Site icon Vistara News

Ram Mandir: ರಾಮ ಮಂದಿರದ ಗರ್ಭಗುಡಿ ಕಾಮಗಾರಿ ಮುಸ್ಲಿಮರಿಗೆ ನೀಡಿದ್ದು ಸರಿಯಲ್ಲ ಎಂದ ಮುತಾಲಿಕ್‌

Pramod Mutalik

ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀ ರಾಮ ಮಂದಿರದ (Ram Mandir) ಗರ್ಭ ಗುಡಿಯ (Sanctus Sanctorium) ಕಾಮಗಾರಿಯನ್ನು ಮುಸ್ಲಿಮರಿಗೆ ವಹಿಸಿರುವುದು ಸರಿಯಲ್ಲ. ಕೂಡಲೇ ಅದನ್ನು ಹಿಂಪಡೆಯಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮತಾಲಿಕ್‌ (Pramod Mutalik) ಆಗ್ರಹಿಸಿದ್ದಾರೆ.

ಅವರು ಮೈಸೂರಿನಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು (Pejawara Sri Vishwaprasanna theertha swameeji) ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದರು. ಪೇಜಾವರ ಶ್ರೀಗಳು ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿಯಾಗಿದ್ದಾರೆ.

ಶ್ರೀ ರಾಮ ಮಂದಿರದ ಗರ್ಭಗುಡಿಯ 14 ಬಾಗಿಲುಗಳನ್ನು ಮಕ್ರಾನಾ ಶಿಲೆಯಿಂದ ರಚಿಸಲಾಗುತ್ತಿದೆ. ಇದರ ಶಿಲ್ಪಕಲಾ ಕೆತ್ತನೆ ಕೆಲಸಗಳನ್ನು ಮುಸ್ಲಿಂ ಶಿಲ್ಪಿಗಳು ಮಾಡುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ರಾಜಸ್ಥಾನದ ಕೆಂಪು ಶಿಲೆಯನ್ನು ಮುಸ್ಲಿಮ್‌ ಗುತ್ತಿಗೆದಾರರು ಪೂರೈಸುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರಗಳನ್ನು ಪ್ರಸ್ತಾಪಿಸಿ ಮುತಾಲಿಕ್‌ ಆಕ್ಷೇಪ ಸೂಚಿಸಿದ್ದಾರೆ.

ಪ್ರಮೋದ್‌ ಮುತಾಲಿಕ್‌ ಅವರಿಂದ ಪೇಜಾವರ ಶ್ರೀಗಳಿಗೆ ಮನವಿ ಸಲ್ಲಿಕೆ

ʻʻಗರ್ಭ ಗುಡಿಯ ಕಾಮಗಾರಿಯನ್ನು ಮುಸ್ಲಿಮರಿಗೆ ಗುತ್ತಿಗೆ ನೀಡಿರೋದು ಸರಿಯಲ್ಲ‌. ದೇವಸ್ಥಾನಗಳನ್ನು ಭಗ್ನ ಮಾಡಿದವರಿಗೆ, ಗೋಮಾತೆಯನ್ನು ಭಕ್ಷಣೆ ಮಾಡುವವರಿಗೆ ಕಾಮಗಾರಿ ಕೊಟ್ಟಿದ್ದು ಸರಿಯಲ್ಲʼʼ ಎಂದು ಅವರು ಹೇಳಿದರು.

ʻʻ500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಅದೆಷ್ಟೋ ಯುದ್ಧ, ಕಾನೂನು ಸಮರ, ಜನಾಂದೋಲನಗಳಿಂದ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಅದೆಷ್ಟೋ ಹಿಂದುಗಳು ಇದಕ್ಕೆ ಬಲಿದಾನ ಮಾಡಿದ್ದಾರೆ. ಈಗ ನಿರ್ಮಾಣವಾಗುತ್ತಿರುವ ದೇವಸ್ಥಾನದ ಗರ್ಭಗುಡಿ ಕಾಮಗಾರಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಇದು ಅಕ್ಷಮ್ಯ ಅಪರಾಧ, ಬಹುದೊಡ್ಡ ತಪ್ಪು. ಇದರಿಂದ ಆ ಸ್ಥಳ ಅಪವಿತ್ರವಾಗಿದೆʼʼ ಎಂದು ಮುತಾಲಿಕ್‌ ಹೇಳಿದರು.

