ಉಡುಪಿ: ಈ ಬಾರಿ ೨೫ ಮಂದಿ ಕಟ್ಟಾ ಹಿಂದು ಕಾರ್ಯಕರ್ತರಿಗೆ, ಹಿಂದು ಸ್ವಾಮೀಜಿಗಳಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸುತ್ತಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod muthalik) ಅವರು ಹೊಸದೊಂದು ಬೇಡಿಕೆ ಕಂ ಮನವಿ ಮುಂದಿಟ್ಟಿದ್ದಾರೆ.
ತಮ್ಮ ಟೀಮ್‌ಗೆ ಟಿಕೆಟ್ ಕೊಟ್ಟರೂ ಕೊಡದಿದ್ದರೂ ಸ್ಪರ್ಧೆಗೆ ಇಳಿಯೋದು ಗ್ಯಾರಂಟಿ ಎಂದು ಹಠ ತೊಟ್ಟಿರುವ ಪ್ರಮೋದ್ ಮುತಾಲಿಕ್ ಅವರು ಇಂಧನ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಅವರ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ. ಅದೇನೆಂದರೆ, ʻʻಸುನಿಲ್ ಕುಮಾರ್ ಅವರೇ ಕಾರ್ಕಳ ಕ್ಷೇತ್ರ ನನಗೆ ಬಿಟ್ಟುಕೊಡಿ. ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ!ʼ ಎನ್ನುವುದು.
ಮಂಗಳವಾರ ಕಾರ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ʻʻನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆʼʼ ಎಂದು ಸವಾಲು ಹಾಕಿದರು.
ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ
ʻʻನಾನು ಕಾರ್ಕಳದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ. ಮುಖಕ್ಕೆ ಮಸಿ ಬಳಿಸಿಕೊಂಡಿದ್ದೇನೆ, ಅದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ. ಸಂಘವು ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆʼʼ ಎಂದು ಹೇಳಿದರು.
ʻʻಹಿಂದುಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ, ಆದ್ದರಿಂದ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿʼʼ ಎಂದು ಪ್ರಮೋದ್ ಮುತಾಲಿಕ್ ಅವರು ಸಚಿವ ಸುನಿಲ್ ಕುಮಾರ್‌ಗೆ ಮನವಿ ಮಾಡಿದರು.
ಕಾರ್ಕಳದಿಂದಲೇ ಸ್ಪರ್ಧೆ ಎಂದಿದ್ದ ಸುನಿಲ್ ಕುಮಾರ್
ಈ ನಡುವೆ, ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆಯ ಸುದ್ದಿ ಹರಡುತ್ತಿದ್ದಂತೆಯೇ ಸುನಿಲ್ ಕುಮಾರ್ ಅವರು ಕಾರ್ಕಳದಿಂದ ಸ್ಪರ್ಧೆ ಮಾಡುವುದಿಲ್ಲ, ಬೇರೆ ಕಡೆ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಹರಡುತ್ತಿದ್ದವು. ಈ ಬಗ್ಗೆ ಆಗಲೇ ಸ್ಪಷ್ಟೀಕರಣ ನೀಡಿರುವ ಸುನಿಲ್ ಕುಮಾರ್ ಯಾವ ಕಾರಣಕ್ಕೂ ಕಾರ್ಕಳ ಬಿಟ್ಟು ಬೇರೆ ಕಡೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ | Karnataka Elections | ನನ್ನ ಸ್ಪರ್ಧೆ ಏನಿದ್ದರೂ ಕಾರ್ಕಳದಲ್ಲೇ, ಬೇರೆ ಎಲ್ಲೂ ಹೋಗಲ್ಲ ಎಂದ ಸಚಿವ ಸುನಿಲ್ ಕುಮಾರ್