ಹುಬ್ಬಳ್ಳಿ: ಹುಚ್ಚು ಹುಚ್ಚರ ಹಾಗೆ ಏನೇನೋ ಮಾತಾಡಬೇಡಿ. ಆಗಲೇ ಜನ ನಿಮ್ಮನ್ನು ದೇಶದಲ್ಲಿ ಮೂಲೆಗುಂಪು ಮಾಡಿದ್ದಾರೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು. ಇವರು ಸತ್ಯ ಹರಿಶ್ಚಂದ್ರರಾಗಿದ್ದರೆ ದೇಶದ ಜನ ನಿಮ್ಮನ್ನೇಕೆ ಮೂಲೆಗುಂಪು ಮಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಗುಡುಗಿದರು.
ಕಾಂಗ್ರೆಸ್ ನಾಯಕರು ಮೋದಿ ಅವರನ್ನು ಸುಳ್ಳಿನ ಸರದಾರ, ಸುಳ್ಳಿನ ಕ್ರಾಂತಿಕಾರ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಒಂದು ಸುಳ್ಳು. ಪ್ರಧಾನಿ ಮೋದಿ ಮತ್ತು ಬಿಜೆಪಿ ಮೇಲೆ ಸುಳ್ಳು ಪದ ಪ್ರಯೋಗಿಸುತ್ತಿದೆಯೇ? ಅಯ್ಯೋ ರಾಮಾ..! ಎಂದು ಉದ್ಗರಿಸಿದರು.
ಅರೇಳು ದಶಕಗಳ ಕಾಲ ಗರೀಭಿ ಹಠಾವೋ ಎಂದು ಸುಳ್ಳು ಹೇಳಿದವರು ಯಾರು? ಇವತ್ತು ಗರೀಭಿ ಹಠಾವೋ ಆಗಿದ್ದಿದ್ರೆ ಫ್ರೀ ಕೊಡುವ ಪರಿಸ್ಥಿತಿ ಏಕೆ ಬರುತ್ತಿತ್ತು? ಶ್ರೀಮಂತರಿಗೆ ಫ್ರೀ ಕೊಡುತ್ತಿದ್ದೀರಾ ಹಾಗಾದರೆ? ಎಂದು ಪ್ರಶ್ನಿಸಿದರು.
ಬ್ಯಾಂಕಿಂಗ್ ವಂಚನೆ ಮಾಡಿದ್ರಿ ಸುಳ್ಳು ಹೇಳಿದ್ರಿ, ಕಲ್ಲಿದ್ದಲು ಹಗರಣ ಮಾಡಿದ್ರಿ, 34000 ಚ. ಕಿ.ಮೀ. ಭೂಮಿ ಚೀನಾ ಪಾಲು ಮಾಡಿದ್ರಿ. ಈಗ ಚೀನಾ ಆಕ್ರಮಣದ ಬಗ್ಗೆ ಮಾತನಾಡುತ್ತಿದ್ದೀರಿ. ಕಾಂಗ್ರೆಸಿಗರಿಗೆ ನಾಚಿಕೆ ಆಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಒಂದು ಕಾಲದಲ್ಲಿ ಉತ್ತರ ಪ್ರದೇಶದವರೇ ಪ್ರಧಾನಿ, ಉತ್ತರ ಪ್ರದೇಶ, ಲಖ್ನೋ ಸೇರಿದಂತೆ ಸಣ್ಣ ಮುನ್ಸಿಪಾಲ್ಟಿಯಲ್ಲೂ ಕಾಂಗ್ರೆಸ್ ಆಡಳಿತವಿತ್ತು. ಆದರೆ ಇವತ್ತು 2-3 ಸೀಟಿಗೆ ಭಿಕ್ಷೆ ಬೇಡುತ್ತಿದ್ದೀರಿ. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಜನ ನಿಮ್ಮನ್ನು ಯಾವ ಮಟ್ಟಕ್ಕೆ ಒಯ್ದಿದ್ದಾರೆ ನೋಡಿಕೊಳ್ಳಿ ಎಂದು ಸಚಿವ ಜೋಶಿ ತಿರುಗೇಟು ನೀಡಿದರು.
