ಧಾರವಾಡ: ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು (Muslim college) ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಕೆಲವು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ವಕ್ಫ್ ಬೋರ್ಡ್ ಸರಕಾರ ನೀಡುವ ಅನುದಾನದಲ್ಲಿ ಪ್ರತಿ ಕಾಲೇಜಿಗೆ ೨.೫ ಕೋಟಿ ರೂ. ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ವಕ್ಫ್ ಬೋರ್ಡ್ ಮತ್ತು ಸರಕಾರದ ನಡುವಿನ ಚರ್ಚೆಯ ವೇಳೆ ಈ ತೀರ್ಮಾನಕ್ಕೆ ಬರಲಾಗಿದ್ದು, ಸದ್ಯವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಲೇಜಿಗೆ ಶಿಲಾನ್ಯಾಸ ನೆರವೇರಿಸುವ ನಿರೀಕ್ಷೆ ಇದೆ.
ಈ ರೀತಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ ಕಾಲೇಜು ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಹೇಗಾದರೂ ಮಾಡಿ ತಡೆದೇ ಸಿದ್ಧ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ʻʻಬಿಜೆಪಿ ಸರಕಾರ 10 ಮುಸ್ಲಿಂ ಕಾಲೇಜುಗಳನ್ನು ತೆರೆಯಲು ನಿರ್ಧಾರ ಮಾಡಿದ್ದ ಖಂಡನೀಯ. ನನ್ನ ಬಲಿದಾನವಾದ್ರೂ ಸರಿ ಮುಸ್ಲಿಂ ಕಾಲೇಜು ಸ್ಥಾಪನೆ ಮಾಡಲು ಅವಕಾಶ ನೀಡುವುದಿಲ್ಲ. ಹಿಂದು ಸಂಘಟನೆಗಳ ಒಕ್ಕೂಟದಿಂದ ಇದರ ವಿರುದ್ಧ ಹೋರಾಟ ಮಾಡುತ್ತೇನೆʼʼ ಎಂದು ಅವರು ಧಾರವಾಡದಲ್ಲಿ ಹೇಳಿದರು.
ʻʻಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಬೆಂಬಲ ನೀಡಿದ ಕಾರಣಕ್ಕಾಗಿ ಇವರೂ ಅವರನ್ನು ಬೆಂಬಲಿಸುತ್ತಿದ್ದಾರೆ. ಸಂವಿಧಾನ ವಿರೋಧಿ ನೀತಿಗೆ ಕಾಂಗ್ರೆಸ್ ಸಪೋರ್ಟ್ ಮಾಡುತ್ತಿದೆ. ಅದರಂತೆ ಬಿಜೆಪಿಯೂ ನಡೆಯುವುದು ತಪ್ಪುʼʼ ಎಂದು ಮುತಾಲಿಕ್ ಹೇಳಿದರು.
ಪ್ರತ್ಯೇಕತೆ ಸರಿಯಲ್ಲ ಎಂದ ಮುತಾಲಿಕ್
ʻʻಮುಸ್ಲಿಂ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕ ಕಾಲೇಜು ಮಾಡುವುದು ಪ್ರತ್ಯೇಕತೆಯಾಗುತ್ತದೆ. ಹಾಗೆ ಮಾಡುವುದು ಸರಿಯಲ್ಲ. ಸರಕಾರ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು. ಎರಡು ಕಾಲೇಜಿಗೆ ಬಿಡುಗಡೆ ಮಾಡಿದ ಹಣವನ್ನು ವಾಪಸ್ ಪಡೆಯಬೇಕುʼʼ ಎಂದು ಮುತಾಲಿಕ್ ಆಗ್ರಹಿಸಿದರು.
ಪ್ರತ್ಯೇಕ ಕಾಲೇಜಿನ ನಿಜ ಉದ್ದೇಶವೇನು?
ಉಡುಪಿಯಲ್ಲಿ ಹಿಜಾಬ್ ವಿವಾದ ಉದ್ಭವಿಸಿದ ಬಳಿಕ ತರಗತಿಯಲ್ಲಿ ಹಿಜಾಬ್ ಧರಿಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿಷಯವಾಗಿ ಬಹುತೇಕ ಮುಸ್ಲಿಂ ಸಂಘ, ಸಂಸ್ಥೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಇದೀಗ ಚುನಾವಣೆಯ ಪರ್ವ ಕಾಲದಲ್ಲಿ ಸರ್ಕಾರವೇ ಮುತುವರ್ಜಿ ವಹಿಸಿ ಮುಸ್ಲಿಂ ಹೆಣ್ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆಗೆ ಮುಂದಾಗಿದೆ.
ಹಿಜಾಬ್ ವಿವಾದದ ಬಳಿಕ ರಾಜ್ಯಾದ್ಯಂತ ಸುಮಾರು ಏಳೆಂಟು ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರು ಒಂದೋ ಶಿಕ್ಷಣದಿಂದಲೇ ವಿಮುಖರಾಗಿದ್ದಾರೆ, ಇಲ್ಲವೇ ಮುಸ್ಲಿಂ ಆಡಳಿತದ ಕಾಲೇಜುಗಳಿಗೆ ಹಾಗೂ ಹಿಜಾಬ್‌ಗೆ ಅವಕಾಶವಿರುವ ಖಾಸಗಿ ಕಾಲೇಜುಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಎಲ್ಲೆಲ್ಲಿ ಕಾಲೇಜು ಸ್ಥಾಪನೆ?
ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭವಾಗಲಿದೆ.
ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯಲ್ಲೇ ಈ ಕಾಲೇಜುಗಳು ತಲೆ ಎತ್ತಲಿವೆ. ಶಂಕುಸ್ಥಾಪನೆ ನೆರವೇರಿದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರಥಮ ಪಿಯುಸಿ ಆರಂಭವಾಗಲಿದ್ದು, ನಂತರದ ವರ್ಷ ದ್ವಿತೀಯ ಪಿಯುಸಿ…ಹೀಗೆ ಪದವಿ ಹಂತದವರೆಗೆ ಇದನ್ನು ವಿಸ್ತರಿಸಲಾಗುತ್ತದೆ ಎಂದು ತಿಳಿದುಬಂದಿದೆ.