ಬೆಂಗಳೂರು: ಚಂದ್ರಯಾನದ (Chandrayaan 3) ಬಗೆಗೆ ವಿವಾದಾತ್ಮಕ ಚಿತ್ರ ಟ್ವೀಟ್ ಮಾಡಿ ವಿವಾದಕ್ಕೆ ಒಳಗಾಗಿದ್ದ ನಟ ಪ್ರಕಾಶ್ ರೈ ಇದೀಗ ಮತ್ತೆ ಇನ್ನೊಂದು ವಿವಾದ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಾರಿ ಅವರು ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮʼ (Sanatan Dharma) ಹೇಳಿಕೆಯನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದಾರೆ.
ʼʼಹಿಂದೂಗಳು ತನಾತನಿಗಳು ಅಲ್ಲ. ತನಾತನಿಗಳು ಮಾನವ ವಿರೋಧಿಗಳು. ನೀವು ಇದನ್ನು ಒಪ್ಪಿದರೆ ರಿಟ್ವೀಟ್ ಮಾಡಿ, ಎಲ್ಲರಿಗೂ ಹ್ಯಾಪಿ ಸಂಡೇʼʼ ಎಂದು ಪ್ರಕಾಶ ರೈ ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿದ್ದಾರೆ. ರೈ ಅವರ ಹೇಳಿಕೆಗೆ ಅದೇ ತಾಣದಲ್ಲೇ ಉತ್ತರ ಪ್ರತ್ಯುತ್ತರಗಳ ಭರಾಟೆ ನಡೆದಿದ್ದು, ಸಾಕಷ್ಟು ಜನ ರೈ ಅವರನ್ನು ಟ್ರೋಲ್ ಮಾಡಿದ್ದಾರೆ.
ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗೆ ಜ್ವರಕ್ಕೆ ಹೋಲಿಕೆ ಮಾಡಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿವಾದ ಸೃಷ್ಟಿಸಿದ್ದರು. ಇದು ತಮಿಳುನಾಡು ಮಾತ್ರವಲ್ಲದೆ ರಾಷ್ಟ್ರೀಯ ಮಾಧ್ಯಮಗಳನ್ನೂ ಸುದ್ದಿಯಾಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕ ಅಮಿತ್ ಶಾ ಅವರು ಈ ವಿಚಾರದ ಬಗ್ಗೆ ಕಿಡಿ ಕಾರಿದ್ದರು.
ಪ್ರಕಾಶ್ ರೈ ಅವರು ಟ್ವೀಟ್ ಜತೆಗೆ ಪೆರಿಯಾರ್ ಮತ್ತು ಡಾ.ಅಂಬೇಡ್ಕರ್ ಅವರ ಒಂದು ಕಾರ್ಟೂನ್ ಅನ್ನೂ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಲವರು, ಪ್ರಕಾಶ್ ರೈ ಸಾಂಪ್ರದಾಯಿಕ ಉಡುಗೆ ಉಟ್ಟು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹಿಂದಿನ ಫೋಟೋಗಳನ್ನು ಶೇರ್ ಮಾಡಿ ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: Sanatan Dharma: ಸನಾತನ ಧರ್ಮ ಕೊರೊನಾ ಇದ್ದಂತೆ ಎಂದ ಉದಯನಿಧಿ ಸ್ಟಾಲಿನ್; ಭುಗಿಲೆದ್ದ ವಿವಾದ