ಬಾಗಲಕೋಟೆ: ಚುನಾವಣೆ (Karnataka Election 2023) ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಪಸ್ವರ ಎತ್ತಿದ್ದು, ಮುಸ್ಲಿಂ ಖಬರಸ್ತಾನ್‌ಗಳ ಅಭಿವೃದ್ಧಿಗೋಸ್ಕರ ೧೦ ಕೋಟಿ ರೂಪಾಯಿ ಘೋಷಣೆ ಮಾಡಿರುವುದು ಖಂಡನೀಯವಾಗಿದೆ. ಹಾಗಾದರೆ ಇವರಿಗೆ ಹಿಂದು ರುದ್ರಭೂಮಿ ಏಕೆ ಕಣ್ಣಿಗೆ ಕಾಣುವುದಿಲ್ಲ. ಈ ಬಜೆಟ್‌ನಲ್ಲಿನ ನಾನು ಎರಡು ವಿಷಯವನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಕ್ಫ್ ಬೋರ್ಡ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಇದೆ. ವಕ್ಫ್ ಬೋರ್ಡ್ ಇರುವುದೇ ಮುಸ್ಲಿಂ ಸಮುದಾಯದವರ ಮಸೀದಿ, ದರ್ಗಾ, ಸ್ಮಶಾನ ಸೇರಿದಂತೆ ಅವರ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲು ಇರುವಂಥದ್ದಾಗಿದೆ. ಈಗ ಮತ್ತೆ ಹೆಚ್ಚುವರಿಯಾಗಿ ೧೦ ಕೋಟಿ ರೂಪಾಯಿ ಕೊಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನೆ ಮಾಡಿದರು.
ಇದಲ್ಲದೆ, ಮುಸ್ಲಿಂರಿಗಾಗಿ ವಸತಿ ಶಾಲೆಗಳು ಹಾಗೂ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ೯೬ ಕೋಟಿ ರೂಪಾಯಿ ಅನುದಾನವನ್ನು ನೀಡಿರುವುದು ಖಂಡನೀಯ. ಈಗಾಗಲೇ ಉರ್ದು ಶಾಲೆಗಳು ಬೇಕಾದಷ್ಟಿವೆ. ಅಂತಹ ಸಮಯದಲ್ಲಿ ಓಲೈಸುವಂತಹ ರಾಜಕಾರಣ ಬಿಜೆಪಿಗೆ ಶೋಭೆ ತರುವಂಥದ್ದಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election 2023: ಮಂಡ್ಯ ಉಸ್ತುವಾರಿ ನನಗೆ ಬೇಡ; ಯಾರನ್ನು ಬೇಕಾದರೂ ಮಾಡಿ ಎಂದು ಸಿಎಂ ವಿರುದ್ಧ ನಾರಾಯಣಗೌಡ ಗರಂ
ಬೆಳಗಾವಿ ಲೋಕಸಭೆ ಟಿಕೆಟ್ ಕೇಳಿದರೂ ಕೊಡಲಿಲ್ಲ- ಬೇಸರ
ಬೆಳಗಾವಿ ಸಂಸದ, ಕೇಂದ್ರ ಸಚಿವ ಸುರೇಶ್ ಅಂಗಡಿಯವರು ನಿಧನ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೆ. ಬಿಜೆಪಿಯ ವರಿಷ್ಠರ ಭೇಟಿಗಾಗಿ ಮೂರು ಮೂರು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ. ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್ ಹಾಗೂ ಸ್ವಾಮೀಜಿಗಳ ಕಡೆಗೆ ಹೋಗಿ ಬಂದಿದ್ದೆ. ಬಹಳ ದಯನೀಯವಾಗಿ ನಾನು ಟಿಕೆಟ್ ಕೇಳಿದ್ದೆ. ಬೆಳಗಾವಿ ನನ್ನ ಕರ್ಮ ಕ್ಷೇತ್ರವಾಗಿದ್ದು, ನನ್ನ ಹೋರಾಟ ಆರಂಭವಾಗಿದ್ದು ಅಲ್ಲಿಂದಲೇ ಎಂದೂ ಹೇಳಿದ್ದೆ. ಇನ್ನು ಮೂರೇ ವರ್ಷ ಸಮಯ ಇದ್ದು, ನನಗೂ 65 ವರ್ಷ ವಯಸ್ಸು ಆಗಿದೆ, ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದೆ. ಅಲ್ಲದೆ, ನಾನು ಗೆದ್ದು ತೋರಿಸುತ್ತೇನೆ. ಬೆಳಗಾವಿಯನ್ನು ಮಾದರಿಯಾಗಿ ಮಾಡಬೇಕೆಂಬ ಕನಸಿದೆ ಎಂದು ಹೇಳಿದ್ದೆ. ಆದರೆ, ಕ್ಯಾರೆ ಎಂದು ಹೇಳಲಿಲ್ಲ. ಇನ್ನು ಮೇಲೆ ಇವರ ಮನೆ ಬಾಗಿಲೆಗೆ ಹೋಗೋದು ಬೇಡ ಎಂದು ಅಂದೇ ನಿಶ್ಚಯ ಮಾಡಿದ್ದೆ ಎಂದು ಬಿಜೆಪಿ ಹಾಗೂ ಆರ್‌ಎಸ್ಎಸ್ ಮುಖಂಡರ ನಡೆ ವಿರುದ್ಧ ಮುತಾಲಿಕ್ ಬೇಸರ ಹೊರಹಾಕಿದ್ದಾರೆ. ಅಲ್ಲದೆ, ಮುತಾಲಿಕ್‌ಗೆ ಟಿಕೆಟ್ ಕೊಡದೇ ಇರೋದಕ್ಕೆ ಏನು ಪರಿಣಾಮ ಆಗುತ್ತದೆ ಎನ್ನುವುದು ಈಗ ಗೊತ್ತಾಗಲಿದೆ ಎಂದು ಹೇಳಿದರು.