Site icon Vistara News

Prakash Raj: ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥನೆ ಬೆನ್ನಲ್ಲೇ ಪ್ರಕಾಶ್‌ ರಾಜ್‌ ವ್ಯಂಗ್ಯ; ರೋಗಿಷ್ಟ ಮನಸ್ಥಿತಿ ಅಂದ್ರು ಜನ

Prakash Raj

ಬೆಂಗಳೂರು: ನಟನೆಗಿಂತ ಇತ್ತೀಚೆಗೆ ವಿವಾದಗಳಿಂದಲೇ ಜಾಸ್ತಿ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj) ಅವರೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಚಂದ್ರಯಾನ 3 (Chandrayaan 3) ಮಿಷನ್‌ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್‌ (K Sivan) ಅವರನ್ನು ಅಣಕ ಮಾಡಲು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಫೋಟೊ ಹಂಚಿಕೊಂಡ ಕಾರಣ ಜನ ಅವರಿಗೆ ಟೀಕೆಗಳ ಮೂಲಕ ಚಳಿ ಬಿಡಿಸಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್‌ ಅವರ ಕುರಿತ ವ್ಯಂಗ್ಯಚಿತ್ರವನ್ನು ಪ್ರಕಾಶ್‌ ರಾಜ್‌ ಹಂಚಿಕೊಂಡಿದ್ದು, ಇದರಲ್ಲಿ ಚಾಯ್‌ವಾಲಾ ಎಂಬುದಾಗಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವ್ಯಂಗ್ಯ ಮಾಡಿದಂತಿದೆ. “ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಅವರು ಬರೆದುಕೊಂಡಿದ್ದಾರೆ. ಚಂದ್ರಯಾನ 3 ಮಿಷನ್‌ ಯಶಸ್ಸಿಗೆ ದೇಶವೇ ಪ್ರಾರ್ಥಿಸುವ ಹೊತ್ತಿನಲ್ಲಿ ಪ್ರಕಾಶ್‌ ರಾಜ್‌ ಅವರು ಇಂತಹ ಫೋಟೊ ಶೇರ್‌ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಾಶ್‌ ರಾಜ್‌ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಕಾಶ್‌ ರಾಜ್‌ ಪೋಸ್ಟ್

ಪ್ರಕಾಶ್‌ ರಾಜ್‌ ಅವರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿಯೊಬ್ಬರು, “ಇದು ರೋಗಿಷ್ಟ ಮನಸ್ಥಿತಿಯ ಪರಮಾವಧಿ” ಎಂದಿದ್ದಾರೆ. ರಾಮ್‌ ಎಂಬುವವರು ಪ್ರತಿಕ್ರಿಯಿಸಿ, “ಇಸ್ರೋ ಉನ್ನತ ಭಾರತವನ್ನು ಪ್ರತಿನಿಧಿಸುತ್ತದೆ. ಸಂಪನ್ಮೂಲ ಕೊರತೆ, ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆಯೂ ಇಸ್ರೋ ಮಹತ್ತರವಾದುದನ್ನು ಸಾಧಿಸಲು ಹೊರಟಿದೆ. ಆದರೆ, ಈ ವ್ಯಕ್ತಿಯು ಭಾರತದ ಬಗ್ಗೆ ಕೆಟ್ಟದ್ದನ್ನೇ ಹೇಳುತ್ತಾನೆ” ಎಂದು ಕುಟುಕಿದ್ದಾರೆ.

ಕ್ಲಾಸ್‌ ತೆಗೆದುಕೊಂಡ ಜನ

ಇದನ್ನೂ ಓದಿ: Prakash Raj: ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದುಕೊಂಡಿರಲಿಲ್ಲ; ಸುದೀಪ್‌ಗೆ ಪ್ರಕಾಶ್‌ ರಾಜ್‌ ಮತ್ತೆ ಕ್ಲಾಸ್

“ಆತ್ಮವಿಶ್ವಾಸವನ್ನು ಕಳೆದುಕೊಂಡು ನಿಸ್ತೇಜನಾದ ವ್ಯಕ್ತಿ ಮಾತ್ರ ಹೀಗೆ ಬೇರೆಯವರ ಬಗ್ಗೆ ವೈಯಕ್ತಿಕವಾಗಿ ಹೀಗಳಿಯಲು ಸಾಧ್ಯ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಅಷ್ಟೇ ಅಲ್ಲ, “ಪ್ರಕಾಶ್‌ ರಾಜ್‌ ನಿಮಗೆ ನಾಚಿಕೆಯಾಗಬೇಕು”, “ನಿನಗೆ ಸ್ವಲ್ಪವಾದರೂ ನಾಚಿಕೆಯಾಗಬೇಕು”, “ದೇಶದ ಇಸ್ರೋ ಬಗ್ಗೆ ಹೆಮ್ಮೆಪಡಬೇಕು, ದ್ವೇಷವಲ್ಲ”, “ನಿಮಗೇಕೆ ಅಷ್ಟು ಹೊಟ್ಟೆ ಉರಿ” ಎಂಬುದು ಸೇರಿ ಸಾವಿರಾರು ಜನ ಹಲವು ರೀತಿಯಲ್ಲಿ ಪ್ರಕಾಶ್‌ ರಾಜ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

Exit mobile version