Site icon Vistara News

Pralhad Joshi: ಕೇಂದ್ರದ 5 ಕೆಜಿ ಅಕ್ಕಿಗೆ ತಮ್ಮ ಫೋಟೋ ಹಾಕಿ ಮೆರೆಯುವ ಭೂಪರು ಕಾಂಗ್ರೆಸಿಗರು: ಜೋಶಿ

Pralhad Joshi

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿಯನ್ನೇ ಕೊಟ್ಟು ತಮ್ಮ ಫೋಟೋ ಹಾಕಿಸಿಕೊಂಡು ಮೆರೆಯುವಂಥ ಭೂಪರು ಕಾಂಗ್ರೆಸಿಗರು. 10 ಕೆಜಿ ಅಕ್ಕಿ ಉಚಿತ ಕೊಡುತ್ತೇವೆ ಎಂದು ಹೇಳಿ ಒಂದು ಕಾಳು ಅಕ್ಕಿಯನ್ನೂ ಕೊಡಲಾಗಲಿಲ್ಲ. ಬಿಜೆಪಿ ಕೊಟ್ಟ 5 ಕೆಜಿ ಅಕ್ಕಿಯನ್ನೇ ನೀಡಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಾ ಮೆರೆಯುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಟೀಕಿಸಿದರು.

ಗಳಗಿ-ಹುಲಕೊಪ್ಪ ಜಿಪಂ ವ್ಯಾಪ್ತಿಯ ದುಮ್ಮವಾಡದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಇವರ ಈ ಡೋಂಗಿ ಸಾಧನೆ ಅಷ್ಟಕ್ಕೇ ಮುಗಿಯಲಿಲ್ಲ. ರಾಮನ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ದೇಶದ ಉದ್ದಗಲಕ್ಕೂ ನಾವು ಅಕ್ಷತೆ ಹಂಚುತ್ತಿದ್ದರೆ, ಅವರು ತಾವು ಕೊಟ್ಟ ಅಕ್ಕಿಯಲ್ಲಿ ಅಕ್ಷತೆ ಆಗುತ್ತಿದೆ ಎಂದು ಅಪ ಪ್ರಚಾರ ಮಾಡುತ್ತಾ ತಿರುಗಾಡಿದರು ಎಂದರು.

ಇದನ್ನೂ ಓದಿ | First Time Voters: ಮೊದಲ ಬಾರಿ ಮತದಾನ ಮಾಡುತ್ತಿದ್ದೀರಾ? ಈ ಸಂಗತಿಗಳನ್ನು ಗಮನಿಸಿ

ದೇಶದಲ್ಲಿ ಬಿಜೆಪಿ ಆಡಳಿತ ಪ್ರಬಲಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಶತಾಯ ಗತಾಯ ಅಧಿಕಾರಕ್ಕೆ ಬರಲು ಗ್ಯಾರಂಟಿ ಘೋಷಣೆ ಮಾಡುತ್ತ ಜನರನ್ನು ಮರುಳು ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾಗುತ್ತಿದೆ. ಕಾಂಗ್ರೆಸ್ 65 ವರ್ಷದ ಆಡಳಿತದಲ್ಲಿ ಕೊಡದ ಗ್ಯಾರಂಟಿಗಳನ್ನು ಈಗೇಕೆ? ಎಂದು ಪ್ರಶ್ನಿಸಿದ ಅವರು, ಆರು ದಶಕಗಳ ಕಾಲ ಬಡತನ ನಿರ್ಮೂಲನೆ ಮಾಡದ ಕಾಂಗ್ರೆಸ್ ಇನ್ನು ಮುಂದೆ ಮಾಡುತ್ತದೆ ಎಂಬುದನ್ನು ನಂಬಲು ಜನರು ಮೂರ್ಖರಲ್ಲ ಎಂದು ಹೇಳಿದರು.

ಯುಪಿಎ 10 ವರ್ಷದ ಆಡಳಿತದಲ್ಲಿ ಎಲ್ಲ ವಿಧದ ಹಗರಣಗಳನ್ನು ಮಾಡಿ ದೇಶವನ್ನು ದುರ್ಬಲಗೊಳಿಸಿದ್ದರು. 2014ರ ನಂತರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಭಾರತ ಈಗ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಪ್ರತಿಪಾದಿಸಿದರು.

ಮುಂದಿನ ದಿನಗಳಲ್ಲಿ ಭಾರತ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಇದುವರೆಗೂ ಕಂಡಿರುವ ಭಾರತದ ಏಳಿಗೆ ಬರೀ ಟ್ರೈಲರ್ ಅಷ್ಟೇ. ಮೋದಿ ಅವರು ಭವ್ಯ ಭಾರತವನ್ನು ನನಸು ಮಾಡಲು ಈ ಬಾರಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.

ಇದನ್ನೂ ಓದಿ | Modi In Karnataka: ರಾಜ್ಯದಲ್ಲಿ ನಾಳೆ ಮೋದಿ ಹವಾ; ಮಂಗಳೂರು ರೋಡ್‌ ಶೋ ಸಮಯ ಬದಲು!

ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ, ಶಶಿಧರ ನಿಂಬಣ್ಣವರ, ಐಸಿ ಗೋಕುಲ, ಈರಣ್ಣ ಜಡಿ, ನಿಂಗಪ್ಪ ಸುತಗಟ್ಟಿ, ಬಸವರಾಜ ಶೇರೆವಾಡ, ಕಲ್ಮೇಶ ಬೇಲೂರ, ವೈಎನ್ ಪಾಟೀಲ, ಜಯಪಾಲ ಬೆಟದೂರು, ಶಿವಲಿಂಗಪ್ಪ, ಸದಾನಂದ ಚಿಂತಾಮಣಿ, ಮಹಾಂತೇಶ ತಹಶೀಲ್ದಾರ, ಶಂಕ್ರಣ್ಣ ಗಂಬ್ಯಾಪೂರ, ಗಳಗಿ ಹುಲಕೊಪ್ಪ ಜಿಪಂ ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version