Site icon Vistara News

Karnataka Politics : ಎಚ್‌ಡಿಕೆ ನೈಸ್‌ ದಾಖಲೆ ಕೊಟ್ರೆ ತನಿಖೆ ಎಂದ ಜೋಶಿ; ಪ್ರತ್ಯುತ್ತರ ಕೊಡುವೆನೆಂದ ಡಿಕೆಶಿ

DK Shivakumar HD Kumaraswamy and Pralhad Joshi

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಹಲವಾರು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, “ನೈಸ್‌” ವಿವಾದ (Nice controversy) ತಾರಕಕ್ಕೇರಿದೆ. ಬಿಎಂಐಸಿ ಯೋಜನೆಯ ಅವ್ಯವಹಾರದ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಸಲ್ಲಿಸುವುದಾಗಿ ಹೇಳಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್‌ ಕೆಂಡವಾಗಿದೆ. ಅಲ್ಲದೆ, ನೈಸ್‌ ಸಂಸ್ಥೆ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಸೇರಿಕೊಂಡಿದ್ದಾರೆ ಎಂಬ ಆರೋಪಕ್ಕೆ ಡಿಕೆಶಿ ಖಡಕ್‌ ಪ್ರತಿಕ್ರಿಯೆ ನೀಡಿದ್ದು, ಎಚ್‌ಡಿಕೆಗೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ಗುಡುಗಿದ್ದಾರೆ. ಇನ್ನು ಈ ಸಂಬಂಧ ಕುಮಾರಸ್ವಾಮಿ ಅವರು ದಾಖಲೆ ಕೊಟ್ಟರೆ ಸೂಕ್ತ ತನಿಖೆ ನಡೆಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Union Minister Pralhad Joshi) ಹೇಳಿರುವುದು ಇಡೀ ಪ್ರಕರಣಕ್ಕೆ ರಾಜಕೀಯ ಬಣ್ಣ ಸಿಕ್ಕಂತಾಗಿದೆ.

ರಾಜ್ಯದಲ್ಲೀಗ ನೈಸ್‌ ಸಂಸ್ಥೇಯ (ಬೆಂಗಳೂರು – ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಆಗಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ಶನಿವಾರ (ಆಗಸ್ಟ್‌ 5) ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಗುಡುಗಿದ್ದರು. ಬ್ರಾಂಡ್‌ ಬೆಂಗಳೂರು ಬಗ್ಗೆ ಮಾತನಾಡುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಈಗ ಪೆರಿಫೆರಲ್‌ ರಿಂಗ್‌ ರೋಡ್‌ ಮಾಡಲು ನೈಸ್‌ ಜತೆ ಸೇರಿಕೊಂಡಿದ್ದಾರೆ. ಈ ಮೂಲಕ ಅವರು ಬಡವರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ ಎಂದು ಆರೋಪ ಮಾಡಿದ್ದರು.

ಇದನ್ನೂ ಓದಿ: Karnataka Politics : ಮೇಲ್ಮನೆ ನಾಮನಿರ್ದೇಶನ; ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಹೆಸರು ಫೈನಲ್

ನೈಸ್‌ ಹಗರಣದ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಅವರು 13000 ಕೋಟಿ ಮೌಲ್ಯದ ಜಾಗವನ್ನು ಮರಳಿ ಪಡೆಯಬೇಕು. ಅಲ್ಲದೆ, ನೈಸ್ ಹಗರಣದ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೊಡಲು ತೀರ್ಮಾನ ಮಾಡಿದ್ದೇನೆ. ಈ ಸಂಬಂಧ ಅವರ ಭೇಟಿಗೆ ಸಮಯ ಕೇಳಿದ್ದೇನೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು.

ತಕ್ಕ ಉತ್ತರ ಕೊಡುವೆ: ಡಿ.ಕೆ. ಶಿವಕುಮಾರ್

ಎಚ್.ಡಿ. ಕುಮಾರಸ್ವಾಮಿ ಅವರು ನೈಸ್, ಬಿಡಿಎ, ಬಿಬಿಎಂಪಿ ಅಕ್ರಮ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌,‌ ಕುಮಾರಸ್ವಾಮಿಗೆ ಕೇವಲ ಮಾಧ್ಯಮಗಳ ಜತೆ ಮಾತಡಿದರೆ ಮಾತ್ರ ಸಾಲದು. ಈಗ ಪ್ರಧಾನ ಮಂತ್ರಿಗಳವರೆಗೂ ಹೋಗಿದ್ದಾರೆ. ಅದಕ್ಕೆ ತಕ್ಕಂತೆ ನಾನು ಉತ್ತರ ಕೊಡಬೇಕು. ನಾನು ಸರಿಯಾದ ಉತ್ತರ ಕೊಡುತ್ತೇನೆ ಎಂದು ಖಡಕ್‌ ಆಗಿಯೇ ಹೇಳಿದ್ದಾರೆ.

