಎಂಬುದಕ್ಕೆ ಸಾಕ್ಷ್ಯಗಳಿವೆ. ಇದರಿಂದಾಗಿ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆ ನಡೆಸುವ ಅವಶ್ಯಕತೆ ಇದೆ. ಹಾಗಾಗಿ, ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ವಹಿಸಬೇಕು” ಎಂದು ಅಶೋಕ್ ನಾಯ್ಕ್ ಹೇಳಿದರು.
ಇದೇ ವೇಳೆ, ಪ್ರಕರಣದ ಮೆರಿಟ್ ಮೇಲೆ ವಾದ ಮಂಡಿಸಿ ಎಂದು ಕೋರ್ಟ್ ಅಶೋಕ್ ನಾಯ್ಕ್ ಅವರಿಗೆ ಸೂಚಿಸಿದರು. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಜಡ್ಜ್ ಕೆ.ಎನ್.ಶಿವಕುಮಾರ್ ಅವರು ಸೂಚಿಸಿದರು. “ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯೂಸ್ ಆಗಿದೆ. ಹಾಸನದಲ್ಲಿ ಧರಣಿ ಅಂತ ಮಾಹಿತಿ ಇದೆ” ಎಂದು ವಕೀಲ ಹೇಳಿದಾಗಕೇಸ್ ಮೆರಿಟ್ ಮೇಲೆ ವಾದಕ್ಕೆ ಜಡ್ಜ್ ಸೂಚನೆ ನೀಡಿದರು.
ಪ್ರಜ್ವಲ್ ಪರ ವಕೀಲ ಆಕ್ಷೇಪ
“ಎಸ್‌ಐಟಿ ಕಸ್ಟಡಿಗೆ ಕೇಳಿದ್ದಕ್ಕೆ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಆಕ್ಷೇಪ ವ್ಯಕ್ತಪಡಿಸಿದರು. ಏಪ್ರಿಲ್ 28ರಿಂದ ಮೇ 2ರವರೆಗೂ ಅತ್ಯಾಚಾರ ಅಂತ ಆರೋಪ ಇಲ್ಲ. ಪೊಲೀಸರು ತಮಗೆ ಇಷ್ಟ ಬಂದ ರೀತಿ ಪದಗಳನ್ನು ಬಳಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೇವಲ CrPC 161 ಅಡಿ ಹೇಳಿಕೆ ಆಧರಿಸಿ ಅತ್ಯಾಚಾರ ಆರೋಪ ಕೇಸ್ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ದೂರು ರೆಡಿ ಮಾಡಿಕೊಂಡು ಹೊಳೆನರಸೀಪುರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದರು.
ಪಟ್ಟು ಸಡಿಲಿಸದ ಅಶೋಕ್ ನಾಯ್ಕ್
ಅರುಣ್ ಅವರ ವಾದ ಮಂಡನೆಗೆ ಅಶೋಕ್ ನಾಯ್ಕ್ ಅವರು ಅಸಮಾಧಾನ ವ್ಯಕ್ತಪಡಿಸಿದರು. “‘ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಭೀತಿಯಿಂದ ಈಗ ಬಂದಿದ್ದಾರೆ. ಇದಕ್ಕೆ ಮೊದಲೂ ಫ್ಲೈಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರು. ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ತೀನಿ ಅಂತ ದೇಶ ಬಿಟ್ಟಿದ್ದರು. ತಲೆಮರೆಸಿಕೊಂಡು ಹೋಗಲೆಂದು ದೇಶ ಬಿಟ್ಟು ಓಡಿ ಹೋಗಿದ್ದರು. ಫಾರಿನ್‌ನಲ್ಲೇ ಅರೆಸ್ಟ್ ಆಗ್ತೀನಿ ಅನ್ನೋ ಭೀತಿಯಿಂದ ಬಂದಿದ್ದಾರೆ. ದೇಶ ಬಿಟ್ಟು ಓಡಿ ಹೋಗಿದ್ದ ಬಗ್ಗೆ ಯಾವುದೇ ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ದೇಶಾದ್ಯಂತ ಸುದ್ದಿ ಆಗಿದೆ” ಎಂದು ತಿಳಿಸಿದರು.
ಸಂತ್ರಸ್ತೆ ಮನೆಗೆ ಬೆಂಕಿ ಬಿದ್ದಿದೆ, ಆ ಮಹಿಳೆಯರು ದೂರು ಕೊಡಲು ಬರುತ್ತಿಲ್ಲ. ಪ್ರಜ್ವಲ್ ಮೇಲಿರುವ ಎಲ್ಲ ಗಂಭೀರ ಆರೋಪಗಳ ಬಗ್ಗೆ ವಿಚಾರಣೆ ಮಾಡುವ ಅಗತ್ಯವಿದೆ. ಆರೋಪಿಯ ಮದರ್ ಡಿವೈಸ್, ರೆಕಾರ್ಡಿಂಗ್ ಡಿವೇಸ್ ಸೀಸ್ ಆಗಬೇಕು. ಆರೋಪಿ ಪ್ರಜ್ವಲ್ ರೇವಣ್ಣ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಬೇಕು. ಎರಡನೇ ಆರೋಪಿ ಪ್ರಜ್ವಲ್ ರೇವಣ್ಣ ಬಗ್ಗೆ ಸಾಕ್ಷ್ಯ ಕಲೆ ಹಾಕಲು ಕಸ್ಟಡಿ ಬೇಕು” ಎಂದರು.
ರೂಮ್ ಕ್ಲೀನ್ ಇಲ್ಲ ಎಂದು ಪ್ರಜ್ವಲ್ ಅಳಲು
ವಿಚಾರಣೆಯ ಆರಂಭದಲ್ಲಿಯೇ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಜಡ್ಜ್ ನಿಮ್ಮ ಹೆಸರೇನು ಎಂದು ಕೇಳಿದರು. ಹಾಗೆಯೇ, ಯಾವಾಗ ಬಂಧಿಸಿದರು? ಎಲ್ಲಿ ಬಂಧಿಸಿದರು ಎಂಬುದಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಜ್ವಲ್. “ಎಸ್‌ಐಟಿ ವಶದಲ್ಲಿದ್ದೇನೆ. ರೂಮ್ ಸರಿಯಾಗಿಲ್ಲ, ಟಾಯ್ಲೆಟ್ ಸರಿಯಾಗಿಲ್ಲ. ಕೋಣೆ ಕ್ಲೀನ್ ಇಲ್ಲ” ಎಂದು ತಿಳಿಸಿದರು. ಆಗ ನ್ಯಾಯಾಧೀಶರು, “ಎಸ್‌ಐಟಿಯವರು ಕಿರುಕುಳ ಕೊಟ್ರಾ” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರಜ್ವಲ್, “ಕಿರುಕುಳ ಕೊಟ್ಟಿಲ್ಲ. ರೂಮ್ ಕ್ಲೀನ್ ಇಲ್ಲ, ಟಾಯ್ಲೆಟ್ ಸ್ವಚ್ಛವಾಗಿಲ್ಲ” ಎಂದರು.
ಇದನ್ನೂ ಓದಿ: Prajwal Revanna Case: ಅನ್ನ-ಸಾಂಬಾರ್ ತಿಂದು ಜಡ್ಜ್ ಎದುರು ಕೈಕಟ್ಟಿ ನಿಂತ ಪ್ರಜ್ವಲ್ ರೇವಣ್ಣ; ಎಂಥ ಸ್ಥಿತಿ!