ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಸ್ಪರ್ಧೆ ಮಾಡುವುದಾದರೆ ನಮಗೆ ತುಂಬಾ ಖುಷಿ ಆಗುತ್ತದೆ. ಅವರು ಹಾಸನದಿಂದ ಸ್ಪರ್ಧೆ ಮಾಡಿದರೆ ನಾವು ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ನಿಲ್ಲಿಸೋದೇ ಇಲ್ಲ ಎಂದು ಜೆಡಿಎಸ್ ನಾಯಕಿ ಭವಾನಿ ರೇವಣ್ಣ (Bhavani Revanna) ಹೇಳಿದರು.
ಹಾಸನದಲ್ಲಿ ನಡೆದ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ದೇವೇಗೌಡರನ್ನು ನಾವು ಹಾಸನ ಲೋಕಸಭಾ ಕ್ಷೇತ್ರದಿಂದ ಹೊರಗೆ ಕಳಿಸಿಲ್ಲ. ಕೆಲವರು ಇಲ್ಲಿಂದ ಕಳುಹಿಸಿದರು ಎಂದು ಮಾತನಾಡಿದರು. ನಿಜವಾಗಿ ಅವರೇ ಪ್ರಜ್ವಲ್ ಅವರನ್ನು ಅಭ್ಯರ್ಥಿ ಮಾಡಬೇಕು ಎಂದು ಬಯಸಿ ಆ ನಿರ್ಧಾರವನ್ನು ಕೈಗೊಂಡಿದ್ದರು ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭವಾನಿ ರೇವಣ್ಣ ಅವರು ಅಭ್ಯರ್ಥಿ ಆಗುತ್ತಾರೆ ಎಂಬ ವದಂತಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಏನೂ ಚರ್ಚೆ ಆಗಿಲ್ಲ, ಈ ಬಗ್ಗೆ ಏನು ಹೇಳಬೇಕು ಎಂದು ನನಗೆ ಗೊತ್ತಿಲ್ಲ. ಹಾಗಾಗಿ ನಾನು ಈ ಬಗ್ಗೆ ಏನೂ ಮಾತನಾಡಲ್ಲ. ಭಗವಂತ ಏನು ಕೊಡುತ್ತಾನೋ ಅದನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯ. ಹಾಗಾಗಿ ದೇವರು ಏನು ಕೊಡುತ್ತಾರೋ ಹಾಗೆಯೇ ನಡೆಯುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಉಚಿತ ಪ್ರಯಾಣ ಎಂಬ ಕಾರಣಕ್ಕಾಗಿ ದಿಲ್ಲಿಯಲ್ಲಿ ಹೆಣ್ಣುಮಕ್ಕಳಿಗೆ ಬಸ್ ನಿಲ್ಲಿಸದ ಡ್ರೈವರ್‌ಗಳು, ಕರ್ನಾಟಕದ ಕತೆ ಹೇಗೆ?
ಮುಂದಿನ ಚುನಾವಣೆಗೆ ಸಂಘಟನೆ ಕೆಲಸ ಆರಂಭ ಆಗಿದೆ
ರಾಜ್ಯದಲ್ಲಿ ನಮ್ಮ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ನಮ್ಮ ನಿರೀಕ್ಷೆಯಂತೆ ನಮ್ಮ ಸರ್ಕಾರ ಬರಲು ಆಗಲಿಲ್ಲ. ಹಾಸನದಲ್ಲಿ ಸ್ವರೂಪ್ ಅವರನುನ ಗೆಲ್ಲಿಸಲೇಬೇಕೆಂದು ಒಟ್ಟಾಗಿ ಹೋರಾಟ ಮಾಡಿದ್ದೆವು. ಹಾಗೆಯೇ ಕ್ಷೇತ್ರದಲ್ಲಿ ಜನರು ಸಹಾಯ ಮಾಡಿದ್ದಾರೆ. ಹಾಸನದಿಂದ ಯಾರೇ ಅಭ್ಯರ್ಥಿ ಆದರೂ ಗೆಲ್ಲಿಸಲೇ ಬೇಕೆಂದು ಜನರು ತೀರ್ಮಾನ ಮಾಡಿದ್ದರು. ದೇವೇಗೌಡರ ಹುಟ್ಟುಹಬ್ಬದ ದಿನವೇ ಬಂದು ಹಾಸನದ ವಿಜಯದ ಬಗ್ಗೆ ಮಾತನಾಡಬೇಕು ಎಂದು ಬಂದಿದ್ದೇನೆ. ಹಾಸನ ಕ್ಷೇತ್ರವನ್ನು ಗೆಲ್ಲಿಸಿ ದೇವೇಗೌಡರ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡುವುದಾಗಿ ಹೇಳಿದ್ದೆ. ಅದರಂತೆ ಹಾಸನ ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಮುಂದಿನ ಚುನಾವಣೆಗೆ ಈಗಾಗಲೇ ಸಂಘಟನೆ ಕೆಲಸ ಆರಂಭ ಆಗಿದೆ ಎಂದು ಭವಾನಿ ರೇವಣ್ಣ ಹೇಳಿದರು.