ಪ್ರಮೋದ್‌ ಮುತಾಲಿಕ್‌ ಮನವಿ

ʻʻಅಲ್ಲಾ ಒಬ್ಬನೇ ದೇವರು ಎನ್ನುವವರಿಗೆ ಗುತ್ತಿಗೆ ನೀಡಬಾರದಿತ್ತು. ಕೂಡಲೇ ಗುತ್ತಿಗೆ ರದ್ದು ಮಾಡಬೇಕು. ಎಲ್ಲಾ ಮುಸ್ಲಿಂ ಕಾರ್ಮಿಕರನ್ನು ಅಲ್ಲಿಂದ ಹೊರ ಹಾಕಬೇಕು. ಆ ಸ್ಥಳದ ಪಾವಿತ್ರ್ಯತೆ ಕಾಪಾಡಬೇಕುʼʼ ಎಂದು ಪೇಜಾವರ ಶ್ರೀಗಳಿಗೆ ಸಲ್ಲಿಸಿದ ಮನವಿಯಲ್ಲಿ ಮುತಾಲಿಕ್‌ ಒತ್ತಾಯಿಸಿದರು.

ವೇಣುಗೋಪಾಲ್‌ ಕೊಲೆ ಪೂರ್ವ ಯೋಜಿತ

ಇದೇ ವೇಳೆ, ಇತ್ತೀಚೆಗೆ ಕೊಲೆಯಾದ ತಿ. ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಅವರದು ಪೂರ್ವ ಯೋಜಿತ. ಇದರಲ್ಲಿ ವೈಯಕ್ತಿಕ ಕಾರಣ ಏನೂ ಇಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ʻʻಹಿಂದೂ ವಿರೋಧಿಗಳು ಈ ಕೊಲೆ ಮಾಡಿದ್ದಾರೆ. ಹನುಮ ಜಯಂತಿಯೇ ಈ ಕೊಲೆಗೆ ಕಾರಣ. ಹನುಮ ಜಯಂತಿಯನ್ನು ಸಹಿಸದ ಹಿಂದೂ ವಿರೋಧಿಗಳು ಈ ಕೊಲೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಪ್ರಕರಣದ ಕೊಲೆ ಆರೋಪಿಗಳನ್ನು ಜೈಲಿನಿಂದ ಬಿಡಿಸುವ ಕೆಲಸವು ನಡೆಯುತ್ತಿದೆʼʼ ಎಂದು ಹೇಳಿದ ಪ್ರಮೋದ್‌ ಮುತಾಲಿಕ್‌ ಅವರು, ʻʻಪ್ರಕರಣ ಮುಚ್ಚಿ ಹಾಕಲು ಶ್ರೀರಾಮಸೇನೆ ಬಿಡುವುದಿಲ್ಲʼʼ ಎಂದು ಘೋಷಿಸಿದರು. ವೇಣುಗೋಪಾಲ್ ಹೆಂಡತಿಗೆ ಸರ್ಕಾರಿ ಕೆಲಸ ಕೊಡಬೇಕು. 25 ಲಕ್ಷ ರೂ. ಪರಿಹಾರ ಕೂಡ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ : Ram Mandir: ಜನವರಿಯಲ್ಲಿ ರಾಮಮಂದಿರಕ್ಕೆ ಚಾಲನೆ; ಕಾರ್ಯಕ್ರಮದ ಉಸ್ತುವಾರಿ ಆರೆಸ್ಸೆಸ್ ಹೆಗಲಿಗೆ‌

Exit mobile version