Site icon Vistara News

Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

Pralhad Joshi

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಕೆಸರಲ್ಲೇ ಹೊರಳಾಡುತ್ತಿದೆ. ಅದರಿಂದ ಹೊರಗಡೆ ಬರುವ ಮಾನಸಿಕತೆಯೇ ಅದರ ನಾಯಕರಿಗೆ ಇಲ್ಲವಾಗಿದೆ. ಯುಪಿಎ ಕಾಲದಲ್ಲಿ ನಡೆದ ದೆಹಲಿಯ ಬಾಟ್ಲಾ ಹೌಸ್ ಪ್ರಕರಣದಲ್ಲಿ ಒಬ್ಬ ಉಗ್ರಗಾಮಿ ಮತ್ತು ಇನ್ಸ್‌ಪೆಕ್ಟರ್‌ ಮೋಹನ್ ಚಂದ್ ಶರ್ಮಾ ಹತರಾಗಿದ್ದರು. ಆದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಉಗ್ರ ಹತನಾಗಿದ್ದಕ್ಕೆ ಕಣ್ಣೀರಿಟ್ಟಿದ್ದರು ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಹುಬ್ಬಳ್ಳಿಯ ಎಂ.ಆರ್. ಸಾಖರೆ ಶಾಲಾ ಆವರಣದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ತುಷ್ಟೀಕರಣ ರಾಜಕಾರಣದ ಒಂದು ಭಾಗವಾಗಿಯೇ ಇದೆ. ಬಾಟ್ಲಾ ಹೌಸ್ ಪ್ರಕರಣದಲ್ಲಿ ಒಬ್ಬ ಅಮಾಯಕ ಮುಸಲ್ಮಾನ್ ಸತ್ತನೆಂದು ಸೋನಿಯಾ ಗಾಂಧಿ ರಾತ್ರಿಯಿಡಿ ನಿದ್ರೆ ಮಾಡದೇ ಕಣ್ಣೀರು ಹಾಕಿದ್ದರು. ಆದರೆ, ಇವರಿಗೆ ಒಬ್ಬ ಪೊಲೀಸ್ ಅಧಿಕಾರಿ ಪ್ರಾಣ ಬಿಟ್ಟಿರುವುದು ಗಣನೆಗೆ ಬರಲಿಲ್ಲ. ಉಗ್ರನ ಸಾವಿಗೆ ಕಣ್ಣೀರಿಟ್ಟ ನಾಯಕರು ಯಾರಾದರೂ ಇದ್ರೆ ಅದು ಸೋನಿಯಾ ಗಾಂಧಿ ಎಂದು ಜೋಶಿ ಹೇಳಿದರು.

ಇದನ್ನೂ ಓದಿ | Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

ಮತಿಗೆಟ್ಟ ರಾಹುಲ್‌

ಯನಾಡಲ್ಲಿ ಕಣಕ್ಕಿಳಿದ ರಾಹುಲ್ ಗಾಂಧಿ ಕಾಂಗ್ರೆಸ್ ಧ್ವಜ ಬಿಟ್ಟು ಮುಸ್ಲಿಂ ಲೀಗ್ ಧ್ವಜ ಹಿಡಿದು ನಾಮಪತ್ರ ಸಲ್ಲಿಸಿ ಬಂದಿದ್ದಾರೆ. ರಾಹುಲ್ ಒಬ್ಬ ಮತಿಗೆಟ್ಟ, ಧೃತಿಗೆಟ್ಟ, ನಾಚಿಕೆಗೆಟ್ಟ ನಾಯಕ. ದೇಶವನ್ನು ತುಂಡು ಮಾಡಿದ ಮುಸ್ಲಿಂ ಲೀಗ್, ದೇಶದ ಹಿತ ಬಯಸದ ಮುಸ್ಲಿಂ ಲೀಗ್ ಅದು. ಅದರ ಧ್ವಜ ಹಿಡಿಯಲು ರಾಹುಲ್ ಬಾಬಾಗೆ ಕಿಂಚಿತ್ತೂ ನಾಚಿಕೆ ಆಗಲಿಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲೂ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನೇ ಅನುಸರಿಸುತ್ತಿದೆ. ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ಪ್ರತಿಕ್ರಿಯೆ, ವರ್ತನೆ ನಿಜಕ್ಕೂ ದಂಗು ಬಡಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಆರ್ಟಿಕಲ್ 370 ಕಿತ್ತೆಸೆದರೆ, ಕಾಂಗ್ರೆಸ್ ಮತ್ತೆ ತರುತ್ತೇವೆ ಎನ್ನುತ್ತಿದೆ

ನರೇಂದ್ರ ಮೋದಿ ಅವರು, ಉಗ್ರರಿಗೆ ಆಶ್ರಯದಂತೆ ಇದ್ದ ಆರ್ಟಿಕಲ್ 370ಯನ್ನು ಕಿತ್ತೆಸೆದರೆ, ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಮತ್ತೆ ತರುತ್ತೇವೆ ಎನ್ನುತ್ತಿದೆ. ಇವರ ತುಷ್ಟೀಕರಣ ರಾಜಕಾರಣ ಪರಾಕಾಷ್ಟೆ ತಲುಪಿದೆ ಎಂದು ಹರಿ ಹಾಯ್ದರು.

ಮೂಲಭೂತವಾದ ಇರಬಾರದು

ದೇಶ ಅಭಿವೃದ್ಧಿ ಸಾಧಿಸಬೇಕಾದರೆ ಮೂಲಭೂತವಾದಿತನ ಇರಬಾರದು. ಪ್ರಧಾನಿ ನರೇಂದ್ರ ಮೋದಿ ಅವರು ಮೂಲಭೂತವಾದವನ್ನು ತೊಡೆದು ಹಾಕುತ್ತಿದ್ದಾರೆ. ದೇಶದಲ್ಲಿ ಸಂಪೂರ್ಣ ಉಗ್ರ ಚಟುವಟಿಕೆಗಳಿಗೆ ಕೊನೆಗಾಣಿಸಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಜತೆಗೆ ಕರ್ನಾಟಕವನ್ನು, ಹುಬ್ಬಳ್ಳಿ – ಧಾರವಾಡವನ್ನು ಅಭಿವೃದ್ಧಿಯಲ್ಲಿ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತೇವೆ. ಇದಕ್ಕಾಗಿ ಬಿಜೆಪಿಯನ್ನು ಮತ್ತೆ ಬೆಂಬಲಿಸಿ ಎಂದು ಸಚಿವ ಜೋಶಿ ಕರೆ ನೀಡಿದರು.

ಇದನ್ನೂ ಓದಿ | The Great Khali : ರಾಹುಲ್ ಗಾಂಧಿ ಸುಳ್ಳ ಎಂದು ಕರೆದ ಬಿಜೆಪಿ ನಾಯಕ ದಿ ಗ್ರೇಟ್ ಖಲಿ, ಇಲ್ಲಿದೆ ವಿಡಿಯೊ

ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಮೇಯರ್ ವೀಣಾ, ಸೀಮಾ ಮಸೂತಿ, ಅಮೃತ ದೇಸಾಯಿ ಉಪಸ್ಥಿತರಿದ್ದರು. ಸಮಾವೇಶ ಆರಂಭಕ್ಕೂ ಮುನ್ನ ನೇಹಾ ಹಿರೇಮಠಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Exit mobile version