Site icon Vistara News

Pralhad Joshi: ಸಚಿವ ಪ್ರಲ್ಹಾದ್‌ ಜೋಶಿ ವೀರಶೈವರನ್ನು ಕಡೆಗಣಿಸಿಲ್ಲ: ಶ್ರೀ ರುದ್ರಮುನಿ‌ ಸ್ವಾಮೀಜಿ ಸಮರ್ಥನೆ

Pralhad Joshi

ಹುಬ್ಬಳ್ಳಿ: ದಿಂಗಾಲೇಶ್ವರರು ಕೇವಲ ವೈಯಕ್ತಿಕ ಸ್ವಾರ್ಥಕ್ಕಾಗಿ ಸಚಿವ ಪ್ರಲ್ಹಾದ್‌ (Pralhad Joshi) ಜೋಶಿ ಅವರ ವಿರುದ್ಧ ಏನೇನೋ ಹೇಳುತ್ತಿದ್ದಾರೆ. ಧಾರವಾಡದಲ್ಲಿ ಸತತ ನಾಲ್ಕು ಬಾರಿ ಸಂಸದರಾಗಿ ಚುನಾಯಿತರಾದ ಜೋಶಿಯವರು ಯಾವುದೇ ಸಮುದಾಯವನ್ನು ತುಳಿದು ಮೇಲೆ ಬಂದವರಲ್ಲ. ಅವರದ್ದೇ ಆದ ವರ್ಚಸ್ಸು, ಅಭಿವೃದ್ಧಿ ಕೆಲಸ ಕಾರ್ಯಗಳಿಂದಲೇ ಪ್ರಧಾನಿ ಮೋದಿ ಅವರ ಆಪ್ತರಾಗಿ, ಕೇಂದ್ರ ಮಟ್ಟದ ಮುಂಚೂಣಿ ನಾಯಕರಾಗಿ ಮುನ್ನಲೆಗೆ ಬಂದಿದ್ದಾರೆ ಎಂದು ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ‌ ಸ್ವಾಮೀಜಿ ಹೇಳಿದ್ದಾರೆ.

ಪ್ರಲ್ಹಾದ್‌ ಜೋಶಿ ಲಿಂಗಾಯತರನ್ನು ತುಳಿದಿದ್ದಾರೆ ಎಂಬ ದಿಂಗಾಲೇಶ್ವರ ಶ್ರೀಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ವೀರಶೈವ ಸಮಾಜ ಮಾತ್ರವಲ್ಲ, ಯಾವೊಬ್ಬ ವ್ಯಕ್ತಿಯನ್ನು ಕಡೆಗಣಿಸಿದವರಲ್ಲ ಎಂದು ತಿಳಿಸಿದ್ದಾರೆ.

ರಾಜಕೀಯದಲ್ಲಿ ಮೂಗು ತೂರಿಸುತ್ತಿರುವ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಲ್ಹಾದ್ ಜೋಶಿಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ‌, ಇದು ಸರಿಯಲ್ಲ. ಜೋಶಿ ಅವರು ವೀರಶೈವರಿಗೆ ಪ್ರಾಶಸ್ತ್ಯ ನೀಡಿಲ್ಲ ಎಂಬ ದಿಂಗಾಲೇಶ್ವರರ ಆರೋಪದಲ್ಲಿ ಹುರುಳಿಲ್ಲ. ಅಲ್ಲದೇ, ಅವರ ಕ್ಷೇತ್ರ ಬದಲಾವಣೆ ಚರ್ಚೆಯೂ ಅಪ್ರಸ್ತುತ ಎಂದು ಷಡಕ್ಷರಿ ಶ್ರೀ ಹೇಳಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಸ್ವಾರ್ಥಕ್ಕಾಗಿ ಹೀಗೆಲ್ಲ ಮಾಡಬಾರದು. ಒಂದು ವೇಳೆ ಲೋಕಸಭೆಗೆ ಸ್ಪರ್ಧಿಸುವುದೇ ಆದರೆ, ತಮ್ಮ ಮಠದಲ್ಲಿ ಸಭೆ, ಚರ್ಚೆ ನಡೆಸಿಕೊಳ್ಳಲಿ. ಹುಬ್ಬಳ್ಳಿ ಮೂರುಸಾವಿರ ಮಠದ ಪಾವಿತ್ರ್ಯತೆ ಹಾಳುಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ | Lok Sabha Election 2024: ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ಆಕಾಶದಲ್ಲಿ ಹಾರಾಡೋಕೂ ಗೊತ್ತೆಂದ ಗಾಯತ್ರಿ

ರಾಜಕಿಯ ಅಖಾಡಕ್ಕೆ ಮುರುಸಾವಿರ ಮಠ ಬಳಕೆ ಏಕೆ?

ದಿಂಗಾಲೇಶ್ವರ ಸ್ವಾಮೀಜಿ ತಮ್ಮ ರಾಜಕೀಯ ಅಖಾಡಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠವನ್ನು ಬಳಸಿಕೊಂಡಿದ್ದು ಅಕ್ಷಮ್ಯ ಎಂದೂ ಷಡಕ್ಷರಿ ಶ್ರೀ ವಿರೋಧಿಸಿದ್ದಾರೆ. ತಾವು ರಾಜಕೀಯಕ್ಕೆ ಧುಮುಕುವುದಾದರೆ ತಮ್ಮ ಮಠದಲ್ಲಿ ಅಥವಾ ಹುಬ್ಬಳ್ಳಿ ಪ್ರೆಸ್ ಕ್ಲಬ್, ಕಲ್ಯಾಣ ಮಂಟಪ ಹೀಗೆ ಬೇಕಾದಷ್ಟು ಸ್ಥಳಗಳಿದ್ದವು. ಆದರೆ, ಅದೆಲ್ಲವನ್ನು ಬಿಟ್ಟು ಮುರುಸಾವಿರ ಮಠದಲ್ಲಿ 40-50 ಸ್ವಾಮೀಜಿಗಳ ಜತೆ ಸುದ್ಧಿಗೋಷ್ಠಿ ನಡೆಸಿದ್ದು ಏಕೆ? ಎಂದು ಷಡಕ್ಷರಿ ಮಠದ ಶ್ರೀಗಳು ಪ್ರಶ್ನಿಸಿದ್ದಾರೆ.

Exit mobile version