Site icon Vistara News

Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

regional Laboratory sanctioned to Kims Hubballi

ನವದೆಹಲಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ ಕೇಂದ್ರ ಸರ್ಕಾರ (Central Government) ಅತ್ಯಾಧುನಿಕ “ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ” ಕ್ಕೆ ಮಂಜೂರಾತಿ ನೀಡಿದೆ.

ಉತ್ತರ ಕರ್ನಾಟಕದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಹುಬ್ಬಳ್ಳಿಯ ‘ಕಿಮ್ಸ್‌’ ನಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಇದೀಗ ಅಸ್ತು ಎಂದಿದೆ.

ಇದನ್ನೂ ಓದಿ: KAS Exam: ಕೆಎಎಸ್‌ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಪರೀಕ್ಷೆ ಬರೆಯಲು ಒಂದು ಬಾರಿ ಹೆಚ್ಚುವರಿ ಅವಕಾಶ

ಕಿಮ್ಸ್‌ನಲ್ಲಿ ಅತ್ಯಾಧುನಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನವದೆಹಲಿ (NCDC) ಮತ್ತು ಕಿಮ್ಸ್‌ ನಿರ್ದೇಶಕರ ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.

ಸಚಿವ ಪ್ರಲ್ಹಾದ್‌ ಜೋಶಿ ಪ್ರಯತ್ನದ ಫಲ

ಹುಬ್ಬಳ್ಳಿಯಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕಾಗಿ ಜೆ.ಪಿ. ನಡ್ಡಾ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಧಾರವಾಡ ಸಂಸದರು ಆಗಿರುವ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಮನವಿ ಮಾಡಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಇಂದು ಪ್ರಯೋಗಾಲಯ ಸ್ಥಾಪನೆ ಸಾಕಾರಗೊಂಡಿದೆ.

ದೇಶದ 8 ಕಡೆ ಶಾಖೆ

ಪ್ರಸ್ತುತ, ದೇಶದ 8 ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಶೋಧನಾ ಮತ್ತು ರೋಗ ನಿಯಂತ್ರಣ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ಸ್ಥಾಪನೆಗೂ ಇದೀಗ ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ತಮ್ಮ ಪ್ರಸ್ತಾಪ, ಮನವಿಯನ್ನು ಪುರಸ್ಕರಿಸಿ ಪ್ರಧಾನಿ ಮೋದಿ ಅವರು ಪ್ರಸ್ತುತ ಪ್ರಾದೇಶಿಕ ಪ್ರಯೋಗಾಲಯವನ್ನು ಮಂಜೂರು ಮಾಡಿದ್ದಾರೆ. ಇದಕ್ಕಾಗಿ ಕಿಮ್ಸ್ ಅವರಣದಲ್ಲಿ 27 ಗುಂಟೆ ಪ್ರತ್ಯೇಕ ಜಾಗವನ್ನೂ ಮೀಸಲಿರಿಸಲಾಗಿದೆ. ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತವಾದ ಈ ಪ್ರಯೋಗಾಲಯದ ಶಾಖೆಗೆ ಅಂದಾಜು 16 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದೂ ಸಚಿವ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: T20 World Cup 2024 : ಭಾರತ- ಬಾಂಗ್ಲಾ ಸೂಪರ್​ 8 ಪಂದ್ಯಕ್ಕೆ ಮಳೆ ಅಡಚಣೆ ಇದೆಯೇ?

ಎಚ್ 1 ಎನ್ I (H1N1), ಕೊರೋನಾ, ಚಿಕನ್ ಗುನ್ಯಾ, ನಿಫಾದಂತಹ ಸಾಂಕ್ರಾಮಿಕ ರೋಗಗಳು ಬದಲಾದ ರೂಪದಲ್ಲಿ ಮತ್ತೆ ಮತ್ತೆ ಹರಡುತ್ತಿರುವ ಕಾರಣ ಉತ್ತರ ಕರ್ನಾಟಕ ಭಾಗದಲ್ಲಿ ಈ ಪ್ರಯೋಗಾಲಯದ ಅಗತ್ಯತೆ ಇತ್ತು ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.

ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯಕ್ಕಾಗಿ ದೂರದ ಪ್ರದೇಶಗಳಿಗೆ ಅಲೆಯುವುದರಿಂದ ರೋಗ ಪೀಡಿತರ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಅಲ್ಲದೇ, ಕೆಲವೊಮ್ಮೆ ಪ್ರಾಣ ಹಾನಿ ಸಂಭವವನ್ನೂ ತಳ್ಳಿ ಹಾಕುವಂತಿರಲಿಲ್ಲ. ಹೀಗಾಗಿ ಈ ಅಂಶಗಳನ್ನು ಆರೋಗ್ಯ ಸಚಿವರಾಗಿದ್ದ ನಡ್ಡಾ ಮತ್ತು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರ ಪರಿಣಾಮ ಇಂದು ಪ್ರಯೋಗಾಲಯ ಸ್ಥಾಪನೆ ಒಡಂಬಡಿಕೆ ಸಾಫಲ್ಯ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಸಾಸ್ಟಕ್ಟರ್ ಮಿಶನ್ ಅಡಿ BSL3 ಫೆಸಿಲಿಟಿಸ್ ಮಾದರಿಯ ಒಟ್ಟು 13 ಹೊಸ (4 ಮೊಬೈಲ್ ಮತ್ತು 9 ಸಾಂಸ್ಥಿಕ) ಪ್ರಯೋಗಾಲಯಗಳನ್ನು ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಪೈಕಿ ಹುಬ್ಬಳ್ಳಿಯ ಕಿಮ್ಸ್ ಕೂಡಾ ಸೇರಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

ಶೀಘ್ರ ಭೂಮಿಪೂಜೆ

ಹುಬ್ಬಳ್ಳಿಯಲ್ಲಿ ಶೀಘ್ರದಲ್ಲೇ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಶಾಖೆ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನೆರವೇರಲಿದೆ ಎಂದು ತಿಳಿಸಿರುವ ಅವರು, ಹುಬ್ಬಳ್ಳಿಗೆ ಈ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ, ಸಚಿವ ಪ್ರಲ್ಹಾದ್‌ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

Exit mobile version