ದಾಖಲೆ ಕೊಟ್ಟರೆ ಪರಿಶೀಲಿಸಿ ಕ್ರಮ: ಪ್ರಲ್ಹಾದ್‌ ಜೋಶಿ

ನೈಸ್ ರಸ್ತೆ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಅವರು, ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅವರು ದಾಖಲೆಗಳನ್ನು ಕೊಡಲಿ. ಅದರ ಬಗ್ಗೆ ಸೂಕ್ತವಾದ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಧಾರವಾಡದ ಅಳ್ನಾವರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಯೋಜನೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆಗಬೇಕು. ಅರ್ಧಕ್ಕಿಂತ ಹೆಚ್ಚು ಭೂಮಿ ಕೊಡಬೇಕು. ಆಗ ಕಾಮಗಾರಿ ಆರಂಭಿಸಬಹುದು. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿ ಕೊಡಬೇಕು. ಆದರೆ, ರಸ್ತೆ ಮಾಡುವುದಕ್ಕೇ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡುವುದೇ ಸಾಕಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ. ರಸ್ತೆ, ಮೂಲಭೂತ ಸೌಲಭ್ಯಕ್ಕೆ ಇವರೇನು ಹಣ ಕೊಡುವ ಖಚಿತತೆ ಇಲ್ಲ. ವರ್ಗಾವಣೆ ದಂಧೆಗೆ ಇಳಿದಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಆರೋಪಿಸಿದರು.

ಎಚ್‌ಡಿಕೆಯದ್ದು ಗಾಳಿಯಲ್ಲಿ ಗುಂಡು: ಸಲೀಂ ಅಹ್ಮದ್

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿ, ಎಚ್‌.ಡಿ., ಕುಮಾರಸ್ವಾಮಿ ಪ್ರವಾಸ ಮಾಡಿ ಬಂದಿದ್ದಾರೆ. ವಿಧಾನಸಭೆಯಲ್ಲಿ ಪೆನ್‌ಡ್ರೈವ್ ತೋರಿಸಿದರು. ಆದರೆ, ಏನು ಮಾಡಿದರು? ಅವರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಕೊಡಲಿ, ತನಿಖೆ ಮಾಡುತ್ತೇವೆ ಎಂದು ಹೇಳಿದರು. ಇನ್ನು ನೈಸ್ ಅಕ್ರಮ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅದೆಲ್ಲ ಚರ್ಚೆಯ ಹಂತದಲ್ಲಿದೆ ಎಂದಷ್ಟೇ ಉತ್ತರಿಸಿದರು.

ಭಗ್ನಪ್ರೇಮಿಯಂತೆ ವ್ಯಗ್ರರಾಗಿರುವ ಎಚ್‌ಡಿಕೆ: ದಿನೇಶ್ ಗುಂಡೂರಾವ್

ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಎಚ್‌ಡಿಕೆಯವರ ನಿದ್ರೆ-ನೆಮ್ಮದಿ ಹಾರಿ ಹೋಗಿದೆ‌.

ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತಿರುವ ಎಚ್‌ಡಿಕೆ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Karnataka Politics : ರಾಜ್ಯ ಸರ್ಕಾರಕ್ಕೆ ಬಿಜೆಪಿ ಮೂರನೇ ಬಾಣ;‌ ಕೃಷಿ ನೀತಿ ವಿರುದ್ಧ ಜನಾಂದೋಲನ

ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ? ಎಚ್‌ಡಿಕೆಯವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಒಮ್ಮೆ ಪೆನ್‌ಡ್ರೈವ್ ತೋರಿಸುತ್ತಾರೆ, ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಯವರ ಕೈಯನ್ನು ನಾವ್ಯಾರೂ ಕಟ್ಟಿ ಹಾಕಿಲ್ಲ. ಎಚ್‌ಡಿಕೆಯವರು ಪದೇ ಪದೆ ತೋಳ ಬಂತು ತೋಳದ ಕಥೆಯ ಕಥಾನಾಯಕನ ರೀತಿ ವರ್ತಿಸಿದರೆ ಹೆದರುವವರು ಯಾರು? ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ‘ಕಿಂಗ್ ಮೇಕರ್’ ಆಗುವ ಕನಸು ಕಂಡಿದ್ದರು. ಆದರೆ, ಜನರು ಚುನಾವಣೆಯಲ್ಲಿ ಆ ಕನಸನ್ನು ನುಚ್ಚುನೂರು ಮಾಡಿದರು. ಕನಸು ಭಗ್ನಗೊಂಡ ಎಚ್‌.ಡಿ. ಕುಮಾರಸ್ವಾಮಿ ಅವರು ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

Exit mobile version