Site icon Vistara News

Prakash Raj:‌ ವಿನೇಶ್‌ ಫೋಗಟ್‌ ಅನರ್ಹತೆಗೆ ಮೋದಿ ಕಾರಣ ಎಂಬಂತೆ ಪ್ರಕಾಶ್ ರಾಜ್‌ ಪೋಸ್ಟ್;‌ ಜನರಿಂದ ರೋಸ್ಟ್!

Prakash Raj

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) ವಿನೇಶ್‌ ಫೋಗಟ್‌ (Vinesh Phogat) ಅವರಿಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ಆಘಾತವಾಗಿದೆ. ಕುಸ್ತಿಯಲ್ಲಿ ಫೈನಲ್‌ ತಲುಪಿ ಇತಿಹಾಸ ಸೃಷ್ಟಿಸಿದ್ದ ಅವರು ಇನ್ನೇನು ಚಿನ್ನದ ಪದಕಕ್ಕಾಗಿ ಕಾದಾಡಬೇಕು ಎನ್ನುವರಷ್ಟರಲ್ಲಿಯೇ ದೇಹದ ತೂಕ 100 ಗ್ರಾಂ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಿರುವುದು ಕುಸ್ತಿಪಟುವಿನ ಜತೆಗೆ ಇಡೀ ದೇಶದ ಜನರಿಗೆ ಅಸಮಾಧಾನ ಉಂಟಾಗಿದೆ. ಇದರ ಬೆನ್ನಲ್ಲೇ, ವಿನೇಶ್‌ ಫೋಗಟ್‌ ವಿಷಯದಲ್ಲೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಟೀಕಿಸಿ ನಟ ಪ್ರಕಾಶ್‌ ರಾಜ್‌ (Prakash Raj) ಪೋಸ್ಟ್‌ ಮಾಡಿದ್ದು, ನಟನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನೇಶ್‌ ಫೋಗಟ್‌ ಅವರು ಒಲಿಂಪಿಕ್ಸ್‌ನಲ್ಲಿ ಅನರ್ಹತೆಗೊಂಡಿರುವ ಕುರಿತ ಕಾರ್ಟೂನ್‌ನ ಫೋಟೊವನ್ನು ಪ್ರಕಾಶ್‌ ರಾಜ್‌ ಎಕ್ಸ್‌ ಜಾಲತಾಣದಲ್ಲಿ ಫೋಟೊ ಸಮೇತ ಹಂಚಿಕೊಂಡಿದ್ದಾರೆ. ತೂಕ ಪರಿಶೀಲನೆ ಯಂತ್ರದ ಮೇಲೆ ವಿನೇಶ್‌ ಫೋಗಟ್‌ ನಿಂತಿರುವ, ಆ ತೂಕದ ಯಂತ್ರದ ಮೇಲೆ ನರೇಂದ್ರ ಮೋದಿ ಅವರು ಹಿಂದಿನಿಂದ ಕಾಲಿಡುತ್ತಿರುವಂತೆ ಬಿಂಬಿಸಿರುವ ಕಾರ್ಟೂನ್‌ನ ಫೋಟೊವನ್ನು ಪ್ರಕಾಶ್‌ ರಾಜ್‌ ಪೋಸ್ಟ್‌ ಮಾಡಿ, ‘ನಿಮಗೆ ಏನು ಅನಿಸುತ್ತದೆ’ ಎಂದು ಪೋಸ್ಟ್‌ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ‌

“ಇಟಲಿಯ ಕುಸ್ತಿಪಟು ಕೂಡ ಹೆಚ್ಚಿನ ತೂಕದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಅವರ ಅನರ್ಹತೆಯ ಹಿಂದೆಯೂ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಕೈವಾಡ ಇದೆಯೇ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ನೀವೊಬ್ಬ ಅರ್ಬನ್‌ ನಕ್ಸಲ್”‌ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. “ನರೇಂದ್ರ ಮೋದಿ ಅವರಿಂದಲೇ ನಿಮ್ಮ ತೂಕ ಹೆಚ್ಚಾಗಿದೆಯೇ” ಎಂದು ಮತ್ತೊಬ್ಬರು ನಟನನ್ನು ಪ್ರಶ್ನಿಸಿದ್ದಾರೆ.

ದೇಶದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಕಾಶ್‌ ರಾಜ್‌ ಪೋಸ್ಟ್‌ಗಳಿಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಭಾರತದ ಚಂದ್ರಯಾನ 3 ಮಿಷನ್‌ ಯಶಸ್ವಿಯಾದ ಬಳಿಕವೂ ಪ್ರಕಾಶ್‌ ರಾಜ್‌ ವ್ಯಂಗ್ಯ ಮಾಡಿದ್ದು ಭಾರಿ ಟೀಕೆಗೆ ಕಾರಣವಾಗಿತ್ತು. ಚಂದ್ರಯಾನ 3ರ ಬಗ್ಗೆ ವ್ಯಂಗ್ಯಭರಿತ ಪೋಸ್ಟ್ ಮಾಡಿದ್ದಕ್ಕೆ ಎಲ್ಲೆಡೆ ನಟ ಪ್ರಕಾಶ್‌ ರಾಜ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ಪ್ರಕಾಶ್‌ ರಾಜ್‌ ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀರಾಮಸೇನೆಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಕಾಶ್‌ ರಾಜ್‌ ವಿರುದ್ಧ ಕೇಸ್‌ ದಾಖಲಿಸಲಾಗಿತ್ತು.

ಇದನ್ನೂ ಓದಿ: Prakash Raj: ಕಾಶ್ಮೀರವನ್ನು ಪ್ಯಾಲೆಸ್ತೀನ್‌ಗೆ ಹೋಲಿಸಿದ ಪ್ರಕಾಶ್‌ ರಾಜ್;‌ ಕೆಂಡವಾದ ಜನ

Exit mobile version