ಇದನ್ನೂ ಓದಿ | Lok Sabha Election 2024: ಕಾಂಗ್ರೆಸ್‌ನಿಂದ ಬಿಡಿಎ ಮೂಲಕ ಹಣ ಸಂಗ್ರಹ ಶಂಕೆ; ಆಯೋಗಕ್ಕೆ ಬಿಜೆಪಿ ದೂರು
ಉತ್ತರ ಪ್ರದೇಶದಲ್ಲಿ ರಾಬರ್ಟ್ ವಾದ್ರಾ ಅವರನ್ನು ನಿಲ್ಲಿಸಿದ್ದಾರೆ. ಅವ್ರು ಸೋಲ್ತಾರೆ. ಅಲ್ಲಿ ಕಾಂಗ್ರೆಸ್‌ಗೆ ಶೂನ್ಯ. ಇನ್ನು ಮಹಾರಾಷ್ಟ್ರದಲ್ಲಿ 2-3 ಸೀಟು ಗೆಲ್ಲೋದು ಕಷ್ಟ. ಉತ್ತರಾಖಂಡದಂತಹ ಸಣ್ಣ ರಾಜ್ಯದಲ್ಲೂ ಅಸ್ತಿತ್ವವಿಲ್ಲ. ಇಂಥ ಸ್ಥಿತಿ ತಲುಪಿದ್ದೀರಿ. ಈಗ ಬಿಜೆಪಿ ಬಗ್ಗೆ ಸುಳ್ಳಿನ ಕ್ರಾಂತಿ ಎನ್ನುತ್ತಿದ್ದೀರಿ. ಹೀಗೆ ಹುಚ್ಚ ಹುಚ್ಚರ ಹಾಗೆ ಆಡುವುದಕ್ಕೆ ಇಂದು ಜನ ನಿಮ್ಮನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದು ಹರಿಹಾಯ್ದರು.
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ FIR; ಪಾಕಿಸ್ತಾನವನ್ನು ಆಳುತ್ತಿದ್ದೀರಾ ಎಂದು ಸಿಎಂಗೆ ಜೋಶಿ ಪ್ರಶ್ನೆ
ಹುಬ್ಬಳ್ಳಿ: ನಗರ್ತ ಪೇಟೆಯ ಮೊಬೈಲ್ ಅಂಗಡಿಯೊಂದರಲ್ಲಿ ಈಚೆಗೆ ಹನುಮಾನ್ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಹಲ್ಲೆ ನಡೆಸಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಹಲ್ಲೆಗೊಳಗಾದ ವ್ಯಕ್ತಿಯ ಮೇಲೆಯೇ ದೂರು ದಾಖಲಾಗಿರುವುದನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad joshi) ಕಟುವಾಗಿ ಖಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕಿಂತಲೂ ಕಡೆ ಮಾಡುತ್ತಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹನುಮಾನ್ ಚಾಲೀಸಾ ಆಡಿಯೊ ಹಾಕಿದ್ದವರ ಮೇಲೆ ಎಫ್‌ಐಆರ್ ಹಾಕಿರುವುದು ಎಷ್ಟು ಸರಿ? ಇವರೇನು ಕರ್ನಾಟಕವನ್ನು ಆಳುತ್ತಿದ್ದಾರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದಾರೋ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಹನುಮಾನ್ ಚಾಲೀಸಾವನ್ನು ಹಾಕಿದ ಕಾರಣಕ್ಕೆ ಹಲ್ಲೆಗೊಳಗಾದ ಅಂಗಡಿಯಾತನ ಮೇಲೆ ಹಾಕಲಾಗಿರುವ ಎಫ್‌ಐಆರ್ ಅನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಹನುಮಾನ್ ಚಾಲೀಸಾ ಪಠಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದ ಸಚಿವರು, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ಹೀಗೇ ಹಿಂದೂ ವಿರೋಧಿ ನಡೆ ತೋರಿದೆ ಎಂದು ಪ್ರಲ್ಹಾದ್ ಜೋಶಿ ಹರಿಹಾಯ್ದರು.
ಕಮ್ಯುನಿಟಿ ರಾಜಕಾರಣ
ಕಾಂಗ್ರೆಸ್ ಪಕ್ಷ ಕಮ್ಯುನಿಟಿ ರಾಜಕಾರಣ ಮಾಡುತ್ತಿದೆ. ವೋಟ್ ಬ್ಯಾಂಕ್‌ಗಾಗಿ ತುಷ್ಟೀಕರಣದಲ್ಲಿ ತೊಡಗಿದೆ. ಬೆಳ್ಳಂಬೆಳಗ್ಗೆ ನಮಾಜ್ ಮಾಡಬಹುದೇ? ಬೆಳಕು ಹರಿಯುವ ಮೊದಲೇ 6 ಗಂಟೆಗೂ ಮುನ್ನ ಆ ಕೋಮಿನವರು ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಹನುಮಾನ್ ಚಾಲೀಸ್ ಹಾಕುವುದು ತಪ್ಪೇ? ಎಂದು ಜೋಶಿ ಪ್ರಶ್ನಿಸಿದರು.
ಜನ ಅರ್ಥ ಮಾಡಿಕೊಳ್ಳಲಿ
ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ಪರಾಕಾಷ್ಟೆ ತಲುಪಿದೆ. ರಾಜ್ಯದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ ಯಾವ ರಾಜ್ಯದಲ್ಲಿ ಇದ್ದೀರಿ? ಕೂಡಲೇ ಹನುಮಾನ್ ಚಾಲೀಸಾ ಆಡಿಯೊ ಹಾಕಿದ್ದ ಅಂಗಡಿಯಾತನ ಮೇಲೆ ಹಾಕಿರುವ ಎಫ್‌ಐಆರ್ ಅನ್ನು ಕೈ ಬಿಟ್ಟು, ಆತನನ್ನು ಪ್ರಕರಣದಿಂದ ಮುಕ್ತಗೊಳಿಸಿ ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.