ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಆಕಾಶ ಇದ್ದ ಹಾಗೆ. ಕಾಂಗ್ರೆಸಿಗರು ಆಕಾಶಕ್ಕೆ ಉಗುಳೋ ಕೃತ್ಯ ಮಾಡುತ್ತಿದ್ದಾರೆ. ಆಕಾಶಕ್ಕೆ ಮುಖ ಮಾಡಿ ಉಗುಳಿದರೆ ಅದು ತಮ್ಮ ಮುಖಕ್ಕೇ ಸಿಡಿಯುತ್ತದೆ ಎಂಬುದನ್ನು ಅರಿತುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹರಿಹಾಯ್ದರು.
ಕಲಘಟಗಿಯಲ್ಲಿ ಭಾನುವಾರ ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿ, ಸಂತೋಷ್ ಲಾಡ್ ಮೋದಿಗೆ ಬೈದರೆ ತಾವು ದೊಡ್ಡ ವ್ಯಕ್ತಿ ಆಗಬಹುದು ಎಂದುಕೊಂಡಿದ್ದಾರೆ. ಹಾಗಾಗಿ ಲಾಡ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ರೂ ಮೋದಿ ವಿರುದ್ಧ ಗುಡುಗುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಧೂಳಿಪಟ
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. 2014ರಲ್ಲಿ 44 ಕ್ಷೇತ್ರ ಹಾಗೂ 2019ರಲ್ಲಿ 52 ಸೀಟುಗಳನ್ನಷ್ಟೇ ಗೆದ್ದುಕೊಂಡ ರಾಹುಲ್ ಗಾಂಧಿ ಅಧಿಕೃತ ವಿರೋಧ ಪಕ್ಷದ ನಾಯಕರಾಗಲೂ ಶಕ್ತವಾಗಲಿಲ್ಲ ಎಂದು ಹೇಳಿದರು.
ಆಸ್ತಿ ಸರ್ವೆ ಏಕೆ?
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಸ್ತಿ ಸರ್ವೇ ಪ್ರಕಟಿಸಿದೆ. ಅರ್ಧದಷ್ಟು ಆಸ್ತಿಯನ್ನು ವಶಕ್ಕೆ ಪಡೆದು ಹೆಚ್ಚು ಮಕ್ಕಳಿರುವ ಮುಸ್ಲಿಂರಿಗೆ ಹಂಚಲಿದೆ. ಈಗಲೇ ಎಚ್ಚರ ವಹಿಸಿ ಎಂದ ಜೋಷಿ ಅವರು, 2014ರಿಂದ ಮೋದಿ ನೇತೃತ್ವದಲ್ಲಿ ಆದ ದೇಶದ ಅಭಿವೃದ್ಧಿಯನ್ನು ಜಗತ್ತೇ ಗಮನಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿ ಏನೆಂಬುದೂ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ ಎಂದು ಹೇಳಿದರು.
ಇದನ್ನೂ ಓದಿ | Prajwal Revanna Case: ಪ್ರಜ್ವಲ್‌ಗೆ ವೋಟ್ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್; ಬಿಜೆಪಿಯಿಂದ ಫುಲ್ ಕ್ಲಾಸ್!
ಬಹಿರಂಗ ಪ್ರಚಾರ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶಶಿಧರ ನಿಂಬಣ್ಣವರ, ಐ.ಸಿ.ಗೋಕುಲ, ಸೀತಪ್ಪ ಪಾಟೀಲ, ವೀರಣ್ಣ ಜಡಿ, ಬಸವರಾಜ ಕರಡಿಕೊಪ್ಪ, ಪುಟ್ಟಪ್ಪ ಕಲ್ಲಪ್ಪ ಪುಟ್ಟಪ್ಪನವರು, ಮಾಂತೇಶ ತಹಸಿಲ್ದಾರ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.